ಡೀನ್‌ಗಳ ಸಮಿತಿ ರಚನೆಗೆ ತೀರ್ಮಾನ

7
ಬೆಂಗಳೂರು ವಿ.ವಿಯಲ್ಲಿ ವಿವಿಧ ಕೋರ್ಸ್‌ಗಳಿಗೆ ಮಾನ್ಯತೆ

ಡೀನ್‌ಗಳ ಸಮಿತಿ ರಚನೆಗೆ ತೀರ್ಮಾನ

Published:
Updated:

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ `ಸ್ಕೂಲ್' ಪರಿಕಲ್ಪನೆಯಲ್ಲಿ ಆರಂಭವಾಗಿರುವ 5ವರ್ಷಗಳ ಇಂಟೆಗ್ರೇಟೆಡ್ ಕೋರ್ಸ್‌ಗಳಿಗೆ ಮಾನ್ಯತೆ ನೀಡುವ ಮೊದಲು ಈ ಪದವಿಗಳಿಗೆ ಇರುವ ಉದ್ಯೋಗವಕಾಶ ಸೇರಿ  ಮತ್ತಿತರ ವಿಚಾರಗಳ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲು ಡೀನ್‌ಗಳ ಮತ್ತೊಂದು ಸಮಿತಿ ರಚಿಸಲು ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸಭೆ ತೀರ್ಮಾನಿಸಿದೆ.`ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸ್ (ಇಂಟೆಗ್ರೇಟೆಡ್ ಎಂಎಸ್ಸಿ), ಸ್ಕೂಲ್ ಆಫ್ ಬುಸಿನೆಸ್ ಸ್ಟಡೀಸ್ (ಇಂಟೆಗ್ರೇಟೆಡ್ ಎಂಬಿಎಸ್), ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್ (ಇಂಟೆಗ್ರೇಟೆಡ್ ಎಂಎ) ಪದವಿಗಳನ್ನು 2007-08ನೇ ಸಾಲಿನಲ್ಲಿ ಆರಂಭಿಸಲಾಗಿತ್ತು. ಇದಕ್ಕೆ ವಿದ್ಯಾವಿಷಯಕ ಪರಿಷತ್ತಿನ ಮಾನ್ಯತೆ ಪಡೆಯಬೇಕಿದೆ' ಎಂದು ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ ತಿಳಿಸಿದರು.ಸದಸ್ಯ ಪ್ರೊ.ರಾಮಚಂದ್ರ ಗೌಡ ಮಾತನಾಡಿ, `ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ' ಎಂದರು. ಸದಸ್ಯ ಜಗದೀಶ ಪ್ರಕಾಶ್ ಸಹಮತ ವ್ಯಕ್ತಪಡಿಸಿ, `ಈಗಿರುವ ಕೆಲವು ವಿಜ್ಞಾನ ಪದವಿಗಳಿಗೆ ಈಗ ಉದ್ಯೋಗವಕಾಶ ಕಡಿಮೆಯಾಗಿದೆ.

ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವಕಾಶಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸುವುದು ಉತ್ತಮ' ಎಂದರು. ಬಹುತೇಕ ಸದಸ್ಯರು ಈ ಪ್ರಸ್ತಾಪಕ್ಕೆ ಸಹಮತ ಸೂಚಿಸಿದರು. 3 ವಿಭಾಗಗಳ ಡೀನ್‌ಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.  ವಿವಿಯ ವಿವಿಧ ವಿಭಾಗಗಳ ಸ್ಥಿತಿ ಅಧ್ಯಯನ ನಡೆಸಲು ವಿಶ್ರಾಂತ ಕುಲಪತಿ ಅವರ ನೇತೃತ್ವದಲ್ಲಿ ಇಬ್ಬರು ಸಿಂಡಿಕೇಟ್ ಹಾಗೂ ಇಬ್ಬರು ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು' ಎಂದು ಸದಸ್ಯ ಕರಣ್ ಕುಮಾರ್ ಸಲಹೆ ನೀಡಿದರು.

ಹಂಗಾಮಿ ಕುಲಪತಿ ಡಾ.ಎನ್. ರಂಗಸ್ವಾಮಿ ಸಹಮತ ವ್ಯಕ್ತಪಡಿಸಿ, `ಇದೊಂದು ಉತ್ತಮ ಪ್ರಸ್ತಾಪ. ಸಮಿತಿ ರಚಿಸಿ ವಿಭಾಗಗಳ ಮೌಲ್ಯಮಾಪನ ಮಾಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ಜಿಂಕೆ ಉದ್ಯಾನಕ್ಕೆ ವಿರೋಧ: ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಜಿಂಕೆ ಉದ್ಯಾನ ಆರಂಭಿಸುವ ಪ್ರಸ್ತಾಪವನ್ನು ಕೈಬಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.`ಈಗ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲ. ಪ್ರಾಣಿಗಳನ್ನು ಇಲ್ಲಿಗೆ ತಂದು ಶೋಷಣೆ ನಡೆಸುವುದು ಬೇಡ' ಎಂದು ಸದಸ್ಯರು ವಾದಿಸಿದರು. ಬಹುತೇಕ ಸದಸ್ಯರು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೈಬಿಡಲು ತೀರ್ಮಾನಿಸಲಾಯಿತು.2012-13ನೇ ಸಾಲಿನಲ್ಲಿ ನಗರದ ಭಗವಾನ್ ಬುದ್ಧ ಕಾಲೇಜಿನ ಸಂಯೋಜನಾ ನವೀಕರಣವನ್ನು ಮುಂದುವರಿಸುವ ಪ್ರಸ್ತಾಪಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.`ಈ ಕಾಲೇಜು 26 ವರ್ಷಗಳಿಂದ ಇದೆ. ಹಲವು ಬಾರಿ ಸ್ಥಳೀಯ ವಿಚಾರಣಾ ಸಮಿತಿಗಳು ಸೂಚನೆ ನೀಡಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ. ಇಂತಹ ಕಾಲೇಜಿಗೆ ಮಾನ್ಯತೆ ನೀಡುವುದರಿಂದ ತಪ್ಪು ಸಂದೇಶ ನೀಡಿದಂತಾಗುತ್ತದೆ' ಎಂದು ಸದಸ್ಯರು ವಾದಿಸಿದರು.`ಈ ಕಾಲೇಜಿನವರು ಹೈಕೋರ್ಟ್ ಮೊರೆ ಹೋದ ಕಾರಣ ಅಲ್ಲಿನ ಆದೇಶ ಪರಿಗಣಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ' ಎಂದು ಡಾ.ಎನ್. ರಂಗಸ್ವಾಮಿ ತಿಳಿಸಿದರು. `ಇಂತಹ ಕಾಲೇಜಿಗೆ ಮಾನ್ಯತೆ ನವೀಕರಣ ಮಾಡುವ ಅಗತ್ಯವೇ ಇಲ್ಲ.

ವಿವಿ ಪರ ವಕೀಲರು ಕೋರ್ಟ್‌ಗೆ ಸತ್ಯ ಸಂಗತಿಯನ್ನು ಮನವರಿಕೆ ಮಾಡಿಕೊಡಬೇಕು' ಎಂದು ಸದಸ್ಯ ಕರಣ್ ಕುಮಾರ್ ಗಮನ ಸೆಳೆದರು. ಈ ವಿಚಾರವನ್ನು ಮುಂದಿನ ಸಭೆಗೆ ಮುಂದೂಡಲು ನಿರ್ಧರಿಸಲಾಯಿತು.  ಹಂಗಾಮಿ ಕುಲಸಚಿವ ಡಾ.ಟಿ.ಡಿ.ಕೆಂಪರಾಜು, ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ಆರ್. ಸೋಮಶೇಖರ್ ಹಾಜರಿದ್ದರು.`ಸರ್ಕಾರಕ್ಕೆ ಪತ್ರ ಬರೆಯಬೇಕು'

`ಮೂಲಸೌಕರ್ಯದ ಕೊರತೆ ಎದುರಿಸುತ್ತಿರುವ ಬಿ.ಇಡಿ ಕಾಲೇಜುಗಳಿಗೆ ಷರತ್ತಿನ ಮಾನ್ಯತೆ ನೀಡುವ ಅಗತ್ಯ ಏನಿತ್ತು. ಬಿ.ಇಡಿ ಕಾಲೇಜುಗಳಿಗೆ ಷರತ್ತಿನ ಮಾನ್ಯತೆ ನೀಡಿರುವ ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಊರ್ಜಿತ ಮಾಡಬೇಡಿ ಎಂದು ಸರ್ಕಾರಕ್ಕೆ ಕೂಡಲೇ ಪತ್ರ ಬರೆಯಬೇಕು' ಎಂದು ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಆಗ್ರಹಿಸಿದರು.ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಅವರು, `ವಿದ್ಯಾ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು. ಸುಮ್ಮನೆ ಫಲಕ ಹಾಕಿಕೊಂಡಿರುವವರಿಗೆ ಕಾಲೇಜಿನ ಮಾನ್ಯತೆ ನೀಡುವುದು ಬೇಡ' ಎಂದು ಸಲಹೆ ನೀಡಿದರು.ಸದಸ್ಯರಾದ ಡಾ.ಮಧುಮತಿ ಹಾಗೂ ಪ್ರೊ.ನಾರಾಯಣಸ್ವಾಮಿ ಮಾತನಾಡಿ, `ಹಂಗಾಮಿ ಕುಲಪತಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಷರತ್ತಿನ ಮಾನ್ಯತೆ ನೀಡಿರುವುದಕ್ಕೆ ಈಗಲೂ ವಿರೋಧ ಇದೆ' ಎಂದರು. ಸದಸ್ಯೆ ಜ್ಯೋತಿ ವಿಜಯ್, `ಕಾಲೇಜುಗಳಿಗೆ ಮಾನ್ಯತೆ ಕೊಡುವ ಅಧಿಕಾರ ಸಿಂಡಿಕೇಟ್ ಸಭೆಗೆ ಇಲ್ಲ' ಎಂದು ಕಿಡಿಕಾರಿದರು.

`ಮೂಲಸೌಕರ್ಯ ಸುಧಾರಣೆಗೆ ಕಾಲೇಜುಗಳಿಗೆ ಕಾಲಾವಕಾಶ ಕೊಡುತ್ತಾ ಹೋದರೆ ಪರಿಸ್ಥಿತಿ ಸುಧಾರಣೆಯೇ ಆಗುವುದಿಲ್ಲ. ಸಿಂಡಿಕೇಟ್ ಸಭೆಯಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕಿತ್ತು' ಎಂದು ಸದಸ್ಯ ಪ್ರೊ.ರಾಮಚಂದ್ರ ಗೌಡ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry