ಡಿವೈಎಫ್‌ಐ ಕಾರ್ಯಕರ್ತನ ಥಳಿತಕ್ಕೆ ಖಂಡನೆ

7
ಉನ್ನತಮಟ್ಟದ ತನಿಖೆಗೆ ಕೇರಳ ಸರ್ಕಾರ ಆದೇಶ

ಡಿವೈಎಫ್‌ಐ ಕಾರ್ಯಕರ್ತನ ಥಳಿತಕ್ಕೆ ಖಂಡನೆ

Published:
Updated:

ತಿರುವನಂತಪುರ (ಪಿಟಿಐ): ಸೌರಫಲಕ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ  ಡಿವೈಎಫ್‌ಐ ಕಾರ್ಯಕರ್ತನನ್ನು ಅಮಾನುಷವಾಗಿ ಥಳಿಸಿರುವ ಪೊಲೀಸರ ಕ್ರಮಕ್ಕೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಘಟನೆ ಖಂಡಿಸಿ ಸೆಪ್ಟೆಂಬರ್ 11ರಂದು ಪ್ರತಿಭಟನೆ ನಡೆಸಲು ಡಿವೈಎಫ್‌ಐ ತೀರ್ಮಾನಿಸಿದೆ.ಅನಯಾರಾದಲ್ಲಿ ತೋಟಗಾರಿಕೆ ಅಭಿವೃದ್ಧಿ ನಿಗಮಕ್ಕೆ ಸೇರಿದ ಶೀತಲೀಕರಣ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಕೃಷಿ ಸಚಿವ ಕೆ.ಪಿ. ಮೋಹನ್ ಅವರು ತೆರಳುತ್ತಿದ್ದಾಗ ರಾಜೀನಾಮೆಗೆ ಒತ್ತಾಯಿಸಿ ಡಿವೈಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ  ಡಿವೈಎಫ್‌ಐ ಕಾರ್ಯಕರ್ತ ಜಯಪ್ರಸಾದ್‌ನನ್ನು ಪೊಲೀಸರು ಲಾಠಿಯಿಂದ ಮನಬಂದಂತೆ ಥಳಿಸಿದ್ದರು. ವೃಷಣ ಮತ್ತು ಹೊಟ್ಟೆಗೆ ಗುದ್ದಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಜಯಪ್ರಸಾದ್ ಸದ್ಯ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಕುರಿತ ಪ್ರಾಥಮಿಕ ವರದಿ ಅನ್ವಯ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಘಟನೆ ಸಂಬಂಧ ಮೂರು ವಾರದಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಜೆ.ಬಿ. ಕೋಷಿ ಅವರು ಡಿಜಿಪಿಗೆ ಸೂಚಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ರಾಜ್ಯದ ಗೃಹ ಸಚಿವ ತಿರುವಾಂಕೂರು ರಾಧಾಕೃಷ್ಣ ತಿಳಿಸಿದ್ದಾರೆ.ಘಟನೆಯನ್ನು ಖಂಡಿಸಿ ಡಿವೈಎಫ್‌ಐ ಕಾರ್ಯಕರ್ತರು ಸೆ.11ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry