ಡೆಡ್‌ಬಾಡಿ ತಗ್ಯಾಕ್ಕತ್ತೀನಿ ಅಂದಿದ್ರು...

7

ಡೆಡ್‌ಬಾಡಿ ತಗ್ಯಾಕ್ಕತ್ತೀನಿ ಅಂದಿದ್ರು...

Published:
Updated:
ಡೆಡ್‌ಬಾಡಿ ತಗ್ಯಾಕ್ಕತ್ತೀನಿ ಅಂದಿದ್ರು...

ನರಗುಂದ (ಗದಗ ಜಿಲ್ಲೆ): `ಭಾನುವಾರ ಸಂಜೀ ನಾಕ ಗಂಟೇಕ ಫೋನ್ ಮಾಡಿ, ನಾನು ಕೇದಾರದಲ್ಲಿದ್ದೇನೆ, ಡೆಡ್‌ಬಾಡಿ ತಗ್ಯಾಕತ್ತೇನಿ, ಆರಾಮ ಅದೇನಿ, ಮೂರು ದಿವಸ ಫೋನ್ ಮಾಡೂದಿಲ್ಲ ಅಂದಿದ್ರು. ಕೊನೆಗೆ ಅವ್ರ ಸತ್ತ ಸುದ್ದಿ ಬಂತು...'ಇದು ನರಗುಂದ ತಾಲ್ಲೂಕಿನ ಜಗಾಪುರದ ಯೋಧ ಬಸವರಾಜ ಯರಗಟ್ಟಿ ಅವರ ಪತ್ನಿ ಯಶೋದಾ ಅವರ ಆಕ್ರಂದನ.ಮಂಗಳವಾರ ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ತೆರಳಿದಾಗ ಗೌರಿಕುಂಡದ ಬಳಿ ನಡೆದ ಅಪಘಾತದಲ್ಲಿ ತಾಲ್ಲೂಕಿನ ಜಗಾಪುರದ ಯೋಧ  ಬಸವರಾಜ ಯರಗಟ್ಟಿ ಸಾವನ್ನಪ್ಪಿದ್ದು ಗುರುವಾರದವರೆಗೆ ಶವ ಗ್ರಾಮಕ್ಕೆ ಬಂದಿರಲಿಲ್ಲ.ತವರುಮನೆ ಕಲಘಟಗಿ ತಾಲ್ಲೂಕಿನ ಬಗಡಗೇರಿಯಿಂದ ಗುರುವಾರ ಬೆಳಿಗ್ಗೆ ಜಗಾಪುರಕ್ಕೆ ಬಂದ ಪತ್ನಿಯ ರೋದನ ಮುಗಿಲು ಮುಟ್ಟಿತ್ತು. ಇಲ್ಲಿಯೇ ಬೀಡು ಬಿಟ್ಟಿರುವ ವೈದ್ಯರು ಈಕೆಗೆ ಉಪಚಾರ ಮಾಡುತ್ತಿದ್ದಾರೆ.`ನಾನು ಕೇದಾರದಾಗ ಎತ್ತರದಾಗ ಅದೇನಿ ಅಂದ್ರು. ಆಗ ನಾನು `ಭಾಳ್ ಮ್ಯಾಲ್ ಹೋಗಬ್ಯಾಡ್ರಿ' ಅಂದೆ. ಹ್ಞೂ ಎಂದು ಕಟ್ ಮಾಡಿದ್ರು, ನಾನು ನಿರಂತರ ಫೋನ್ ಮಾಡ್ತಾನೇ ಇದ್ದೆ. ಆದರೆ ಅದು ಬರೀ ಸ್ವಿಚ್ ಆಫ್ ಅಂತ ಬಂತೇ ಹೊರತು ಅವರ ದನಿ ಕೇಳಲೇ ಇಲ್ಲ. ಕೊನೆಗೆ ಅವರು ಸತ್ತ ಸುದ್ದಿ ಬುಧವಾರ ಬಂತು....' ಎಂದು ಯಶೋದಾ ಗೋಳಾಡಿದರು.`ಕಳೆದ ತಿಂಗಳು ಬಸವರಾಜ ಬಂದಿದ್ದರು. ದೂರವಾಣಿಯಲ್ಲಿ ಮಾತನಾಡಿದ್ದರು. ಈಗ ಹಿಂಗಾತು' ಎಂದು ಬಸವರಾಜ ಅವರ ಅತ್ತೆ ಮಹಾದೇವಿ ಮತ್ತು ಅಳಿಯ ನಾಗರಾಜ ಹೇಳಿದರು.`ನಾವು ಮತ್ತು ಬಸವರಾಜ ಒಂದರಿಂದ 10ನೇ ತರಗತಿಯವರೆಗೆ ಕೂಡಿ ಕಲಿತಿದ್ವಿ. ಇಂಥ ಒಳ್ಳೆ ಗೆಳೆಯ  ನಮಗ ಇನ್ನ ಎಂದೂ ಸಿಗೂದಿಲ್ಲ' ಎಂದು ಬಸವರಾಜನ ಬಾಲ್ಯಸ್ನೇಹಿತರಾದ ಶ್ರೀಕಾಂತ ಅಜ್ಜಿ, ನೇಮಿಚಂದ್ರ ಜೈನ ಹೇಳಿದರು.`ಹತ್ತನೇ ತರಗತಿ ಮುಗಿದ ಮೇಲೆ ಬಸವರಾಜ ಆರು ವರ್ಷ ಹಮಾಲಿ ಕೆಲಸ ಮಾಡಿದ್ದರು. ನಂತರ ಸೇನಾ ಪಡೆ ಸೇರಿದರು. ಕುಟುಂಬಕ್ಕೆ ಆಧಾರವಾಗಿದ್ದರು. ಈಗ ಅವ ಇಲ್ಲದ ಜಗಾಪುರ ದುಃಖದಲ್ಲಿ ಮುಳಗೇತಿ' ಎಂದರು.ಯೋಧನ ಶವದ ವೈಜ್ಞಾನಿಕ ಗುರುತು ಪತ್ತೆಗೆ ಆತನ ತಂದೆ- ತಾಯಿ ಮತ್ತು ಸಹೋದರಿಯರನ್ನು ತಾಲ್ಲೂಕು ಆಡಳಿತ ಡಿಎನ್‌ಎ ಪರೀಕ್ಷೆಗೆ ಗದುಗಿಗೆ ಕರೆದುಕೊಂಡು ಹೋಗಿದೆ.ಈ ಮಧ್ಯೆ ಬಸವರಾಜನ ಶವಕ್ಕಾಗಿ ಇಡೀ ಗ್ರಾಮ ಕಾಯುತ್ತಿದ್ದು ಅಕ್ಕ ಪಕ್ಕದ ಗ್ರಾಮದವರು, ಅಧಿಕಾರಿಗಳು ಜಗಾಪುರ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಗುರುವಾರ ಬೆಳಿಗ್ಗೆ ತಹಶೀಲ್ದಾರ್ ವೆಂಕನಗೌಡ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದ  ಸದಸ್ಯರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.`ಶುಕ್ರವಾರ ಸಂಜೆ ಯೋಧನ ಮೃತದೇಹ ಬರುವ ಸಾಧ್ಯತೆ ಇದೆ, ಈ ಕುರಿತು ಎಸ್‌ಪಿಯವರ ಜೊತೆ ಮಾತನಾಡಿದ್ದೇನೆ. ಹುಬ್ಬಳ್ಳಿಯ ಮೂಲಕ ಜಗಾಪುರಕ್ಕೆ ತರಲಾಗುವುದು. ಶವ ಸಂಸ್ಕಾರಕ್ಕೆ ಎಲ್ಲ ಸಿದ್ಧತೆ ನಡೆಸಲಾಗಿದೆ' ಎಂದು ತಹಶೀಲ್ದಾರ್ ತಿಳಿಸಿದರು.`ಗ್ರಾಮಸ್ಥರು ವೀರಗಲ್ಲು ಸ್ಥಾಪಿಸಲು ಮುಂದಾಗಿದ್ದು, ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಗ್ರಾಮ ಪಂಚಾಯ್ತಿ ಅಧಿಕಾರಿ ಉಪ್ಪಾರ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry