ಬುಧವಾರ, ನವೆಂಬರ್ 13, 2019
23 °C
ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ - 2013

ಡಿಸ್ಟಿಲರಿ, ಪಾನೀಯ ಉಗ್ರಾಣ ಮೇಲೆ ಕ್ಯಾಮೆರಾ ಕಣ್ಗಾವಲು

Published:
Updated:

ಹುಬ್ಬಳ್ಳಿ: ಡಿಸ್ಟಿಲರಿಗಳು ಹಾಗೂ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿಎಲ್) ನಿತ್ಯದ ವಹಿವಾಟಿನ ಚಿತ್ರೀಕರಣ ನಡೆಸುವ ಮೂಲಕ ಚುನಾವಣೆ ವೇಳೆ ಮತದಾರರಿಗೆ ಅಕ್ರಮ ಮದ್ಯ ಹಂಚಿಕೆ ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.ಅಕ್ರಮ ಮದ್ಯ ಸಾಗಾಟ ತಡೆಯಲು ಅಬಕಾರಿ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದರೂ ಕೂಡ ಚುನಾವಣಾ ಆಯೋಗವು ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯ ತಯಾರಿಕೆ ಹಾಗೂ ಮಾರಾಟ ಪ್ರಕ್ರಿಯೆಗೆ ಕಡಿವಾಣ ಹಾಕುವ ಮೂಲಕ ಅಕ್ರಮಕ್ಕೆ ಅವಕಾಶವಾಗದಂತೆ ತಡೆಯಲು ಕ್ರಮ ಕೈಗೊಂಡಿದೆ.ಚುನಾವಣಾ ಆಯೋಗದ ಆದೇಶದಂತೆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾದ ಮಾರ್ಚ್ 20ರಿಂದಲೇ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮದ್ಯ ತಯಾರಿಕೆ ಡಿಸ್ಟಿಲರಿಗಳು ಹಾಗೂ ರಾಜ್ಯ ಪಾನೀಯ ನಿಗಮದ ಸಗಟು ಮಾರಾಟ ಉಗ್ರಾಣಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.ಅಲ್ಲಿನ ನಿತ್ಯದ ವಿದ್ಯಮಾನಗಳನ್ನು ಚಿತ್ರೀಕರಿಸಿ ಪ್ರತೀ 24 ಗಂಟೆಗೊಮ್ಮೆ ವಿಡಿಯೋ ಸಿ.ಡಿಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ತಲುಪಿಸಲಾಗುತ್ತಿದೆ.ಶೇ 20ರಷ್ಟು ಹೆಚ್ಚುವರಿ ಮಾರಾಟಕ್ಕೆಅವಕಾಶ:  ಚುನಾವಣೆ ವೇಳೆ ಹಂಚಲು ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಮದ್ಯ ಖರೀದಿಸಿ ಸಂಗ್ರಹಿಸಿ ಇಡುವ ಪ್ರವೃತ್ತಿ ತಪ್ಪಿಸಲು ಆಯೋಗ ನಿಯಮಾವಳಿ ರೂಪಿಸಿದೆ. ಅದರಂತೆ ಮದ್ಯ ಮಾರಾಟಗಾರ ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಮಾರಾಟ ಮಾಡಿದ್ದ ಮದ್ಯದ ಪ್ರಮಾಣದ ದಾಖಲೆ ಪಡೆದು ಅದಕ್ಕಿಂತ ಶೇ 20ರಷ್ಟು ಮಾತ್ರ ಹೆಚ್ಚಿನ ಮದ್ಯ ಪೂರೈಸಲು ಪಾನೀಯ ನಿಗಮಕ್ಕೆ ಸೂಚನೆ ನೀಡಿದೆ.ಎರಡು ಕ್ವಾರ್ಟರ್‌ಗಿಂತ (360 ಮಿ.ಲೀ) ಹೆಚ್ಚು ಮದ್ಯವನ್ನು ಪಾರ್ಸೆಲ್ ಕೊಂಡೊಯ್ಯುವ ಗ್ರಾಹಕರ ಬಗ್ಗೆ ನಿಗಾ ವಹಿಸುವಂತೆ, ಅದು ಪದೇ ಪದೇ ಪುನರಾವರ್ತನೆಗೊಂಡಲ್ಲಿ ಆಯಾ ಪ್ರದೇಶದ ನೀತಿ ಸಂಹಿತೆ ಪಾಲನೆ ಅಧಿಕಾರಿಗಳಿಗೆ ಅಥವಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.ಗಡಿ ಪ್ರದೇಶದ ಅಧಿಕಾರಿಗಳ ಸಭೆ: ಮಹಾರಾಷ್ಟ್ರದಲ್ಲಿ ಬಳಕೆಯಲ್ಲಿರುವ ಅಗ್ಗದ ಮದ್ಯ `ಸಂತ್ರಾ' ಹಾಗೂ ಗೋವಾದಿಂದ `ಫೆನ್ನಿ'ಯನ್ನು ರಾಜ್ಯದೊಳಗೆ ತರುವುದನ್ನು ತಡೆಯಲು ರಾಜ್ಯ ಅಬಕಾರಿ ಇಲಾಖೆ ಆಯುಕ್ತ ಶಂಭುದಯಾಳ ಮೀನಾ ಏಪ್ರಿಲ್ 16ರಂದು ಬೆಳಗಾವಿಯಲ್ಲಿ ಮೂರು ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮಹಾರಾಷ್ಟ್ರ ಹಾಗೂ ಗೋವಾ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿ ಅಕ್ರಮ ತಡೆಯಲು ಅಧಿಕಾರಿಗಳ ಮಧ್ಯೆ ಪರಸ್ಪರ ಸಮನ್ವಯ ಸಾಧಿಸುವಂತೆ ಸೂಚನೆ ನೀಡಿದ್ದಾರೆ.ಧಾರವಾಡ ಜಿಲ್ಲೆಯಲ್ಲಿ  ಇಲಾಖೆಯಿಂದ 10 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮುಖ್ಯವಾಗಿ ಗೋವಾದಿಂದ ಬರುವ ವಾಹನಗಳ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಹಾಗೂ ಧಾರವಾಡ ತಾಲ್ಲೂಕಿನ ಗರಗದಲ್ಲಿ ತಲಾ ಒಂದು ಡಿಸ್ಟಿಲರಿ ಇದ್ದು, ಅಲ್ಲಿನ ಚಟುವಟಿಕೆಗಳ ಬಗ್ಗೆ ಜಿಲ್ಲಾ ಚುನಾವಣಾ ಕಚೇರಿಗೆ ನಿತ್ಯ ಮಾಹಿತಿ ನೀಡಲಾಗುತ್ತಿದೆ ಎನ್ನುತ್ತಾರೆ ಅಬಕಾರಿ ಇಲಾಖೆಯ ಆಯುಕ್ತ ವಿ.ಎಸ್.ರಾಣೆ.`ಹಿಂದೆಲ್ಲಾ ಸಾಮಾನ್ಯವಾಗಿ ಚುನಾವಣೆಯಲ್ಲಿ ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಕ್ರಿಯೆಯ ನಂತರ ಮದ್ಯ ಮಾರಾಟ ಹಾಗೂ ಸಾಗಾಣೆಯ ಬಗ್ಗೆ ಇಲಾಖೆ ಹೆಚ್ಚಿನ ನಿಗಾ ವಹಿಸುತ್ತಿತ್ತು. ಆದರೆ ಈ ಬಾರಿ ಚುನಾವಣಾ ಆಯೋಗ ನೀತಿಸಂಹಿತೆ ಜಾರಿಯ ದಿನದಿಂದಲೇ ಅದಕ್ಕೆ ಒತ್ತು ನೀಡಿದೆ. ಇದರ ಪರಿಣಾಮ ಈಗಾಗಲೇ ಕಾಣುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಹಣ, ಬಂಗಾರ, ಸೀರೆಗಳು ದೊರೆತಷ್ಟು ಮದ್ಯ ದೊರೆತಿಲ್ಲ. ಇದು ಧನಾತ್ಮಕ ಬೆಳವಣಿಗೆ' ಎಂದು ರಾಣೆ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)