ಮಂಗಳವಾರ, ಏಪ್ರಿಲ್ 13, 2021
30 °C
ಹೈಕೋರ್ಟ್‌ನಲ್ಲಿ ಸರ್ಕಾರದ ವಾಗ್ದಾನ

ಡಿ. 4ಕ್ಕೆ ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ವಾರ್ಡ್‌ವಾರು ಮೀಸಲಾತಿ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನು ಕಡೆಗಣಿಸಿಲ್ಲ ಎಂದು ಹೇಳಿರುವ ರಾಜ್ಯ ಸರ್ಕಾರ, ವಾರ್ಡ್‌ವಾರು ಮೀಸಲಾತಿ ಕರಡು ಪಟ್ಟಿಯನ್ನು ಡಿಸೆಂಬರ್ 4ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ.ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಗಳನ್ನು ಸಲ್ಲಿಸಲು ಡಿ. 12ರವರೆಗೆ ಕಾಲಾವಕಾಶ ನೀಡಲಾಗುವುದು, ಡಿ. 17ರಂದು ಅಥವಾ ಅದಕ್ಕಿಂತ ಮೊದಲೇ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು ಎಂದೂ ಸರ್ಕಾರ ತಿಳಿಸಿತು. ಮೇಯರ್, ಉಪ ಮೇಯರ್, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಜನವರಿ 31ರೊಳಗೆ ಅಂತಿಮಗೊಳಿಸುವಂತೆ ನ್ಯಾಯಪೀಠ, ಸರ್ಕಾರಕ್ಕೆ ಸೂಚಿಸಿತು.ರಾಜ್ಯದ 7 ಮಹಾನಗರ ಪಾಲಿಕೆಗಳು ಸೇರಿದಂತೆ 200ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಬರುವ ಫೆಬ್ರುವರಿ - ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಸರ್ಕಾರ ಇದುವರೆಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿ ನೀಡಿಲ್ಲ. ಪಟ್ಟಿಯನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಎಸ್. ವಿಜಯಶಂಕರ್, `ಮೀಸಲಾತಿ ಪಟ್ಟಿ ಸಿದ್ಧಪಡಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ನಿಯಮಾವಳಿ ರೂಪಿಸಿ, ನ. 9ರಂದು ಮಾಹಿತಿ ನೀಡಲಾಗಿದೆ. ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿಲ್ಲ. ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಎಲ್ಲ ಸಹಕಾರ ನೀಡಲಾಗುವುದು' ಎಂದು ಪ್ರಮಾಣಪತ್ರದ ಮೂಲಕ ವಿವರಣೆ ನೀಡಿದರು.2001ರ ಜನಗಣತಿಯ ಆಧಾರದಲ್ಲಿ ಈಗ ಮೀಸಲಾತಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆದರೆ 2011ರ ಜನಗಣತಿಯಲ್ಲಿ ಕಂಡುಕೊಂಡಿರುವ ಅಂಕಿಸಂಖ್ಯೆಗಳು ಇನ್ನಷ್ಟೇ ದೊರೆಯಬೇಕಿದೆ. ಅದು ದೊರೆತ ನಂತರ ವಾರ್ಡ್‌ಗಳು, ಪಟ್ಟಣ ಪಂಚಾಯಿತಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇರುತ್ತದೆ. ಹೀಗೆ ಹೆಚ್ಚಳವಾಗುವ ವಾರ್ಡ್ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಈಗ ಚುನಾವಣೆ ನಡೆಸುವುದು, 2011ರ ಜನಗಣತಿಯ ಅಂಕಿಗಳು ದೊರೆತ ನಂತರ ರಚನೆಯಾಗುವ ಹೊಸ ವಾರ್ಡ್‌ಗಳಿಗೆ ಮತ್ತೊಮ್ಮೆ ಚುನಾವಣೆ ನಡೆಸುವುದು ಸರ್ಕಾರಕ್ಕೆ ಹೊರೆಯಾಗಬಹುದು ಎಂದೂ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಗರಿಷ್ಠ ಐದು ವಾರ ಸಾಕು. ಮೀಸಲಾತಿ ಪಟ್ಟಿಯನ್ನು ಡಿಸೆಂಬರ್ 25ರಂದು ಸಲ್ಲಿಸಿದರೂ, ನಿಗದಿತ ಸಮಯಕ್ಕೆ ಚುನಾವಣೆ ನಡೆಸುವುದು ಕಷ್ಟವಾಗಲಾರದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಸಂಭಾವ್ಯ ಆಕ್ಷೇಪಗಳನ್ನು ಪರಿಗಣಿಸಿ ಅಂತಿಮ ಪಟ್ಟಿಯನ್ನು ಡಿ. 18ರಂದು ನೀಡಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು. ಆದರೆ ಡಿ. 17ರಂದೇ ಅಂತಿಮ ಪಟ್ಟಿ ನೀಡುವುದಾಗಿ ವಿಜಯಶಂಕರ್ ಅವರು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇದೇ 8ರಂದು ನಡೆಸಿದ್ದ ನ್ಯಾಯಪೀಠ, `ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಎರಡು ವಾರಗಳಲ್ಲಿ ಸಲ್ಲಿಸಬೇಕು' ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.