ಭಾನುವಾರ, ಮೇ 9, 2021
26 °C
ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಡಿಸಿಸಿ ಸದಸ್ಯನ ಮೇಲೆ ಷಫಿ ಬೆಂಬಲಿಗರ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಘರ್ಷಣೆಯ ಹಾದಿ ತುಳಿದಿದ್ದು, ತುರುವೇಕೆರೆ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಅವರ ಪತಿ, ಡಿಸಿಸಿ ಸದಸ್ಯ ರಾಜಣ್ಣ ಮೇಲೆ ನಗರದಲ್ಲಿ ಶನಿವಾರ ಕಾಂಗ್ರೆಸ್ ಸಭೆಯಲ್ಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.ತುರುವೇಕೆರೆ ಕಾಂಗ್ರೆಸ್ ಮುಖಂಡರ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮ್ಮದ್ ಕರೆದಿದ್ದರು. ಸಭೆಗೆ ರಾಜಣ್ಣ ಆಗಮಿಸುತ್ತಿದ್ದಂತೆ ಏಕಾಏಕಿ ಷಫಿ ಬೆಂಬಲಿಗರು ಕುರ್ಚಿಗಳನ್ನು ತೆಗೆದುಕೊಂಡು ಹಲ್ಲೆ ನಡೆಸಿದರು. ಘಟನೆಯಲ್ಲಿ ರಾಜಣ್ಣ ಮೈ ಪರಚಲಾಗಿದೆ. ಅಂಗಿ ಹರಿದು ಹೋಗಿದೆ. ಅಲ್ಲದೆ ಅವರ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ಸರ ಕಳವಾಗಿದೆ.ಮಲ್ಲಪ್ಪನಹಳ್ಳಿ ಗೋವಿಂದರಾಜ್‌ಗೌಡ, ಶೇಖರ್, ಕುಮಾರ್, ದಂಡಿನಶಿವರ ವಿಶ್ವನಾಥ್ ಅವರ ತಂಡ ನನ್ನ ಮೇಲೆ ಹಲ್ಲೆ ನಡೆಸಿತು. ಹಲ್ಲೆ ನಡೆಸಿದವರೆಲ್ಲರೂ ಷಫಿ ಅಹಮ್ಮದ್ ಬೆಂಬಲಿಗರು ಎಂದು ರಾಜಣ್ಣ ದೂರಿದರು.ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಚೌದರಿ ರಂಗಪ್ಪ, ಕೆಪಿಸಿಸಿ ಸದಸ್ಯರಾದ ತಿರುಮಲೇಗೌಡ, ಗೋವಿಂದರಾಜ್‌ಗೌಡ, ವಸಂತಕುಮಾರ್ ಪಕ್ಷ ವಿರೋಧಿ ಧೋರಣೆಯಿಂದ ಚುನಾವಣೆಯಲ್ಲಿ ಸೋಲಬೇಕಾಯಿತು. ಈ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎಂದು ಗೀತಾ ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದರು ಎನ್ನಲಾಗಿದೆ.ತಮ್ಮ ಪತ್ನಿ ಗೀತಾ ದೂರು ನೀಡಿದ ಮುಖಂಡರೆಲ್ಲರೂ ಷಫಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಮ್ಮ ವಿರುದ್ಧ ಹಗೆ ಸಾಧಿಸಲು ಕಾರಣವಾಗಿದೆ ಎಂದು ರಾಜಣ್ಣ ಹೇಳಿದರು.`ನನ್ನ ಮೇಲಿನ ಹಲ್ಲೆಗೆ ಷಫಿ ಅಹಮದ್ ಕಾರಣ. ಚುನಾವಣೆಯಲ್ಲಿ ಟಿಕೆಟ್ ಪಡೆದ ಸಿಟ್ಟು ಅವರಿಗಿದೆ. ಷಫಿ  ವಿರುದ್ಧವೂ ಪಕ್ಷ ಕ್ರಮ ಜರುಗಿಸಬೇಕು. ಹಲ್ಲೆ ನಡೆಸಿದ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಈ ಕೃತ್ಯದ ಎಲ್ಲ ವಿವರಗಳನ್ನು ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸುವುದಾಗಿ' ರಾಜಣ್ಣ ಹೇಳಿದರು.

ಸಭೆಯಲ್ಲಿ ಗಲಾಟೆ ಜೋರು ಪಡೆದುಕೊಳ್ಳುತ್ತಿದ್ದಂತೆ ಷಫಿ ಅಹಮ್ಮದ್ ಜಾಗ ಖಾಲಿ ಮಾಡಿದ್ದು ಕಾರ್ಯಕರ್ತರಲ್ಲಿ ಅನೇಕ ಅನುಮಾನಗಳಿಗೆ ಕಾರಣವಾಯಿತು. ಘಟನೆ ನಂತರ ಷಫಿ ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದರು.ದೂರು ದಾಖಲಿಸಿಕೊಂಡಿರುವ ಎನ್‌ಇಪಿಎಸ್ ಠಾಣೆ ಪೊಲೀಸರು, ಗಲಾಟೆ ನಡೆದಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.