ಡಿನೋಟಿಫಿಕೇಷನ್ ಹಗರಣ: ಬಿಎಸ್‌ವೈ, ಪುತ್ರರಿಗೆ ಸಮನ್ಸ್

7

ಡಿನೋಟಿಫಿಕೇಷನ್ ಹಗರಣ: ಬಿಎಸ್‌ವೈ, ಪುತ್ರರಿಗೆ ಸಮನ್ಸ್

Published:
Updated:

ಬೆಂಗಳೂರು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಶನಿವಾರ ಸಮನ್ಸ್ ಜಾರಿಗೆ ಆದೇಶಿಸಿದೆ.ವಕೀಲ ಸಿರಾಜಿನ್ ಬಾಷಾ ದಾಖಲು ಮಾಡಿರುವ ಒಂದನೇ ದೂರಿಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶಿಸಿದ್ದಾರೆ.ಇವರ ಜೊತೆಗೆ ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಯಡಿಯೂರಪ್ಪಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್‌ಕುಮಾರ್, ಮಾಜಿ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಹಾಗೂ ಧವಳಗಿರಿ ಪ್ರಾಪರ್ಟೀಸ್ ನಿರ್ದೇಶಕರಿಗೂ ಸಮನ್ಸ್ ಜಾರಿಗೆ ಆದೇಶಿಸಲಾಗಿದೆ.ಇವರೆಲ್ಲರೂ ಮಾರ್ಚ್ 3ರಂದು ಕೋರ್ಟ್‌ನಲ್ಲಿ ಖುದ್ದು ಹಾಜರು ಇರುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಆರೋಪಗಳೇನು: ಬಾಷಾ ಅವರು ಸಲ್ಲಿಸಿರುವ ಈ ದೂರಿನಲ್ಲಿ ಇರುವ ಆರೋಪಗಳು:ಬಿಡಿಎ ಭೂಸ್ವಾಧೀನಪಡಿಸಿಕೊಂಡಿದ್ದ ನಗರದ ರಾಚೇನಹಳ್ಳಿಯ ಸರ್ವೆ ನಂಬರ್ 55/2ರ ಭೂಮಿಯನ್ನು ತಮ್ಮ ಕುಟುಂಬದ ಸದಸ್ಯರ ಅನುಕೂಲಕ್ಕಾಗಿ ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು (ಡಿನೋಟಿಫೈ ಮಾಡಿರುವುದು); ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ರಾಚೇನಹಳ್ಳಿಯ ಸರ್ವೆ ನಂಬರ್ 56ರ ಭೂಮಿಯನ್ನು ಕುಟುಂಬದವರ ಲಾಭಕ್ಕಾಗಿ ಕಾನೂನುಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಹಾಗೂ ತಮ್ಮ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್‌ಗೆ ಲಾಭವಾಗುವಂತೆ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ನಾಗವಾರ ಬಡಾವಣೆಯಲ್ಲಿ ರಸ್ತೆಯನ್ನೇ ಅಕ್ರಮವಾಗಿ ನಿವೇಶನವನ್ನಾಗಿ ಪರಿವರ್ತಿಸಿರುವುದು.ಈ ಆರೋಪಗಳಿಗೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಲೋಕಾಯುಕ್ತ ಪೊಲೀಸರು ವರದಿ ನೀಡಿದ್ದರು. ಆ ವರದಿ ಆಧಾರದ ಮೇಲೆ ಸಮನ್ಸ್ ಜಾರಿಗೊಳಿಸಲಾಗಿದೆ.ಬಂಧನದ ಭೀತಿ ಇಲ್ಲ: ಈ ಪ್ರಕರಣದಲ್ಲಿ ತಮ್ಮನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂಬ ಕಾರಣದಿಂದ ಎಲ್ಲ ಆರೋಪಿಗಳೂ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದುದರಿಂದ ಸದ್ಯ ಬಂಧನ ಭೀತಿಯಿಂದ ಎಲ್ಲರೂ ದೂರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry