ಗುರುವಾರ , ಮೇ 13, 2021
16 °C

ಡಿಸಿ ಅಪಹರಣ: 7 ದಿನ ಕಳೆದರೂ ಕಾಣದ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಪುರ (ಪಿಟಿಐ): ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ಮಾವೊವಾದಿಗಳು ಅಪಹರಿಸಿ ಶುಕ್ರವಾರಕ್ಕೆ ಏಳು ದಿನಗಳಾದರೂ ಸರ್ಕಾರ ಮತ್ತು ಮಾವೊವಾದಿಗಳ ಸಂಧಾನಕಾರರು ಬಿಕ್ಕಟ್ಟಿಗೆ ಅಂತ್ಯ ಹಾಡಲು ವಿಫಲರಾಗಿದ್ದಾರೆ.

ಸರ್ಕಾರದ ಪರ ಹಾಗೂ ಮಾವೊವಾದಿಗಳ ಪರ ಸಂಧಾನಕಾರರ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆ ಮುಗಿದರೂ ಮೆನನ್ ಬಿಡುಗಡೆಯ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

`ಶೀಘ್ರದಲ್ಲಿ ಪ್ರಮುಖ ಬೆಳವಣಿಗೆ ನಡೆಯಲಿದೆ~ ಎಂದು ಸರ್ಕಾರ ನೇಮಿಸಿರುವ ಇಬ್ಬರು ಸಂಧಾನಕಾರರಲ್ಲಿ ಒಬ್ಬರಾಗಿರುವ ಮಧ್ಯ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ನಿರ್ಮಲಾ ಬುಚ್ ಹೇಳಿದ್ದಾರೆ. `ಎರಡೂ ಕಡೆಯವರು ಒಪ್ಪಂದಕ್ಕೆ ಬರುವ ವಿಶ್ವಾಸವಿದೆ~ ಎಂದು ಮಾವೊವಾದಿಗಳ ಪರ ಸಂಧಾನ ನಡೆಸುತ್ತಿರುವ ಶಿಕ್ಷಣ ತಜ್ಞ ಜಿ.ಹರ್‌ಗೋಪಾಲ್ ಹೇಳಿದ್ದಾರೆ.

ಮೆನನ್ ಅವರನ್ನು ಬಿಡುಗಡೆ ಮಾಡಬೇಕಿದ್ದರೆ ಬಂಧನದಲ್ಲಿರುವ 17 ನಕ್ಸಲರನ್ನು ಬಿಡುಗಡೆ ಮಾಡಬೇಕು, `ಗ್ರೀನ್ ಹಂಟ್~ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಮತ್ತು ಬಸ್ತಾರ್‌ನಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಮಾವೊವಾದಿಗಳು ಷರತ್ತು ಹಾಕಿದ್ದಾರೆ.

ಷರತ್ತುಗಳ ಕುರಿತಂತೆ ಛತ್ತೀಸ್‌ಗಡ ಸರ್ಕಾರ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನಕ್ಸಲರು ಆಗ್ರಹಿಸಿದ್ದಾರೆ.

ಅಪಹರಣಕಾರರು ನೀಡಿದ್ದ ಗಡುವು (ಏಪ್ರಿಲ್ 25) ಈಗಾಗಲೇ ಕೊನೆಗೊಂಡಿದೆ. ಏಪ್ರಿಲ್ 21ರಂದು ಮೆನನ್ ಅವರನ್ನು ಅಪಹರಿಸಲಾಗಿತ್ತು.

ಮೆನನ್ ಆಡಳಿತದಲ್ಲಿ ಸುಕ್ಮಾ ಜಿಲ್ಲಾ ಪೊಲೀಸರು ಯುವಕನೊಬ್ಬನನ್ನು ಹತ್ಯೆ ಮಾಡಿ, ಇದೊಂದು ಆತ್ಮಹತ್ಯಾ ಘಟನೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಿದ್ದರು ಎಂದು ಮಾವೊವಾದಿಗಳು ಇ-ಮೇಲ್‌ನಲ್ಲಿ ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.