ಭಾನುವಾರ, ಜೂನ್ 13, 2021
24 °C

ಡಿವಿಎಸ್ ದುರ್ಬಲ ಸಿಎಂ: ಶ್ರೀರಾಮುಲು ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಡಿ.ವಿ. ಸದಾನಂದಗೌಡರು ಶಕ್ತಿ ಇಲ್ಲದ ಮುಖ್ಯಮಂತ್ರಿ. ಸರ್ಕಾರದಲ್ಲಿ ಅವರು ಏಕಾಂಗಿಯಾಗಿದ್ದಾರೆ. ಸಚಿವರು, ಶಾಸಕರು ಅವರ ಮಾತು ಕೇಳುತ್ತಿಲ್ಲ ಎಂದು ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಹೇಳಿದರು.

ಜೇವರ್ಗಿಗೆ ತೆರಳುವ ಮಾರ್ಗಮಧ್ಯೆ ನಗರದಲ್ಲಿ ಅಭಿಮಾನಿಗಳ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.ಪತ್ರಕರ್ತರ ಮೇಲೆ ವಕೀಲರು ನಡೆಸಿದ ಹಲ್ಲೆಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಸದಾನಂದಗೌಡರು ಸಭೆ ಕರೆದಿದ್ದರು. ಆದರೆ ಆ ಸಭೆಗೆ ಯಾವುದೇ ಸಚಿವರಾಗಲಿ, ಶಾಸಕರಾಗಲಿ ಹಾಜರಾಗಲಿಲ್ಲ. ಹೀಗಾಗಿ ಸದಾನಂದಗೌಡರು ಈಗ ಒಬ್ಬಂಟಿ ಎಂದು ಟೀಕಿಸಿದರು.ಬಿಜೆಪಿ ಸರ್ಕಾರದಿಂದ ಜನರು ಭ್ರಮ ನಿರಸನಗೊಂಡಿದ್ದಾರೆ. ಬಿಜೆಪಿ ಪಕ್ಷದ ಮೇಲಿನ ಜನರ ವಿಶ್ವಾಸ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಕೇವಲ ಅಧಿಕಾರಕ್ಕಾಗಿ ಒಳಜಗಳಗಳು ಆರಂಭವಾಗಿದ್ದು, ವಿಶ್ವಾಸವಿಟ್ಟು ಆಯ್ಕೆ ಮಾಡಿ ಕಳುಹಿಸಿದ ಜನರ ಹಿತಾಸಕ್ತಿಯನ್ನು ಬಿಜೆಪಿ ನಾಯಕರು ಮರೆತಿದ್ದಾರೆ. ಇದರಿಂದಾಗಿ ಬಿಜೆಪಿ ಸರ್ಕಾರದ ಆಡಳಿತವೂ ಕುಸಿಯುತ್ತಿದೆ ಎಂದು ದೂರಿದರು.ಲಕ್ಷ ಕೋಟಿ ಬಜೆಟ್ ಕೇವಲ ಜನರ ದಿಕ್ಕು ತಪ್ಪಿಸುವ ತಂತ್ರ. ಕಳೆದ ವರ್ಷ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ನಲ್ಲಿ ಬಿಡುಗಡೆಯಾದ ಹಣವೆಷ್ಟು? ಅದರಲ್ಲಿ ಖರ್ಚಾಗಿದ್ದು ಎಷ್ಟು ಎಂಬುದರ ಲೆಕ್ಕಾಚಾರವನ್ನು ರಾಜ್ಯದ ಜನರಿಗೆ ನೀಡಬೇಕು ಎಂದು ಶ್ರೀರಾಮುಲು ಒತ್ತಾಯಿಸಿದರು.ಬಜೆಟ್ ಮಂಡನೆಗೂ ಪೂರ್ವದಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು, ಸಮುದಾಯಗಳ ಜೊತೆ ಚರ್ಚಿಸುವುದು ಪರಂಪರೆ. ಆದರೆ ಸದಾನಂದಗೌಡರು ಇದಾವುದನ್ನೂ ಮಾಡದೇ ಪರಂಪರೆಯನ್ನು ಮುರಿದು ಬಜೆಟ್ ಮಂಡನೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೊಂದು ಅವೈಜ್ಞಾನಿಕ ಬಜೆಟ್ ಆಗಲಿದ್ದು, ಜನರ ದಿಕ್ಕು ತಪ್ಪಿಸುವ ತಂತ್ರ ಎಂದು ಲೇವಡಿ ಮಾಡಿದರು.ಮಹತ್ವದ ಬದಲಾವಣೆ: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹಳಷ್ಟು ಶಾಸಕರು, ಸಂಸದರು, ವಿವಿಧ ಪಕ್ಷಗಳ ಪ್ರಭಾವಿ ಮುಖಂಡರು ತಮ್ಮಂದಿಗೆ ಇದ್ದಾರೆ ಎಂದು ಬಿ. ಶ್ರೀರಾಮುಲು ಹೇಳಿದರು.ಶ್ರೀರಾಮುಲು ಹಿಂದುಳಿದ ವರ್ಗಗಳ ನಾಯಕನಾಗಿದ್ದರೂ, ಎಲ್ಲ ಜನಾಂಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಆಗಲಿವೆ ಎಂದು ತಿಳಿಸಿದರು.ಮಾ.13 ಮತ್ತು 14 ರಂದು ಉತ್ತರಕ್ಕಾಗಿ ಉಪವಾಸವನ್ನು ಗದಗನಲ್ಲಿ ಹಮ್ಮಿಕೊಂಡಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ 108 ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.ಅದ್ದೂರಿ ಸ್ವಾಗತ: ಇದಕ್ಕೂ ಮೊದಲು ರಾಮಸಮುದ್ರದಲ್ಲಿ ಬಿ. ಶ್ರೀರಾಮುಲು ಅವರನ್ನು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಭೀಮರಾಯ ಠಾಣಗುಂದಿ, ಮುಂತಾದವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

 

ನಂತರ ನಗರಕ್ಕೆ ಆಗಮಿಸಿದ ಬಿ. ಶ್ರೀರಾಮುಲು, ನೇತಾಜಿ ವೃತ್ತದಲ್ಲಿ ಸುಭಾಷಚಂದ್ರ ಬೋಸ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪಟಾಕಿ ಸಿಡಿಸಿ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಪ್ರವಾಸಿ ಮಂದಿರಕ್ಕೆ ಆಗಮಿಸಿದ ಶ್ರೀರಾಮುಲು ಅವರನ್ನು ಅಭಿಮಾನಿಗಳು ಸನ್ಮಾನಿಸಿದರು.ಮರೆಪ್ಪ ನಾಯಕ ಮಗದಂಪೂರ, ಅಯ್ಯಣ್ಣ ಠಾಣಗುಂದಿ, ಮಹೇಂದ್ರಗೌಡ ಕಲಾಲ, ವೆಂಕಟೇಶ ಮಿಲ್ಟ್ರಿ, ಅರ್ಜುನ ಪವಾರ, ಅಪ್ಪುಗೌಡ ತಾಳಿಕೋಟಿ, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.