ಡಿಸಿ ಕಚೇರಿಯಲ್ಲಿ ಕಡತಗಳೇ ನಾಪತ್ತೆ!

ಹಾಸನ: ‘ಶೈಕ್ಷಣಿಕ ನಿಯಮ ಹಾಳುಗೆಡು ವುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜಿಲ್ಲೆಗೆ ಬೇಕಾ. ಡಿಸಿ ಕಚೇರಿಗೆ ಕಳುಹಿಸಿದ ಫೈಲ್ಗಳನ್ನು ಮಂಗ ಮಾಯ ಮಾಡಿಸುವಷ್ಟು ಪ್ರಬುದ್ಧ ರಾಗಿದ್ದಾರೆ. ಇಂತವರ ವಿರುದ್ಧ ಕ್ರಮ ಜರುಗಿಸುವುದಿಲ್ಲವೇ’ ಹಾಸನ ಉಪತಹ ಶೀಲ್ದಾರ್ ಕಚೇರಿಗೆ ಯಾವಾಗಲೂ ಬೀಗ ಹಾಕಿರುತ್ತದೆ, ಖಾತೆ ಮಾಡಿಸಲೆಂದು ತಿಂಗಳಿಂದ ಅಲೆದಾಡಿದರೂ ಪ್ರಯೋಜ ನವಾಗಿಲ್ಲ, ಪಶುಭಾಗ್ಯ ಯೋಜನೆಯಡಿ ಹಸು ನೀಡಲಿಲ್ಲ, ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲ..’
ಇದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಚಿವರ ಎದುರು ಸಾರ್ವಜನಿಕರು ಬಿಚ್ಚಿಟ್ಟ ಸಮಸ್ಯೆಗಳ ಸರಮಾಲೆ.
ಸಭೆಯಲ್ಲಿ ಇಂತಹ ನೂರಕ್ಕೂ ಅಧಿಕ ಅಹವಾಲುಗಳನ್ನು ಸಚಿವರು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಆರ್ಟಿಇ ಕಾರ್ಯಕರ್ತ ಶ್ರೀನಿವಾಸ್ ಮಾತನಾಡಿ, ಯಾವುದೇ ಶಾಲೆ ತೆರೆಯ ಬೇಕೆಂದರೆ ಮೈದಾನಕ್ಕಾಗಿ 1 ಎಕರೆ ಜಾಗ ಮೀಸಲಿಟ್ಟಿರಬೇಕು. ಆದರೆ ನಗರದ ಎಸ್ಆರ್ಎಸ್ ಪ್ರಜ್ಞ ಶಾಲೆಗೆ ಸ್ಥಳವೇ ಇಲ್ಲ. ಅದರ ಸುತ್ತಲೂ ಕ್ಲಿನಿಕ್, ಮಾಲ್, ರಸ್ತೆ ಇದ್ದು ಜನದಟ್ಟಣೆ ಪ್ರದೇಶ ಅದಾಗಿದೆ. ಆದರೆ ಡಿಡಿಪಿಐ ಶಾಲೆ ತೆರೆಯಲು ಅನುಮತಿ ನೀಡಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆ, ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಕಚೇರಿಗೂ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಕಾನೂನು ಧಿಕ್ಕರಿಸುತ್ತಿರುವ ಡಿಡಿಪಿಐ ಕಾಂತರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ನಾರಾಯಣ ದಾಸ್ ಮಾತನಾಡಿ, ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿಗಾಗಿ ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಅಲ್ಲಿನ ಮೇಲ್ವರ್ಗದವರು ಖಾತೆ ಮಾಡಿಕೊಳ್ಳಲು ಬಿಡುತ್ತಿಲ್ಲ. ಅಧಿಕಾರಿ ಗಳು ಶೋಷಿತರಿಗೆ ನ್ಯಾಯ ದೊರಕಿಸಿ ಕೊಡಬೇಕು ಮನವಿ ಮಾಡಿದರು.
ಹಾಸನದ ರಂಗೋಲಿಹಳ್ಳದ ನಿವಾಸಿ ಗಂಗಾಧರ್ , ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ತಮ್ಮ ಶಸ್ತ್ರ ಚಿಕಿತ್ಸೆಗಾಗಿ ₹5 ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಧನ ಸಹಾಯ ಮಾಡಬೇಕು ಎಂದು ಕೋರಿದರು.
‘ಮಗ ಮತ್ತು ಸೊಸೆ ಹಿಂಸೆ ಕೊಡು ತ್ತಾರೆ. ತಿನ್ನಲು ಅನ್ನ ಕೊಡುವುದಿಲ್ಲ. ನಾಲ್ಕು ವರ್ಷದಿಂದ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ. ನಾನು ಕಟ್ಟಿದ ಮನೆಯಲ್ಲಿ ಪ್ರಾಣ ಬಿಡಲು ಅವಕಾಶ ಕೊಡಿಸುವಂತೆ’ ನಗರದ ವೃದ್ಧ ಸೂರಪ್ಪ ಕಣ್ಣೀರಿಟ್ಟರು.
ಮಗನನ್ನು ಕರೆಸಿ ಬುದ್ದಿವಾದ ಹೇಳುವುದಾಗಿ ಸಚಿವರು ಸಮಾಧಾನ ಪಡಿಸಿ ಕಳುಹಿಸಿದರು. ವರ್ತುಲ ರಸ್ತೆಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಈವರೆಗೆ ಪರಿಹಾರ ಅಥವಾ ನಿವೇಶನ ನೀಡಿಲ್ಲ. ಈ ಸಂಬಂಧ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿ ಸಾಕಾಗಿದೆ ಎಂದು ಡೇರಿ ವೃತ್ತದ ನಿವಾಸಿ ಅಳಲು ತೋಡಿಕೊಂಡರು.
ಮೊರಾರ್ಜಿ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದ ನನ್ನನ್ನು ಏಕಾಏಕಿ ತೆಗೆದುಹಾಕಲಾಗಿದೆ. ಮತ್ತೆ ಮುಂದುವರೆಸುವಂತೆ ಅಂಗವಿಕಲ ಶಿಕ್ಷಕ ಚಂದ್ರಶೇಖರ್ ಮೊರೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ವಿರುದ್ಧವೇ ಕೋರ್ಟ್ಗೆ ಹೋಗಿರುವ ಕಾರಣ ತೆಗೆದು ಹಾಕಲಾಗಿದೆ. ಕೇಸ್ ವಾಪಸ್ ಪಡೆದರೆ ಮರು ನೇಮಕ ಮಾಡಿಕೊಳ್ಳಲಾಗುವುದು ಎಂದರು. ಕೆಲಸ ನೀಡುವ ಭರವಸೆ ನೀಡಿದರೆ ಕೇಸ್ ವಾಪಸ್ ಪಡೆಯುವುದಾಗಿ ಶಿಕ್ಷಕ ತಿಳಿಸಿದರು.
ದನ ಮೇಯಿಸಲು ಗೋಮಾಳ ರಕ್ಷಿಸಿ, ಕೆರೆಗಳಿಗೆ ನೀರು ತುಂಬಿಸಿ, ರುದ್ರಭೂಮಿಗೆ ಜಾಗ ಮಂಜೂರು ಮಾಡುವುದು, ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಮೃತ ಜಾನುವಾರುಗಳ ವಿಮೆ ಪರಿಹಾರ ಕೊಡಿಸುವುದು ಸೇರಿದಂತೆ 217 ಅರ್ಜಿಗಳು ಸಲ್ಲಿಕೆಯಾದವು.
ಜಿಲ್ಲಾಧಿಕಾರಿ ವಿ. ಚೈತ್ರಾ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು. ಕೆಲವೊಂದು ತಾಂತ್ರಿಕ ತೊಂದರೆಗಳಿಂದ ನಾಡ ಕಚೇರಿಯಲ್ಲಿ ಸೇವಾ ವಿಳಂಬವಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಆಹಾರ ನಿಗಮದ ಆಧ್ಯಕ್ಷ ಎಸ್.ಎಂ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಕುಮಾರ್ ಹಾಜರಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಸ್ವಾಗತಿಸಿದರು. ವಾರ್ತಾಧಿಕಾರಿ ವಿನೋದ್ ಚಂದ್ರ ನಿರೂಪಿಸಿದರು. ಉಪವಿಭಾಗಾಧಿಕಾರಿ ನಾಗರಾಜ್ ವಂದಿಸಿದರು.
ತಾಲ್ಲೂಕು ಮಟ್ಟದಲ್ಲೂ ಜನಸಂಪರ್ಕ ಸಭೆ
ಹಾಸನ: ಜಿಲ್ಲೆಯ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೂರು ತಿಂಗಳಿಗೊಮ್ಮೆ ನಡೆಸುತ್ತಿದ್ದ ಜನ ಸಂಪರ್ಕ ಸಭೆಯನ್ನು ಪ್ರತಿ ತಿಂಗಳು ನಡೆಸಲಾಗುವುದು. ಹಾಗೆಯೇ ತಾಲ್ಲೂಕು ಮಟ್ಟದಲ್ಲಿಯೂ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಸಚಿವ ಎ. ಮಂಜು ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಸಭೆ ನಡೆಸುವ ದಿನಾಂಕ ನಿಗದಿ ಮಾಡುತ್ತಾರೆ. ಸಾರ್ವಜನಿಕರ ಗುಣಾತ್ಮಕ ಸಮಸ್ಯೆಗಳಿಗೆ ಹದಿನೈದು ದಿನಗಳಲ್ಲಿ ಪರಿಹಾರ ಕಲ್ಪಿಸಲಾಗುವುದು. ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಪರಿಹಾರ ಕ್ರಮ ಕೈಗೊಳ್ಳುವ ಕಾರ್ಯಕ್ರಮ ಇದಾಗಿದೆ. ಸಮಸ್ಯೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದಾಗ, ಸ್ವೀಕೃತಿ ಪ್ರತಿ ಪಡೆಯುವುದನ್ನು ಮರೆಯಬಾರದು. ಅಧಿಕಾರಿಗಳಿಂದ ಕಾನೂನು ರೀತಿಯಲ್ಲಿ ಹೇಗೆ ಕೆಲಸ ಮಾಡಿಸಬೇಕು ಎಂಬುದು ಗೊತ್ತು. ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮನಸ್ವಿನಿ ಹೀಗೆ ಅನೇಕ ಮಹಾತ್ವಾಕಾಂಕ್ಷಿ ಯೋಜನೆಗಳ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಅಧಿಕಾರಿಗಳು ಕೂಡ ಸಾರ್ವಜನಿಕರ ಸಮಸ್ಯೆಯನ್ನು ಅರಿತು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಜನರು ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಲಭಿಸಿದೆ. ಅದು ಪ್ರಥಮ ಸ್ಥಾನ ತಲುಪಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.