ಗುರುವಾರ , ಮೇ 13, 2021
35 °C

`ಡೆಂಗೆ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: `ಜಿಲ್ಲೆಯಾದ್ಯಂತ ಡೆಂಗೆ, ಮಲೇರಿಯಾ, ಚಿಕನ್‌ಗುನ್ಯ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು' ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ ಸೂಚಿಸಿದರು.ನವನಗರದ ಜಿ.ಪಂ.ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, `ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು' ಎಂದರು.ಸಮವಸ್ತ್ರ ಪೂರೈಕೆ: ಜಿಲ್ಲೆಯಾದ್ಯಂತ ಈಗಾಗಲೇ ಪ್ರಾರಂಭಗೊಂಡ ಶಾಲೆಗಳಲ್ಲಿ ಶಾಲಾ ಸಮವಸ್ತ್ರ, ಪುಸ್ತಕ ವಿತರಣೆ, ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂಬ ಜಿ.ಪಂ. ಸದಸ್ಯರ ದೂರಿಗೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಡಿವಾಳ, `ಜಿಲ್ಲೆಯಾದ್ಯಂತ ಈಗಾಗಲೇ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದ್ದು, ಕೇವಲ ಶೇ 20 ಬಾಕಿ ಇದೆ. ಅದನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು' ಎಂದರು.93 ಸಾವಿರ ಅರ್ಜಿ: `ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 93 ಸಾವಿರ ಅರ್ಜಿಗಳು ಆನ್‌ಲೈನ್ ಮೂಲಕ ಬಂದಿವೆ. ಜುಲೈ 1 ರಿಂದ ಅನ್ವಯವಾಗುವಂತೆ ಕೆ.ಜಿ.1ರೂ. ಅಂತೆ ಅಕ್ಕಿಯನ್ನು ವಿತರಿಸಲು ಇಲಾಖೆ ಮಟ್ಟದ ಉನ್ನತ ಅಧಿಕಾರಿಗಳ ಸಭೆಯನ್ನು ಸದ್ಯದಲ್ಲಿಯೇ ನಡೆಸಲಾಗುವುದು' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಭೆಗೆ ತಿಳಿಸಿದರು.ಅಂಗನವಾಡಿ ಮಕ್ಕಳಿಗೆ ಪ್ರತಿದಿನ ಪೌಷ್ಠಿಕ ಆಹಾರ ನೀಡುಲಾಗುತ್ತಿದೆಯೇ ಎಂಬ ಜಿ.ಪಂ.ಅಧ್ಯಕ್ಷೆ ಶಾಂತವ್ವ ಭೂಷಣ ಅವರ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಎಚ್. ಪಾಟೀಲ, `ಅಪೌಷ್ಟಿಕವಾದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಆಯಾ ವ್ಯಾಪ್ತಿಯ ಮಕ್ಕಳ ಸಂಖ್ಯೆಯ ಆಧಾರದ ಮೇಲೆ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ' ಎಂದರು.`ಜಿಲ್ಲೆಯಲ್ಲಿ ಈಗಾಗಲೇ ಮುಂಗಾರಿನ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಹಾಗೂ ತ್ವರಿತ ಕ್ರಮ ಕೈಗೊಳ್ಳುವಂತೆ' ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.`ಬಾಕಿ ಉಳಿದಿರುವ ರೈತರ ಟಿಸಿಗಳನ್ನು ಹೆಸ್ಕಾಂ ಸಿಬ್ಬಂದಿ ತ್ವರಿತವಾಗಿ ದುರಸ್ಥಿಗೊಳಿಸಿ ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿ ಕೊಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.ಜಿ.ಪಂ.ನ ಎಲ್ಲ ಇಲಾಖೆಗಳ ಅಧಿಕಾರಿಗಳು 2013-14ನೇ ಕ್ರೀಯಾ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಿಇಒ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.