`ಡಿಸಿ, ಎಸ್‌ಪಿ ವಿರುದ್ಧದ ಆರೋಪ ನಿರಾಧಾರ'

7

`ಡಿಸಿ, ಎಸ್‌ಪಿ ವಿರುದ್ಧದ ಆರೋಪ ನಿರಾಧಾರ'

Published:
Updated:

 


ಬೆಂಗಳೂರು: `ಲಂಚ ಪ್ರಕರಣವೊಂದರಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಅವರನ್ನು ಪಾರು ಮಾಡಲು ಯತ್ನಿಸಿದ್ದರು' ಎಂಬ ಆರೋಪದಡಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವಿಭಾಗದ ಹಿಂದಿನ ಎಸ್‌ಪಿ ಪಿ.ಕೆ.ಶಿವಶಂಕರ್ ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ದೂರಿನಲ್ಲಿ ಹುರುಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಗುರುವಾರ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

 

ಜಿಲ್ಲಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ರಾಜೇಶ್ವರಿ ಈ ಪ್ರಕರಣದಲ್ಲಿ ದೂರುದಾರರಿಂದ 3.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಖಚಿತಪಟ್ಟಿದೆ. ಆದರೆ, ಜಿಲ್ಲಾಧಿಕಾರಿಗೂ ಲಂಚ ಪ್ರಕರಣಕ್ಕೂ ಸಂಬಂಧ ಕಲ್ಪಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ತನಿಖಾ ತಂಡ ಹೇಳಿದೆ.

 

ಸೆಪ್ಟೆಂಬರ್‌ನಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿದ್ದ ಶ್ರೀನಿವಾಸಮೂರ್ತಿ, `ಜಿಲ್ಲಾಧಿಕಾರಿಯ ಪರವಾಗಿ ರಾಜೇಶ್ವರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ' ಎಂದು ಮಾಹಿತಿ ನೀಡಿದ್ದರು. ಅಯ್ಯಪ್ಪ ಅವರೇ ಖುದ್ದಾಗಿ ಬೇಡಿಕೆ ಇಡುತ್ತಿರುವುದನ್ನು `ರೆಕಾರ್ಡ್' ಮಾಡಿಕೊಂಡು ತರುವಂತೆ ಶಿವಶಂಕರ್ ಅವರು ಶ್ರೀನಿವಾಸಮೂರ್ತಿ ಅವರಿಗೆ ಸೂಚನೆ ನೀಡಿದ್ದರು.

`ನಾನು ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಮುನ್ನವೇ ಅಯ್ಯಪ್ಪ ಅವರಿಗೆ ಪ್ರಕರಣದ ಬಗ್ಗೆ ತಿಳಿದಿತ್ತು. ಶಿವಶಂಕರ್ ಅವರೇ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಿದ್ದರು' ಎಂದು ಶ್ರೀನಿವಾಸಮೂರ್ತಿ ದೂರಿದ್ದರು. 

 

ಈ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ, ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.

 

ಪ್ರಕರಣ ಕುರಿತು ತನಿಖೆ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಯು.ಪಿ.ಶಿವರಾಮ ರೆಡ್ಡಿ, ಗುರುವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. `ಅಯ್ಯಪ್ಪ ಮತ್ತು ಶಿವಶಂಕರ್ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ. ರಾಜೇಶ್ವರಿ ಲಂಚಕ್ಕೆ ಒತ್ತಾಯಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ' ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry