ಡಿಜಿಪಿ ನೇಮಕ ಶೀಘ್ರ ಪೂರ್ಣ- ಶೆಟ್ಟರ್

7

ಡಿಜಿಪಿ ನೇಮಕ ಶೀಘ್ರ ಪೂರ್ಣ- ಶೆಟ್ಟರ್

Published:
Updated:

ಬೆಂಗಳೂರು: `ರಾಜ್ಯಕ್ಕೆ ಕಾಯಂ ಪೊಲೀಸ್ ಮಹಾನಿರ್ದೇಶಕರನ್ನು ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ನಗರದ ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಸದ್ಯ ಹಂಗಾಮಿ ಪೊಲೀಸ್ ಮಹಾನಿರ್ದೇಶಕರಿದ್ದಾರೆ. ಆದ್ದರಿಂದ ಕಾಯಂ ಪೊಲೀಸ್ ಮಹಾನಿರ್ದೇಶಕರನ್ನು ನೇಮಿಸಲು ಸರ್ಕಾರ ಪ್ರಯತ್ನ ನಡೆಸಿದೆ~ ಎಂದರು.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಆಗಾಗ್ಗೆ ಚರ್ಚೆ ನಡೆಸಿ ಇಲಾಖೆಯನ್ನು ಬಲವರ್ಧನೆಗೊಳಿಸಲಾಗುತ್ತಿದೆ. ಸಿಬ್ಬಂದಿಯ ವಸತಿ ಸೌಕರ್ಯಕ್ಕೆ ಮತ್ತು ಇಲಾಖೆಯಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ ತಲಾ 50 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ನಕ್ಸಲ್ ಸಮಸ್ಯೆಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಕ್ಸಲರ ಶರಣಾಗತಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ನಕ್ಸಲರು ಶರಣಾಗಿಲ್ಲ. ಇದರಿಂದಾಗಿ ನಕ್ಸಲರ ವಿರುದ್ಧದ ಪೊಲೀಸ್ ಕಾರ್ಯಾಚರಣೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ನಾಗರಿಕರ ರಕ್ಷಣೆಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗೆ ಪೂರಕವಾಗಿರುವ ಪೊಲೀಸ್ ಇಲಾಖೆಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಈಶಾನ್ಯ ರಾಜ್ಯಗಳ ಜನರ ವಲಸೆ ಸಂದರ್ಭಗಳಲ್ಲಿ ರಾಜ್ಯ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಿಬ್ಬಂದಿ ಆಧುನಿಕ ತಂತ್ಞಜ್ಞಾನ ಅಳವಡಿಸಿಕೊಂಡು ಜನಸ್ನೇಹಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.ದೇಶದ ವಿವಿಧ ರಾಜ್ಯಗಳಲ್ಲಿ 2011-12ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಣೆ ವೇಳೆ 574 ಮಂದಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅಂತೆಯೇ ರಾಜ್ಯದಲ್ಲಿ ಐದು ಮಂದಿ ಪೊಲೀಸರು ಪ್ರಾಣ ತೆತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಜೀವವನ್ನೇ ಮುಡುಪಾಗಿಟ್ಟ ಇಂತಹ ಸಿಬ್ಬಂದಿಗೆ ನಾಗರಿಕ ಸಮಾಜ ಕೃತಜ್ಞತೆ ಸಲ್ಲಿಸಬೇಕು. ಅಲ್ಲದೇ, ಮೃತ ಸಿಬ್ಬಂದಿಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಬೇಕು ಎಂದು ತಿಳಿಸಿದರು.ಉಪಮುಖ್ಯಮಂತ್ರಿ ಆರ್.ಅಶೋಕ, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಲಾಲ್ ರೋಕುಮ ಪಚಾವೊ, ತರಬೇತಿ ವಿಭಾಗದ ಡಿಜಿಪಿ ಸುಶಾಂತ್ ಮಹಾಪಾತ್ರ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry