ಗುರುವಾರ , ಏಪ್ರಿಲ್ 15, 2021
20 °C

ಡಿಸಿ ಮನ್ನಾ ಜಮೀನು ತೆರವು ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಲಿತರ ಸಮಸ್ಯೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 1700 ಎಕರೆ ಡಿ.ಸಿ ಮನ್ನಾ ಭೂಮಿಯನ್ನು ಶೀಘ್ರ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ. ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬ್ರಿಟಿಷರ ಆಡಳಿತ ಅವಧಿಯಿಂದಲೂ ಜಿಲ್ಲೆಯಾದ್ಯಂತ 7,600 ಎಕರೆ ಜಮೀನನ್ನು ಪರಿಶಿಷ್ಟ ಜಾತಿ-ಪಂಗಡಕ್ಕೆ ಮೀಸಲಾಗಿ ಇರಿಸಲಾಗಿತ್ತು. ಅದರಲ್ಲಿ 5800 ಎಕರೆ ಈಗಾಗಲೇ ಅವರಿಗೆ ವಿತರಿಸಲಾಗಿದೆ. ಉಳಿದ 1800 ಎಕರೆಯಲ್ಲಿ ಸುಮಾರು 80 ಎಕರೆಯಷ್ಟು ಜಿಲ್ಲಾಡಳಿತದ ಬಳಿ ಇದ್ದು, ಉಳಿದ ಭೂಮಿ ಒತ್ತುವರಿಯಾಗಿದೆ ಎಂದು ವಿವರ ನೀಡಿದರುಒತ್ತುವರಿ ಭೂಮಿಯನ್ನು ಕೆಲವೆಡೆ ಶಾಲೆ, ಕಾಲೇಜು, ಪಂಚಾಯಿತಿ, ಆಟದ ಮೈದಾನದಂತಹ ಸಾರ್ವಜನಿಕ ಕೆಲಸಕ್ಕೆ ಮೀಸಲಿರಿಸಲಾಗಿದ್ದು, ಹೆಚ್ಚಿನ ಭಾಗ ಶ್ರೀಮಂತರು ಸೇರಿದಂತೆ ಖಾಸಗಿಯವರಿಂದ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಿ ನಿಜವಾದ ಫಲಾನುಭವಿಗಳಿಗೆ ವಿತರಿಸಲು ಜಿಲ್ಲಾಡಳಿತ ಮುಂದಾಗಿದೆ. ಒತ್ತುವರಿಯಾದ ಭೂಮಿಯನ್ನು ಆಯಾ ತಾಲ್ಲೂಕು ಆಡಳಿತದಿಂದ ಗುರುತಿಸಿ ವರದಿ ತಯಾರಿಸಲಾಗಿದೆ ಎಂದು ಹೇಳಿದರು.ದಲಿತರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಒತ್ತುವರಿ ತೆರವು ಕಾರ್ಯಾಚರಣೆ ನಿಟ್ಟಿನಲ್ಲಿ ಈಗಾಗಲೇ 24 ಎಕರೆ ಜಮೀನು ತೆರವುಗೊಳಿಸಿ ನೈಜ ಫಲಾನುಭವಿಗಳಿಗೆ ನೇರ ಹಸ್ತಾಂತರ ಮಾಡಲಾಗಿದೆ ಎಂದರು.ಅಂಬೇಡ್ಕರ್ ಭವನಕ್ಕೆ ನಿವೇಶನ: ನಿವೇಶನ ದೊರೆಯದೆ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಳಂಬವಾಗಿತ್ತು. ಉರ್ವ ಶಾಲೆ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಎರಡು ಎಕರೆ ಜಮೀನು ಗುರುತಿಸಿ ಮೀಸಲಿಟ್ಟಿದೆ ಎಂದರು.

 

ಗಿರಿಜನರಿಗೆ ಭೂಮಿ, ಮನೆ ಕಟ್ಟಿಕೊಡುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲ್ಲೂಕು ಸುಲ್ಕೇರಿಯಲ್ಲಿ 200 ಎಕರೆ ಜಮೀನು ಗುರುತಿಸಿ ಬಳಸಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಜಿಲ್ಲಾಡಳಿತ ಸೂಚಿಸಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಿಸಲು ಹಾಗೂ ನಿವೇಶನ ನೀಡಲು 367 ಎಕರೆ ಜಮೀನು ಗುರುತಿಸಲಾಗಿದ್ದು, ಪಟ್ಟಣದಲ್ಲಿ 42 ಎಕರೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 325 ಎಕರೆ ಜಿಲ್ಲಾಡಳಿತ ಮೀಸಲಿಟ್ಟಿದೆ. ಜಿಲ್ಲೆಯಲ್ಲಿ ಪಿಟಿಸಿಎಲ್ ಕಾಯ್ದೆಯನ್ವಯ ಪರಿಶಿಷ್ಟ ಜಾತಿ-ಪಂಗಡಕ್ಕೆ ಮೀಸಲಾದ ಜಮೀನನ್ನು ಬೇರೆಯವರು ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ತೆರವುಗೊಳಿಸುವುದಾಗಿ ಹೇಳಿದರು.ಸಂವಿಧಾನ ರಚನೆಯಾಗಿ 60 ವರ್ಷ ಕಳೆದರೂ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಸಂವಿಧಾನದ ಕನಸು ನನಸಾಗಿದೆ ಎಂದು ಹೇಳಲು ಸಾಧ್ಯವಿಲ್ಲ.ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆ ಬೊಟ್ಟು ಮಾಡುತ್ತೇವೆ. ಇದರೊಟ್ಟಿಗೆ ಹೊಣೆಗಾರಿಕೆಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ದಸಂಸ ಜಿಲ್ಲಾ ಉಪ ಪ್ರಧಾನ ಸಂಚಾಲಕ ಚಂದು ಎಲ್. ಬೆಳ್ತಂಗಡಿ, ಅಂಬೇಡ್ಕರ್ ದಲಿತರ ಅಭ್ಯುದಯಕ್ಕೆ ಹೇಳಿಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟದ ಮಂತ್ರದ ನೆಲೆಯಲ್ಲಿಯೇ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮುನ್ನಡೆಯುತ್ತಿದೆ ಎಂದರು.ದಸಂಸ ಬಡ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿ ದಕ್ಷಿಣ ಕನ್ನಡ  ಜಿಲ್ಲಾ ಸಂಚಾಲಕ ಎಸ್.ಪಿ.ಆನಂದ, ಮಂಗಳೂರು ವಿವಿ ಸಹ ಪ್ರಾಧ್ಯಾಪಕ ಡಾ.ಉದಯ ಬಾರ್ಕೂರ್, ಮೇಯರ್ ಪ್ರವೀಣ್, ಪಾಲಿಕೆ ಸದಸ್ಯೆ ಅಪ್ಪಿ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಕೆ.ರೋಹಿತಾಕ್ಷ, ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಅನಿತಾ ಬೆಳ್ತಂಗಡಿ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಗಣೇಶ್ ನಿಡ್ಲೆ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.