ಮಂಗಳವಾರ, ಮಾರ್ಚ್ 9, 2021
23 °C

ಡೆಂಗಿ ಸಾವು: ರಾಜ್ಯಕ್ಕೆ ಮೊದಲ ಸ್ಥಾನ

ವಿಜಯಕುಮಾರ್‌ ಸಿಗರನಹಳ್ಳಿ Updated:

ಅಕ್ಷರ ಗಾತ್ರ : | |

ಡೆಂಗಿ ಸಾವು: ರಾಜ್ಯಕ್ಕೆ ಮೊದಲ ಸ್ಥಾನ

ಬೆಂಗಳೂರು: ದೇಶದಲ್ಲಿ ಈ ವರ್ಷ ಡೆಂಗಿಯಿಂದ ಸತ್ತವರ ಸಂಖ್ಯೆಯಲ್ಲಿ ಕರ್ನಾಟಕ  ಮೊದಲ ಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯದ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ(ಎನ್‌ವಿಬಿಡಿಸಿಪಿ) ಮೌಲ್ಯಮಾಪನದಿಂದ ಈ ಅಂಶ ಬೆಳಕಿಗೆ ಬಂದಿದೆ.2015ರಲ್ಲಿ ರಾಜ್ಯದ 9 ಮಂದಿ ಸಾವನಪ್ಪಿದ್ದು, ದೆಹಲಿಯಲ್ಲಿ ಅತಿ ಹೆಚ್ಚು 15,867 ಡೆಂಗಿ ಪ್ರಕರಣ ಪತ್ತೆಯಾಗಿ 60 ಮಂದಿ ಮೃತಪಟ್ಟಿದ್ದರು.  ಈ ವರ್ಷ ಅಲ್ಲಿ 90 ಪ್ರಕರಣ ಮಾತ್ರ ಪತ್ತೆಯಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ.  ಪಂಜಾಬ್‌ನಲ್ಲಿ ಕಳೆದ ವರ್ಷ 14,123 ಮಂದಿ ಡೆಂಗಿಗೆ ತುತ್ತಾಗಿ 18 ಮಂದಿ ಸತ್ತಿದ್ದರು. ಈ ವರ್ಷ ಕೇವಲ 55 ಡೆಂಗಿ ಪ್ರಕರಣ ಪತ್ತೆಯಾಗಿದ್ದು, ಯಾರೊಬ್ಬರು ಸಾವಪ್ಪಿಲ್ಲ.ಈ ಎರಡು ರಾಜ್ಯಗಳಲ್ಲಿ ಹೆಚ್ಚಿನ ನಿಗಾ ವಹಿಸಿರುವ ಕಾರಣ ಡೆಂಗಿ ಪ್ರಕರಣ ಕಡಿಮೆಯಾಗಿದೆ. ಇನ್ನು ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಒಂದೇ ಒಂದು ಡೆಂಗಿ ಪ್ರಕರಣ ಪತ್ತೆಯಾಗಿಲ್ಲ.ರಾಜ್ಯದಲ್ಲಿ  ಕೋಲಾರ ಮತ್ತು ಬೀದರ್‌ನಲ್ಲಿ ಅತಿ ಕಡಿಮೆ ಅಂದರೆ ಮೂರು ಡೆಂಗಿ ಪ್ರಕರಣ ಮಾತ್ರ ಪತ್ತೆಯಾಗಿದೆ. ಅತೀ ಹೆಚ್ಚು 417 ಪ್ರಕರಣ  ಬೆಂಗಳೂರು ನಗರದಲ್ಲಿ ಪತ್ತೆಯಾಗಿದೆ. ಅದೃಷ್ಟವಶಾತ್ ಯಾರೂ ಸಾವನಪ್ಪಿಲ್ಲ.ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್‌ ಈಜಿಪ್ಟಿ ಎಂಬ ಸೊಳ್ಳೆಯಿಂದ  ಡೆಂಗಿ ಹರಡುತ್ತದೆ. ಜುಲೈ ತಿಂಗಳಿನ ವಾತಾವರಣ ಇದಕ್ಕೆ ಪೂರಕವಾಗಿರುವ ಕಾರಣ ಕೇಂದ್ರ ಸರ್ಕಾರ, ಈ ತಿಂಗಳನ್ನು ‘ನಿಗಾ ಮಾಸ’ ಎಂದು ಪರಿಗಣಿಸಿ ಜಾಗೃತಿ ವಹಿಸಿದೆ.ಅದರೂ ಇದೇ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಡೆಂಗಿ ಪ್ರಕರಣ ಪತ್ತೆಯಾಗಿವೆ. ಜೂನ್ ಅಂತ್ಯಕ್ಕೆ ದೇಶದಲ್ಲಿ 8,307 ಪ್ರಕರಣ ಪತ್ತೆಯಾಗಿದ್ದು, 10 ಮಂದಿ ಸಾವನಪ್ಪಿದ್ದರು. ರಾಜ್ಯದಲ್ಲಿ ಜೂನ್ ಅಂತ್ಯಕ್ಕೆ 1768 ಡೆಂಗಿ ಪ್ರಕರಣ ಪತ್ತೆಯಾಗಿದ್ದರೂ ಯಾರೂ ಮೃತಪಟ್ಟಿರಲಿಲ್ಲ.  ‘ಡೆಂಗಿ ಜ್ವರ ಬಾಧಿಸಿ ಮೃತಪಟ್ಟರೇ ಎಂದು ಪರಿಶೀಲಿಸಲು ತಜ್ಞ ವೈದ್ಯರ ಸಮಿತಿ ಜುಲೈನಲ್ಲಿ ಸಭೆ ನಡೆದಿದೆ. ಆ ಸಮಿತಿ ಕಳೆದ ಏಳು ತಿಂಗಳ ಅವಧಿಯಲ್ಲಿ ಆರು ಮಂದಿ ಡೆಂಗಿಯಿಂದ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಿದೆ’ ಎಂದು ಮಲೇರಿಯಾ ಮತ್ತು ಆನೆಕಾಲು ರೋಗ ವಿಭಾಗದ ಜಂಟಿ ನಿರ್ದೇಶಕ ಡಾ. ಶಿವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.