ಶನಿವಾರ, ಮೇ 21, 2022
23 °C

ಡೆಂಗೆ ಜ್ವರ: ಮನೆ ಮನೆ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಪಟ್ಟಣದಲ್ಲಿ ಇತ್ತೀಚೆಗೆ ಡೆಂಗೆ ರೋಗದ ಶೆಂಕೆಯಿಂದ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಲಾಯಿತು.ವೈದ್ಯಾಧಿಕಾರಿ ಹಪೀಜ್ ಡಾ.ಪುಷ್ಪಾ ಪಾಗಿ, ಆರೋಗ್ಯ ಮೇಲ್ವಿಚಾರಕ ವಿ.ಡಿ.ಬೆನ್ನೂರ ನೇತೃತ್ವದಲ್ಲಿ 18ಜನ ಆರೋಗ್ಯ ಸಿಬ್ಬಂದಿ ಲಾರ್ವಾ ಸಮೀಕ್ಷೆ ನಡೆಸಿದರು. ಪಟ್ಟಣದಲ್ಲಿ ನಾಲ್ಕು ದಿನಗಳ ವರೆಗೆ ಪ್ರತಿಯೊಂದು ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಲಾಗುವುದು. ಮೊದಲ ಹಂತವಾಗಿ ಶುಕ್ರವಾರ ಇಲ್ಲಿನ ಸಿಂಹಾಸನಪೇಟೆ, ಶಿವಾಜಿಪೇಟೆ, ಹರಿಜನ ಕಾಲೋನಿ, ಅಡೇಕಾರ ಓಣಿ, ಜಿ.ಎಸ್.ಪಾಟೀಲ ನಗರ, ಜನತಾ ಪ್ಲಾಟ್, ಕಲಾಲ ಅವರ ಓಣಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಇಂದು ಒಟ್ಟು 1100 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಹಾಗೂ 173 ಜನರ ರಕ್ತ ಲೇಪನ ಮಾಡಲಾಗಿದೆ.ಆದರೆ, ಸದ್ಯ ಡೆಂಗೆ ಸೇರಿದಂತೆ ಸಾಂಕ್ರಮಿಕ ರೋಗದ ಯಾವೊಂದು ಪ್ರಕರಣವೂ ಕಂಡು ಬಂದಿಲ್ಲ ಎಂದು ಆರೋಗ್ಯ ಮೇಲ್ವಿಚಾರಕ ವಿ.ಡಿ.ಬೆನ್ನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಡೆಂಗೆ, ಚಿಕೂನ್ ಗುನ್ಯಾ ರೋಗಗಳು ಈಡೀಸ್ ಎನ್ನುವ ಸೊಳ್ಳೆಯಿಂದ ಹರಡುವ ವೈರಸ್ ಖಾಯಿಲೆಯಾಗಿದ್ದು, ಈ ಸೊಳ್ಳೆಗಳ ನಿಯಂತ್ರಣವೇ ರೋಗ ತಡೆಗಟ್ಟುವ ಮುಖ್ಯ ವಿಧಾನವಾಗಿದೆ. ಈ ಸೊಳ್ಳೆಗಳು ಮನೆಯ ಒಳಗೆ ಹಾಗೂ ಹೊರಗೆ ನೀರನ್ನು ಶೇಖರಿಸುವ ಡ್ರಮ್, ಮಣ್ಣಿನ ಮಡಿಕೆ, ಸಿಮೆಂಟ್ ತೊಟ್ಟಿ, ಕಲ್ಲಿನ ಡೋಣಿ ಮತ್ತಿತರ ನೀರಿನ ಶೇಖರಣೆಗಳಲ್ಲಿ ಉತ್ಪತ್ತಿಯಾಗುವುದರಿಂದ ಸೊಳ್ಳೆಗಳ ನಿಯಂತ್ರಣವು ಜನರ ಕೈಯಲ್ಲಿಯೇ ಇದೆ.ಸೊಳ್ಳೆಗಳ ನಿಯಂತ್ರಣಕ್ಕೆ ರಾಮಬಾಣವಾಗಿರವ ಜೈವಿಕ ವಿಧಾನದ ಲಾರ್ವಾಹಾರಿ ಮೀನುಗಳು ಸಮುದಾಯ ಆರೋಗ್ಯ ಇಲಾಖೆಯಲ್ಲಿ ಲಭ್ಯ ಇರುತ್ತವೆ. ಸಿಬ್ಬಂದಿಯನ್ನು ಸಂಪರ್ಕಿಸಿ ಮೀನುಗಳನ್ನು ಪಡೆದು ಸೊಳ್ಳೆಗಳ ಉತ್ಪತ್ತಿ ಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಬೆನ್ನೂರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.