ಡೀಸೆಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ

7

ಡೀಸೆಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ

Published:
Updated:

ನವದೆಹಲಿ: ಪೆಟ್ರೋಲ್ ಬೆಲೆ ಏರಿಸಿ ಯುಪಿಎ ಒಳಗೆ ಮತ್ತು ಹೊರಗೆ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಸರ್ಕಾರ, ಸದ್ಯಕ್ಕೆ ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಬೆಲೆ ಏರಿಕೆ ಮಾಡದಿರಲು ನಿರ್ಧರಿಸಿದೆ.

`ಡೀಸೆಲ್, ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ಬೆಲೆ ಏರಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ~ ಎಂದು ಪೆಟ್ರೋಲಿಯಂ ಸಚಿವ ಎಸ್.ಜೈಪಾಲ ರೆಡ್ಡಿ ಸೋಮವಾರ  ಪತ್ರಕರ್ತರಿಗೆ ತಿಳಿಸಿದರು.

ಸರ್ಕಾರದ ನಿಯಂತ್ರಣದಲ್ಲಿರುವ ಈ ಮೂರೂ ವಸ್ತುಗಳ ಬೆಲೆ ಏರಿಕೆ ಸಂಬಂಧ ಚರ್ಚಿಸಲು `ಹಿರಿಯ ಸಚಿವರ ಉನ್ನತಾಧಿಕಾರ ಸಮಿತಿ~ (ಇಜಿಒಎಂ) ಸೇರುವ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಿತಿ ಜೂನ್ ಒಂದರಂದು ಸಭೆ ಸೇರಿ ತೈಲ ಕಂಪೆನಿಗಳು ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚಿಸಲಿದೆ. ಸಭೆಯಲ್ಲಿ ಡೀಸೆಲ್ ಮತ್ತಿತರ ವಸ್ತುಗಳ ಬೆಲೆ ಏರಿಕೆ ಕುರಿತು ಸಮಾಲೋಚನೆ ನಡೆಯಲಿದೆ. ಈ ವಸ್ತುಗಳಿಗೂ ಸರ್ಕಾರ ಭಾರಿ ಸಹಾಯಧನ ನೀಡುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಪೆಟ್ರೋಲ್ ಬೆಲೆ ಏರಿಕೆಯಿಂದ ಹಣದುಬ್ಬರದ ಮೇಲೆ ಆಗಿರುವ ಪರಿಣಾಮ ಕುರಿತು ಚರ್ಚಿಸಲು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಕರೆದಿದ್ದ ಸಭೆಯ ಬಳಿಕ ಸದ್ಯಕ್ಕೆ ಡೀಸೆಲ್, ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ಬೆಲೆ ಏರಿಸುವ ಪ್ರಶ್ನೆ ಇಲ್ಲ ಎಂದು ಜೈಪಾಲ್ ರೆಡ್ಡಿ ಖಚಿತಪಡಿಸಿದರು.

ಹಣದ ಮೌಲ್ಯ ಕುಸಿದು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದರೂ ಪ್ರಣವ್ ಮುಖರ್ಜಿ ನೇತೃತ್ವದ ಇಂಧನದ ಮೇಲಿನ ಉನ್ನತಾಧಿಕಾರ ಸಮಿತಿ ಜೂನ್‌ನಿಂದ ಸಭೆ ಸೇರಿಲ್ಲ.

ಈಗ ನಡೆದಿರುವುದು `ಅಂತರ ಸಚಿವಾಲಯದ ತಂಡ~ದ ಸಭೆ. ಹಣದುಬ್ಬರದ ಪರಿಣಾಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಈ ವಿಷಯದಲ್ಲಿ ಸೂಕ್ಷ್ಮ ಒಳನೋಟಗಳನ್ನು ನೀಡುವಂತೆ ತಮಗೆ ಮನವಿ ಮಾಡಲಾಗಿತ್ತು. ಹೀಗಾಗಿ ಸಭೆಯಲ್ಲಿ ಭಾಗವಹಿಸಿ, `ಡೀಸೆಲ್ ಬೆಲೆ ಏರಿಕೆ, ಹಣದುಬ್ಬರ ಮೇಲೆ ಅದರ ಪರಿಣಾಮ~ ಕುರಿತು ವಿವರಿಸಿದ್ದಾಗಿ ಸಚಿವರು ತಿಳಿಸಿದರು.

ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸುವ ಕುರಿತು ತೀರ್ಮಾನ ಮಾಡಬೇಕಿರುವ `ಇಜಿಒಎಂ~ ಸಭೆ ದಿನಾಂಕ ನಿಗದಿಯಾಗಿಲ್ಲ. ಉನ್ನತ ಅಧಿಕಾರದ ಸಮಿತಿ 2010ರ ಜೂನ್ ತಿಂಗಳಲ್ಲಿ ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ತೀರ್ಮಾನ ಜಾರಿ ತಡೆ ಹಿಡಿಯಲಾಗಿದೆ.

ಸದ್ಯಕ್ಕೆ ಇಜಿಒಎಂ ಸಭೆ ನಡೆಯುವುದಿಲ್ಲ. ಈ ತಿಂಗಳಂತೂ ಸೇರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಬಿಸಿ ಏರಿರುವ ವಾತಾವರಣ ಸ್ವಲ್ಪ ತಣ್ಣಗಾಗಲಿ ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಉನ್ನತಾಧಿಕಾರ ಸಮಿತಿಯಲ್ಲಿ ಯುಪಿಎ ಮಿತ್ರಪಕ್ಷಗಳಾದ ಟಿಎಂಸಿ ಹಾಗೂ ಡಿಎಂಕೆಗೂ ಪ್ರಾತಿನಿಧ್ಯವಿದ್ದು, ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಇವೆರಡೂ ಪಕ್ಷಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿವೆ.

ಇದಲ್ಲದೆ, ಡೀಸೆಲ್ ಕಾರುಗಳ ಮೇಲೆ ಹೆಚ್ಚು ಅಬಕಾರಿ ಸುಂಕ ಹೇರುವ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಕೈಗಾರಿಕಾ ಸಚಿವಾಲಯ ತೀವ್ರ ವಿರೋಧ ಮಾಡುತ್ತಿದೆ. ಆರ್ಥಿಕ ಕೊರತೆ ಕಡಿಮೆ ಮಾಡಿಕೊಳ್ಳಲು ಡೀಸೆಲ್ ಬೆಲೆ ಏರಿಸಬೇಕಾದ ಅನಿವಾರ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಪೆಟ್ರೋಲ್ ಬೆಲೆ ಏರಿಸಿದ ಬಳಿಕ ಡೀಸೆಲ್ ದರವೂ ಹೆಚ್ಚಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಪೆಟ್ರೋಲ್ ಬೆಲೆ ಏರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಹೆಚ್ಚಿಸುವ ತೀರ್ಮಾನಕ್ಕೆ ಸರ್ಕಾರ ಕೈ ಹಾಕಿಲ್ಲ.

ಪೆಟ್ರೋಲ್ ಬೆಲೆ ಕೊಂಚ ಕಡಿತ?

ಭಾರತೀಯ ತೈಲ ನಿಗಮವು ಈ ವಾರಾಂತ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ರೂ 1.25 ರಿಂದ 1.50ರಷ್ಟು ಕಡಿತಗೊಳಿಸುವ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry