ಡಿಸಿ ನೇತೃತ್ವದಲ್ಲಿ ತನಿಖಾ ತಂಡಕ್ಕೆ ಶಿಫಾರಸು

7

ಡಿಸಿ ನೇತೃತ್ವದಲ್ಲಿ ತನಿಖಾ ತಂಡಕ್ಕೆ ಶಿಫಾರಸು

Published:
Updated:

ಮೈಸೂರು: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖಾ ತಂಡ, ಪೋಷಕರಿಗೆ ಅರಿವು ಮೂಡಿಸಲು ಕ್ರಮ, ಮನೆಕೆಲಸದ ಕುಟುಂಬಗಳಿಗೆ ಸರ್ಕಾರದ ಯೋಜನೆ ತಲುಪಿಸುವ ಕಾರ್ಯ...ಇದು ಮೈಸೂರಿನಲ್ಲಿ ಬುಧವಾರ ನಡೆದ ‘ಮನೆ ಕೆಲಸ ಮಾಡುವ ಬಾಲಕೀಯರ ಸಮಸ್ಯೆ ಪರಿಹರಿಸಲು ಏರ್ಪಡಿಸಿದ್ದ ಸಮಾಲೋಚನಾ ಸಭೆ’ಯಲ್ಲಿ ಕೈಗೊಂಡ ನಿರ್ಣಯ.ಮನೆ ಕೆಲಸ ಮಾಡುವ ಬಾಲಕೀಯರನ್ನು ಗುರುತಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಸಮಗ್ರ ತಂಡ ರಚನೆ ಮಾಡುವ ನಿರ್ಣಯಕ್ಕೆ ಬರಲಾಯಿತು. ಮೈಸೂರು ಉಪಪೊಲೀಸ್ ಆಯುಕ್ತ ರಾಜೇಂದ್ರ ಪ್ರಸಾದ್ ನೇತೃತ್ವ ಹಾಗೂ ಸಾಹಿತಿ ಶಿವರಾಂ ಕಾಡನಕುಪ್ಪೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ, ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರಿಂದ ಸಾಕಷ್ಟು ವಿಷಯಗಳನ್ನು ಆಲಿಸಿದ ನಂತರ ಈ ನಿರ್ಣಯಕ್ಕೆ ಬಂದಿದೆ.ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ಪೊಲೀಸ್ ಅಧಿಕಾರಿ ರಾಜೇಂದ್ರಪ್ರಸಾದ್, ಸಾಹಿತಿ ಕಾಡನಕುಪ್ಪೆ, ಮಕ್ಕಳ ಕಲ್ಯಾಣ ಸಮಿತಿಯ ಎನ್. ಟಿ. ವೆಂಕಟೇಶ್, ಹೋರಾಟಗಾರ ಹರಿಹರ ಆನಂದಸ್ವಾಮಿ,  ಮಕ್ಕಳ ಮನೆಯ ಮಹಮದ್ ಮರ್ಚೆಂಟ್, ಸಹಾರ ಸಂಸ್ಥೆ ತಿಮೋತಿ ಜಾನ್, ಕಲಾವಿದ ಬಾದಲ್, ಪತ್ರ ಕರ್ತ ರವೀಂದ್ರಭಟ್, ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್ ಅವರುಗಳು, ಮನೆ ಕೆಲಸ ಹಾಗೂ ಬಾಲಕಾರ್ಮಿಕ ಪದ್ಧತಿಯ ಒಳ-ಹೊರ ನೋಟಕ್ಕೆ ಕನ್ನಡಿ    ಹಿಡಿದರು.ಮನೆ ಕೆಲಸದಾಳುಗಳು ಬಾಲಕಾರ್ಮಿಕ ಪದ್ಧತಿಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅವರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲದೇ, ಮನೆ ಕೆಲಸ ಮಾಡುವ ಎಲ್ಲ ಕುಟುಂಬದ ಗಂಡಸರು ಕುಡುಕರಾಗಿದ್ದು, ಅವರಿಗೆ ಅರಿವು ಮೂಡಿಸಬೇಕು ಎಂದು ಪ್ರತಿಪಾದಿಸಿದರು.ಮನೆ ಕೆಲಸ ಮಾಡುವ ಬಾಲಕೀಯರಿಗೆ ಕಡಿಮೆ ಎಂದರೂ 3107 ರೂಪಾಯಿಗಳನ್ನು ನೀಡಬೇಕು. ಮಂಗಳೂರು ಪ್ರಾಂತ್ಯದಲ್ಲಿ ಇದ್ದಂತೆ ಇನ್ನಿತರ ಸಹಾಯ ಮಾಡಬೇಕು ಎಂದು ಪ್ರತಿಪಾದಿಸಿದ ಉಪಪೊಲೀಸ್ ಆಯುಕ್ತ ರಾಜೇಂದ್ರ ಪ್ರಸಾದ್, ತಾವು ಮಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಇದ್ದಾಗ 18 ವರ್ಷದ ಒಳಗಿನ ಬಾಲಕೀಯರನ್ನು ಮನೆಕೆಲಸಕ್ಕೆ ತೆಗೆದುಕೊಂಡಿಲ್ಲ. ನಂತರದ ವಯಸ್ಸಿನವರನ್ನು ತೆಗೆದುಕೊಂಡು ಸಾಕಷ್ಟು ಸಹಾಯ ಮಾಡಿದ್ದಾಗಿ ತಿಳಿಸಿದರು.ನಂತರ ಮಾತನಾಡಿದ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಕಷ್ಟು ಯೋಜನೆ ರೂಪಿಸಿದ್ದು, ಇದು ಯಶಸ್ವಿಯಾಗಿದೆ ಎಂದು ವಿವರ ನೀಡಿದರು. ಕಾರ್ಮಿಕ       ಇಲಾಖೆಯ ಪರವಾಗಿ ಮಾತನಾಡಿದ ಅಧಿಕಾರಿ ಗೋವಿಂದಪ್ಪ, ಮಕ್ಕಳ ರಕ್ಷಣೆಗಾಗಿಯೇ ಎರಡು ಶಾಲೆಗಳನ್ನು ತೆರೆದಿದ್ದು, ಅಲ್ಲಿ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಹಲವಾರು ವ್ಯವಸ್ಥೆ ಮಾಡಲಾಗಿದೆ ಎಂದರು.ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಂಡ ಮಕ್ಕಳಿಗೆ ಸರ್ವಶಿಕ್ಷಣ ಅಭಿಯಾನ ಸೇರಿದಂತೆ ಹಲವು ಯೋಜನೆಗಳ ಮೂಲಕ ಶಿಕ್ಷಣ ನೀಡಲಾಗುತ್ತದೆ. ವಸತಿ ಶಾಲೆಗಳಿಗೆ ಸೇರಿಸಲಾಗುತ್ತಿದೆ ಎಂದು ಹೇಳಿದರು.ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್, ಮನೆಕೆಲಸದಲ್ಲಿ ತೊಡಗಿಕೊಂಡಿರುವ ಮಕ್ಕಳನ್ನು ಶೈಕ್ಷಣಿಕ ಪ್ರಗತಿಗೆ ಇಲಾಖೆ ಸಹಕರಿಸಬೇಕು. ಮೂರು ತಿಂಗಳಿಗೊಮ್ಮೆ ಸಂಬಂಧಪಟ್ಟ ಇಲಾಖೆಗಳು ಸಭೆ ನಡೆಸಬೇಕು. ಸಾಕಷ್ಟು ಪ್ರಚಾರ ಮಾಡಿ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.ಕಾರ್ಯಕ್ರಮ ಆಯೋಜಿಸಿದ್ದ ಪೀಪಲ್ಸ್ ಲೀಗಲ್ಸ್ ಫೋರಂನ ಪಿ.ಪಿ. ಬಾಬುರಾಜ್ ಹಾಗೂ ಸಾಹಿತಿ ಶಿವರಾಮ ಕಾಡನಕುಪ್ಪೆ ಅವರು, ಎಲ್ಲರ ಮನವಿ ಆಲಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಗ್ರ ತಂಡ ರಚನೆ ಮಾಡುವುದು ಹಾಗೂ ಬಾಲಕಾರ್ಮಿಕ ಪದ್ಧತಿ ಇರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಲು ಮನವಿ ಮಾಡಲು ನಿರ್ಧಾರ ಕೈಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry