ಬುಧವಾರ, ನವೆಂಬರ್ 20, 2019
20 °C

ಡಿ.ಸಿ ನೇತೃತ್ವದಲ್ಲಿ ಚುನಾವಣಾ ಸಿದ್ಧತೆ ಸಭೆ

Published:
Updated:

ಧಾರವಾಡ: ಮೇ 5ರಂದು ಜರುಗಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಜಿಲ್ಲೆಗೆ ನೇಮಕವಾಗಿರುವ ಸಾಮಾನ್ಯ, ಲೆಕ್ಕ ಹಾಗೂ ಪೊಲೀಸ್ ವೀಕ್ಷಕರ ಹಾಗೂ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಇಲಾಖೆಗಳ ಸಭೆಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನೆರವೇರಿತು.ಚುನಾವಣಾ ಕಾರ್ಯದಲ್ಲಿ ತೊಡಗುವ ಅಧಿಕಾರಿ, ಸಿಬ್ಬಂದಿ, ರಾಜಕೀಯ ಪಕ್ಷಗಳ ಏಜೆಂಟರೂ ಸೇರಿದಂತೆ ಪ್ರತಿಯೊಬ್ಬರು ತಪ್ಪದೇ ಅಂಚೆ ಪತ್ರದ ಮೂಲಕ ಮತದಾನ ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಮೀರ್ ಶುಕ್ಲಾ ವೀಕ್ಷಕರಿಗೆ ತಿಳಿಸಿದರು.ರಾಜಕೀಯ ಪಕ್ಷದ ಅಭ್ಯರ್ಥಿಗಳು ಚುನಾವಣೆ ಕುರಿತು ಮಾಡುವ ಖರ್ಚು ವೆಚ್ಚದ ವಿವರ ಗಮನಿಸಲು ಈಗಾಗಲೇ ಲೆಕ್ಕಾಧಿಕಾರಿಗಳ ತಂಡಗಳು ಕಾರ್ಯನಿರತವಾಗಿವೆ. ಮುಖ್ಯ ವೆಚ್ಚಾಧಿಕಾರಿಗಳ ತಂಡವು ಫ್ಲೈಯಿಂಗ್, ಸ್ಟ್ಯಾಟಿಕ್ ಟೀಂ ಹಾಗೂ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಸಂಬಂಧಿತ ಪಕ್ಷ ವ್ಯಕ್ತಿಗಳ ವೆಚ್ಚದ ಪರಿಶೀಲನೆ ನಡೆಸುತ್ತಿದೆ. ರಾಜಕೀಯ ಪಕ್ಷಗಳು ಸದಾಚಾರ ಸಂಹಿತೆ ಅನುಸರಿಸುವ ಕುರಿತು ಅಭ್ಯರ್ಥಿ ಹಾಗೂ ಪಕ್ಷಗಳ ವೆಚ್ಚ ನಿರ್ವಹಿಸುವ ಕುರಿತು ಸಭೆಗಳನ್ನು ಜರುಗಿಸಿ ಸೂಕ್ತ ತಿಳಿವಳಿಕೆ ಹಾಗೂ ಮಾರ್ಗದರ್ಶನ ನೀಡಲಾಗಿದೆ.ಚುನಾವಣಾ ಅಭ್ಯರ್ಥಿಗಳ ಖಚಿತ ಪಟ್ಟಿ ಇದೇ 20ರಂದು ಸಂಜೆ ವೇಳೆಗೆ ತಿಳಿಸಿ ನಂತರ ಅವರ ಸಭೆ ಜರುಗಿಸಿ ಇನ್ನೊಮ್ಮೆ ಮಾಹಿತಿಗಳನ್ನು ನೀಡಲಾಗುವುದು. ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್, ಬಾಡಿಗೆ ವಿಮಾನಗಳ ಮೂಲಕ ಬರುವವರ ಹಾಗೂ ಸಾರ್ವಜನಿಕ ಪ್ರಚಾರ ಸಭೆಗಳ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿದೆ.ಸ್ಥಳೀಯ ಟಿ.ವಿ.ಗಳಲ್ಲಿ ಜಾಹೀರಾತು ನೀಡುವ ಮುನ್ನ ಮಾಧ್ಯಮ ಪರಾಮರ್ಶೆ ಹಾಗೂ ಪ್ರಮಾಣೀಕರಣ ಸಮಿತಿ (ಎಂಸಿಎಂಸಿ)ಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಸಲ್ಲಿಸಿ ಅನುಮತಿ ಪಡೆಯಲು ತಿಳಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆ ಕುರಿತ ದೂರು ಸ್ವೀಕಾರಕ್ಕೆ 1800 425 2018 ಶುಲ್ಕ ರಹಿತ ದೂರವಾಣಿಯ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.ಜಿಲ್ಲೆಯಲ್ಲಿ 18.5 ಲಕ್ಷ ಜನಸಂಖ್ಯೆ ಅಂದಾಜಿದ್ದು, ಅದರಲ್ಲಿ ಪ್ರಸ್ತುತ 13 ಲಕ್ಷ ಮತದಾರರಿದ್ದಾರೆ. ಗಂಡು, ಹೆಣ್ಣುಗಳ ಅನುಪಾತ 957ರಷ್ಟಿದೆ. ಜಿಲ್ಲೆಯಲ್ಲಿ ಶೇ 9ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 5ರಷ್ಟು ಪರಿಶಿಷ್ಟ ವರ್ಗದ ಜನರಿದ್ದಾರೆ.ಜನವರಿ ನಂತರ ಇಲ್ಲಿಯವರೆಗೆ 35,780 ನಿವ್ವಳ ಮತದಾರರ ಸೇರ್ಪಡೆ ಆಗಿದೆ. ಮತದಾನದ 4 ದಿನ ಮುಂಚೆ ಹಾಗೂ ಮತದಾನದ ದಿನ ಮತದಾರ ಚೀಟಿ ವಿವರ ನೀಡಲು ಕ್ರಮ ಜರುಗಿಸಲಾಗುವುದು. ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿ ಮತದಾರ ಜಾಗೃತಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 1,346 ಮತಗಟ್ಟೆ ಇದ್ದು, ಹೆಚ್ಚುವರಿ 81ಕ್ಕೆ  ಪ್ರಸ್ತಾವನೆ ಸಲ್ಲಿಸಲಾಗಿದೆ. 300ಕ್ಕಿಂತ ಕಡಿಮೆ ಜನಸಂಖ್ಯೆಯ 1,300ರಿಂದ 800 ಒಳಗಿರುವ 556;  801ರಿಂದ 1,000 ಒಳಗಿರುವ 290; 1,201ರಿಂದ1,500 ಒಳಗಿರುವ 162 ಹಾಗೂ 1,500 ಕ್ಕಿಂತ ಹೆಚ್ಚಿನ ಜನಸಂಖ್ಯೆ ಮತದಾರರಿಗೆ 1 ಮತಗಟ್ಟೆ ಇದೆ. ಈ ಚಿತ್ರಣ 81 ಹೆಚ್ಚುವರಿ ಮತಗಟ್ಟೆ ಅನುಮತಿ ಸಿಕ್ಕ ನಂತರ ಮತದಾರ ಸಂಖ್ಯೆ ಅನುಸರಿಸಿ ಬದಲಾಗಲಿದೆ.ಪ್ರತಿಯೊಂದು ಮತಗಟ್ಟೆ ಸರಿಯಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆ ಅದಕ್ಕೆ ತಕ್ಕ ಸಿಬ್ಬಂದಿ ಇರುವ ಒಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 20ರಂತೆ ಸೆಕ್ಟರಲ್ ಅಧಿಕಾರಿಗಳ ತಂಡಗಳು ಕಾರ್ಯನಿರ್ವಹಿಸಲಿವೆ. ಹೆಚ್ಚು ಮತದಾನವಾಗುವ, ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳ ಸೂಕ್ತ ರಕ್ಷಣಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ ಎಂದು ಶುಕ್ಲಾ ವೀಕ್ಷಕರಿಗೆ ವಿವರಿಸಿದರು.ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣಾ ಬಂದೋಬಸ್ತ್ ಹಾಗೂ ರಕ್ಷಣಾ ವ್ಯವಸ್ಥೆ ಕುರಿತು ಹು-ಧಾ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್.ರವಿಕುಮಾರ ವಿವರಗಳನ್ನು ನೀಡಿದರು.ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸೂಕ್ತ ತರಬೇತಿ ಮಾಹಿತಿ ನೀಡಲು, ಸೆಕ್ಟರ್ ಅಧಿಕಾರಿಗಳು ಮತದಾನದ ದಿನದ ಮುಂಚಿತವಾಗಿ ತಮ್ಮ ವ್ಯಾಪ್ತಿಯ ಪ್ರತಿ ಮತಗಟ್ಟೆ ಪರಿಶೀಲಿಸಿ ಕುಂದು ಕೊರತೆಗಳಿದ್ದಲ್ಲಿ ಅವುಗಳನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತರಲು, ಜಿಲ್ಲೆಗೆ ಪ್ರವೇಶವಾಗುವಾಗ ಇರುವ ನಾಕಾಬಂದಿಗಳ ಜೊತೆಗೆ ಜಿಲ್ಲೆಯ ಪ್ರಮುಖ ಸ್ಥಾನಗಳಲ್ಲಿ ತಪಾಸಣಾ ತಂಡಗಳನ್ನು ಹಾಗೂ ಚಕಿತಗೊಳಿಸುವ ತಪಾಸಣಾ ಕಾರ್ಯ ಜರುಗಿಸಲು ಸಭೆಯಲ್ಲಿ ಭಾಗವಹಿಸಿದ ವೀಕ್ಷಕರು ಸೂಚಿಸಿದರು.ಕೇಬಲ್ ಟಿ.ವಿ. ಗಳ ಚುನಾವಣಾ ಜಾಹೀರಾತು ವೀಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಚೆಕ್‌ಪೋಸ್ಟ್, ನೀತಿಸಂಹಿತೆ ಪರಿಶೀಲನೆ ವಿವಿಧ ತಂಡಗಳು ಹಾಗೂ ಮತಗಟ್ಟೆ ನಿಯೋಜಿತರಾಗುವ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ನಿರಂತರ ನಿಗಾವಹಿಸಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ವೀಕ್ಷಕರು ತಿಳಿಸಿದರು.

ಪ್ರತಿಕ್ರಿಯಿಸಿ (+)