ಡೆಕ್ಕನ್‌ಗೆ ಚಾರ್ಜ್ ಮಾಡಿದ ಆರ್‌ಸಿಬಿ:ಬೆಳಗಿದ ಡಿವಿಲಿಯರ್ಸ್; ಶಿಖರ್ ಆಟ ವ್ಯರ್ಥ

7

ಡೆಕ್ಕನ್‌ಗೆ ಚಾರ್ಜ್ ಮಾಡಿದ ಆರ್‌ಸಿಬಿ:ಬೆಳಗಿದ ಡಿವಿಲಿಯರ್ಸ್; ಶಿಖರ್ ಆಟ ವ್ಯರ್ಥ

Published:
Updated:
ಡೆಕ್ಕನ್‌ಗೆ ಚಾರ್ಜ್ ಮಾಡಿದ ಆರ್‌ಸಿಬಿ:ಬೆಳಗಿದ ಡಿವಿಲಿಯರ್ಸ್; ಶಿಖರ್ ಆಟ ವ್ಯರ್ಥ

ಬೆಂಗಳೂರು: ಗೆಲುವು ಕೈ ತಪ್ಪಿ ಹೋಯಿತು ಎನ್ನುವ ಆತಂಕದ ಕಾರ್ಮೋಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಆವರಿಸಿದಾಗ ಎ.ಬಿ.ಡಿವಿಲಿಯರ್ಸ್ ಬೆಳಕಾಗಿ ಬಂದರು. ಆದ್ದರಿಂದ ಅವರು ಬುದ್ಧ ಪೂರ್ಣಿಮೆಯ ಪ್ರಖರವಾದ ಬೆಳದಿಂಗಳಿನಲ್ಲೂ ಆತಿಥೇಯ ತಂಡದ ಆಟಗಾರರ ಸಂತಸಕ್ಕೆ ಕಾರಣರಾದರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಪಂದ್ಯ ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿದ್ದು ವಿಶೇಷ. ಏಕೆಂದರೆ, ಡೆಕ್ಕನ್ ಚಾರ್ಜಸ್ ದುರ್ಬಲ ಎಂದವರೇ ಹೆಚ್ಚು. ಡೆಕ್ಕನ್ ತಂಡ ಆರ್‌ಸಿಬಿ ಎದುರು ಸೋಲು ಕಂಡರೂ, ನೀಡಿದ ಪೈಪೋಟಿಯಂತೂ ಮೆಚ್ಚುವಂಥದ್ದು.ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚಾರ್ಜರ್ಸ್ 20 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಬಲಿಷ್ಠ ಬ್ಯಾಟಿಂಗ್ ಶಕ್ತಿ ಹೊಂದಿರುವ ಆರ್‌ಸಿಬಿ ತಂಡಕ್ಕೆ ಈ ಮೊತ್ತ ಭಾರಿ ಸವಾಲು ಎನಿಸಿತು. ಒಂದು ಹಂತದಲ್ಲಿ ಪಂದ್ಯ ಕೈ ಚೆಲ್ಲಿ ಹೋಗಿತ್ತು. ಆದರೆ, ಡಿವಿಲಿಯರ್ಸ್ (ಔಟಾಗದೆ 47, 17ಎಸೆತ, 5ಬೌಂಡರಿ, 3 ಸಿಕ್ಸರ್) ಇದಕ್ಕೆ ಅವಕಾಶ ನೀಡಲಿಲ್ಲ. ಈ ಪರಿಣಾಮ ತವರಿನ ತಂಡ 18.5 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು.ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ತಿಲಕರತ್ನೆ ದಿಲ್ಶಾನ್ (71, 54ಎಸೆತ, 8ಬೌಂಡರಿ, 2 ಸಿಕ್ಸರ್) ಕ್ರಿಸ್ ಗೇಲ್ (26) ಮೊದಲ ವಿಕೆಟ್‌ಗೆ 91 ರನ್‌ಗಳನ್ನು ಕಲೆ ಹಾಕಿದರು. ಈ ವೇಳೆ ಆತಿಥೇಯ ತಂಡಕ್ಕೆ ಗೆಲುವು ಕಷ್ಟವೇನಲ್ಲ ಎಂದು ಕ್ರೀಡಾಭಿಮಾನಿಗಳು ಬ್ಯಾಟ್ಸ್‌ಮನ್‌ಗಳಿಗೆ ಹುರುಪು ತುಂಬಿದರು.ಆದರೆ, ಅಮಿತ್ ಮಿಶ್ರಾ (28ಕ್ಕೆ2) ಆಘಾತ ನೀಡಿದರು. ನಾಯಕ ವಿರಾಟ್ ಕೊಹ್ಲಿ, ಅಸದ್ ಪಠಾಣ್ ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ಡಿವಿಲಿಯರ್ಸ್ ಹಾಗೂ ಸಯ್ಯದ್ ಮಹಮ್ಮದ್ ಕೊನೆಯ 12 ಎಸೆತಗಳಲ್ಲಿ ಅಗತ್ಯವಿದ್ದ 16 ರನ್‌ಗಳನ್ನು ಗಳಿಸಿ ಸತತ ಸೋಲಿನ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು.ಅಬ್ಬರದ ಆರಂಭ: ಆರಂಭಿಕ ಆಟಗಾರ ಡೇನಿಯಲ್ ಹ್ಯಾರಿಸ್ (47, 41ಎಸೆತ, 2ಬೌಂಡರಿ, 4 ಸಿಕ್ಸರ್) ಹಾಗೂ ಶಿಖರ್ ಧವನ್ ಡೆಕ್ಕನ್‌ಗೆ ಉತ್ತಮ ಆರಂಭ ಒದಗಿಸಿದರು. ಈ ತಂಡದ ಆರಂಭಿಕ ಜೋಡಿಯನ್ನು ಅಲುಗಿಸಲು ತವರಿನ ತಂಡದ ಬೌಲರ್‌ಗಳಿಗೆ ಬೇಗನೇ ಸಾಧ್ಯವಾಗಲಿಲ್ಲ. ಹ್ಯಾರಿಸ್ 12ನೇ ಓವರ್‌ನಲ್ಲಿ ರನ್ ಗಳಿಸಲು ಅವಸರಿಸಿ ರನ್‌ಔಟ್ ಬಲೆಗೆ ಬಿದ್ದರು. ಆದಾಗಲೇ ಮೊದಲ ವಿಕೆಟ್‌ಗೆ 71 ಎಸೆತಗಳಲ್ಲಿ 86 ರನ್‌ಗಳು ತಂಡದ ಖಾತೆ ಸೇರ್ಪಡೆಯಾಗಿದ್ದವು.ಧವನ್ 52 ಎಸೆತಗಳಲ್ಲಿ ಔಟಾಗದೇ 73 ರನ್ ಗಳಿಸಿದರು. ಇದರಲ್ಲಿ ಹತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿವೆ. ಆರ್‌ಸಿಬಿ ತಂಡ ಆರು ಜನ ಬೌಲರ್‌ಗಳನ್ನು ಕಣಕ್ಕಿಳಿಸಿದರೂ, ಎದುರಾಳಿ ತಂಡದ ರನ್ ವೇಗವನ್ನು ತಡೆಯಲು ಸಾಧ್ಯವಾಗಲಿಲ್ಲ.ಹ್ಯಾರಿಸ್ ಔಟ್ ಆದ ನಂತರ ಬಂದ ಕ್ಯಾಮರೂನ್ ವೈಟ್ ಬ್ಯಾಟಿಂಗ್ ಅಬ್ಬರಕ್ಕೆ ಆರ್‌ಸಿಬಿ ತಬ್ಬಿಬ್ಬುಕೊಂಡಿತು. ವೈಟ್ ಹಾಗೂ ಧವನ್ ಎರಡನೇ ವಿಕೆಟ್‌ಗೆ 82 ರನ್‌ಗಳನ್ನು ಕಲೆ ಹಾಕಿದರು. ಈ ರನ್‌ಗಳು ಕೇವಲ 44 ಎಸೆತಗಳಲ್ಲಿ ಬಂದವು ಎನ್ನುವುದು ವಿಶೇಷ. ಈ ವೇಳೆಗೆ ವಿಜಯ್ ಮಲ್ಯ ಒಡೆತನದ ಆತಿಥೇಯ ತಂಡದ ಬೌಲರ್‌ಗಳು ಸುಸ್ತಾಗಿದ್ದರು.ಕೊನೆಯ ಓವರ್‌ನ  ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಲು ಯತ್ನಿಸಿದ ವೈಟ್ ವಿಫಲರಾದರು. ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರಶಾಂತ್ ಪರಮೇಶ್ವರ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದರು. ಆಗ ಇನ್ನೂ ಐದು ಎಸೆತಗಳು ಬಾಕಿ ಇದ್ದವು. ಈ ವೇಳೆ ಬಂದ ಸಂಗಕ್ಕಾರ ಔಟಾಗದೆ ಕೇವಲ ಮೂರು ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ ಒಟ್ಟು 10 ರನ್ ಗಳಿಸಿದರು.ತಂಡದಲ್ಲಿ ಬದಲಾವಣೆ: ಸೋಲು ಗೆಲುವುಗಳ ಏರಿಳಿತ ಕಾಣುತ್ತಿರುವ ಆರ್‌ಸಿಬಿ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಯಿತು. ಪ್ರಶಾಂತ್, ಸಯ್ಯದ್ ಮಹಮ್ಮದ್, ಮುತ್ತಯ್ಯ ಮರಳೀಧರನ್ ಅವರಿಗೆ ಅವಕಾಶ ನೀಡಿತ್ತು.ಕೊಹ್ಲಿ ನಾಯಕ: ಡೇನಿಯಲ್ ವೆಟೋರಿ ಆಡದ ಕಾರಣ, ಯುವ ಆಟಗಾರ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು.ಈ ಸಲದ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ನಾಯಕರಾಗಿದ್ದರು. ಆದರೆ, ಮಳೆಯ ಕಾರಣ ಆ ಪಂದ್ಯ ನಡೆದಿರಲಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry