ಡಿವಿಎಸ್, ಜೀವರಾಜ್ ಕಟ್ಟಡವೇ ಅಕ್ರಮ

7

ಡಿವಿಎಸ್, ಜೀವರಾಜ್ ಕಟ್ಟಡವೇ ಅಕ್ರಮ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಆಹಾರ ಸಚಿವ ಡಿ.ಎನ್. ಜೀವರಾಜ್ ಅವರು ಅಕ್ಕಪಕ್ಕದ ತಮ್ಮ ಎರಡೂ ನಿವೇಶನಗಳನ್ನು ಒಟ್ಟಿಗೆ ಸೇರಿಸಿ ಬಹುಮಹಡಿ ಕಟ್ಟಡ ನಿರ್ಮಿಸಿರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ.ಎಚ್‌ಎಸ್‌ಆರ್ ಬಡಾವಣೆಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಇದರ ವಿರುದ್ಧ ಮೂರು ತಿಂಗಳಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಕೋರ್ಟ್ ನಿರ್ದೇಶನ ನೀಡಿದೆ.

ನಿಯಮ ಮೀರಿ ಕಟ್ಟಡ ನಿರ್ಮಿಸಲಾಗಿದೆ ಎಂದು ದೂರಿ ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ನೇತೃತ್ವದ ವಿಭಾಗೀಯ ಪೀಠ, `ಉನ್ನತ ಸ್ಥಾನಗಳಲ್ಲಿ ಇರುವವರು ಅಕ್ರಮ ಎಸಗಿದಾಗ ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಂದ ನಿಯಮಗಳು ಉಲ್ಲಂಘನೆ ಆದಾಗ, ಜನರಿಗೆ ವ್ಯವಸ್ಥೆಯಲ್ಲಿ ನಂಬಿಕೆ ಹೊರಟುಹೋಗುತ್ತದೆ. ಈ ಸಂದರ್ಭದಲ್ಲಿ ನಾವು ಸೂಕ್ತ ಕ್ರಮ ಜರುಗಿಸಬೇಕಾಗಿದೆ. ವೈಯಕ್ತಿಕ ಸಂಗತಿಗಳನ್ನು ಬದಿಗಿಟ್ಟು, ಕೇವಲ ಕಾನೂನಿನ ಆಧಾರದಲ್ಲಿ ಕ್ರಮ ಜರುಗಿಸಬೇಕು~ ಎಂದು ಶುಕ್ರವಾರ ನೀಡಿದ ಆದೇಶದಲ್ಲಿ ಹೇಳಿದೆ.`ವಸತಿ ಉದ್ದೇಶದ ಎರಡು ನಿವೇಶನಗಳನ್ನು ಒಟ್ಟು ಸೇರಿಸಿ ವಾಣಿಜ್ಯ ಕಟ್ಟಡ ನಿರ್ಮಿಸುವುದು ಕಾನೂನಿನ ಉಲ್ಲಂಘನೆ ಎಂಬುದು ಸದಾನಂದ ಗೌಡ ಹಾಗೂ ಜೀವರಾಜ್ ಅವರಿಗೆ ತಿಳಿದಿದೆ ಎಂಬುದು ಅವರಿಬ್ಬರು ಸಲ್ಲಿಸಿರುವ ಪ್ರಮಾಣ ಪತ್ರದಿಂದ ಅರಿವಾಗುತ್ತದೆ. ಆದರೂ ಅವರು ನಿಯಮ ಮೀರಿ ಕಟ್ಟಡ ನಿರ್ಮಿಸಿದ್ದಾರೆ. ಇದನ್ನು ಗಮನಿಸಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಥವಾ ಬಿಡಿಎ ಕಾನೂನು ಕ್ರಮ ಜರುಗಿಸಿಲ್ಲ~ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.ಕಟ್ಟಡ ನಿರ್ಮಿಸುವ ಸಂಬಂಧ ರೂಪಿಸಲಾಗಿದ್ದ ಆರಂಭಿಕ ನಕ್ಷೆ, ಬದಲಾವಣೆ ಮಾಡಿದ ನಕ್ಷೆ ಹಾಗೂ ಅನುಮತಿ ದೊರೆತ ನಕ್ಷೆಯನ್ನು ಹೈಕೋರ್ಟ್ ರದ್ದು ಮಾಡಿದೆ. 50/80 ಅಡಿ ಅಳತೆಯ ನಿವೇಶನ ಪಡೆಯುವಾಗ ನೀಡುವ ಪ್ರಮಾಣಪತ್ರದ ಅಂಶಗಳಲ್ಲಿ ಯಾವುದು ಉಲ್ಲಂಘನೆ ಆಗಿವೆ ಎಂಬುದನ್ನು ಪರಿಶೀಲಿಸಿ, ಕ್ರಮ ಜರುಗಿಸಬೇಕು ಎಂದು ಪೀಠ ನಿರ್ದೇಶಿಸಿದೆ.

 

ಹೈಕೋರ್ಟ್‌ಗೆ ರಜೆ

ಬೆಂಗಳೂರು:
ದಸರಾ ಪ್ರಯುಕ್ತ ಬರುವ ಸೋಮವಾರದಿಂದ ಶನಿವಾರದವರೆಗೆ ಹೈಕೋರ್ಟ್‌ಗೆ ರಜೆ. ಧಾರವಾಡ ಮತ್ತು ಗುಲ್ಬರ್ಗದ ಹೈಕೋರ್ಟ್ ಸಂಚಾರಿ ಪೀಠಗಳಲ್ಲೂ ಇದೇ 27ರವರೆಗೆ ಕಲಾಪಗಳು ನಡೆಯುವುದಿಲ್ಲ.ಇದೇ 25ರಂದು ಮಾತ್ರ ಹೈಕೋರ್ಟ್ ರಜಾ ಕಾಲದ ಪೀಠ ಕಾರ್ಯ ನಿರ್ವಹಿಸಲಿದೆ. ಹೈಕೋರ್ಟ್‌ನ ಎರಡು ವಿಭಾಗೀಯ ಪೀಠಗಳು ಹಾಗೂ ಮೂರು ಏಕಸದಸ್ಯ ಪೀಠಗಳು 25ರಂದು ಕಾರ್ಯ ನಿರ್ವಹಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry