ಶನಿವಾರ, ಮೇ 8, 2021
19 °C

ಡೆಂಗೆ: ಮೃತರ ಕುಟುಂಬಕ್ಕೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೆಂಗೆ ಜ್ವರದಿಂದ ಮೃತಪಟ್ಟ ಎಲ್ಲ ವ್ಯಕ್ತಿಗಳ ಕುಟುಂಬಗಳಿಗೂ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನಲ್ಲಿ ಬುಧವಾರ ಘೋಷಿಸಿದರು.ಬಿಜೆಪಿಯ ಡಿ.ವಿ. ಸದಾನಂದ ಗೌಡ ಅವರ ಪ್ರಸ್ತಾವಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, `ಡೆಂಗೆ ಜ್ವರದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡುವುದು ಮೈಸೂರು ಜಿಲ್ಲೆಗೆ ಮಾತ್ರ ಸೀಮಿತ ಅಲ್ಲ. ಅದು ಇಡೀ ರಾಜ್ಯಕ್ಕೆ ಅನ್ವಯ ಆಗುತ್ತದೆ. ಈ ರೀತಿಯ ಪ್ರಕರಣಗಳಲ್ಲಿ ಹಿಂದೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡುತ್ತಿರಲಿಲ್ಲ' ಎಂದು ಸ್ಪಷ್ಟನೆ ನೀಡಿದರು.ನಕ್ಸಲ್ ಸಮಸ್ಯೆ: ನಕ್ಸಲ್ ಸಮಸ್ಯೆ ಕುರಿತು ಚರ್ಚೆ ನಡೆಸಲು ಇದೇ 18 ಮತ್ತು 19ರಂದು ಉಡುಪಿ ಹಾಗೂ ಮಂಗಳೂರಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ವಿಧಾನ ಪರಿಷತ್ತಿನಲ್ಲಿ ಬುಧವಾರ ತಿಳಿಸಿದರು.ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಗೃಹ ಸಚಿವ ಜಾರ್ಜ್, `ಅರಣ್ಯ ವಾಸಿಗಳ ಪುನರ್ವಸತಿಗೆ ನಕ್ಸಲೀಯರು ಅಡ್ಡಿ ಉಂಟುಮಾಡುತ್ತಿದ್ದಾರೆ. ಶರಣಾಗುವ ನಕ್ಸಲೀಯರಿಗೆ ಹೊಸ ಪ್ಯಾಕೇಜ್ ಘೋಷಿಸಲು ಸರ್ಕಾರ ಸಿದ್ಧತೆ ನಡೆಸಿದೆ' ಎಂದು ವಿವರಿಸಿದರು. ಬಂದೂಕು ಬದಿಗಿಟ್ಟು ಬಂದರೆ, ನಕ್ಸಲೀಯರ ಜೊತೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ ಅದಕ್ಕೆ ನಕ್ಸಲೀಯರು ಒಪ್ಪದಿದ್ದರೆ, ಸರ್ಕಾರವೂ ಬೇರೆಯದೇ ಆದ ಮಾರ್ಗದಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ಸಿನ ಎಂ.ವಿ. ರಾಜಶೇಖರನ್, `ನಕ್ಸಲೀಯ ಸಮಸ್ಯೆಯನ್ನು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಮಾತ್ರ ಪರಿಗಣಿಸಬಾರದು. ಅದನ್ನು ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದಲೂ ನೋಡಬೇಕು' ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.