ಡೆವಿಲ್ಸ್ಪಡೆಯ ಗೆಲುವಿನ ಕನಸು

7

ಡೆವಿಲ್ಸ್ಪಡೆಯ ಗೆಲುವಿನ ಕನಸು

Published:
Updated:
ಡೆವಿಲ್ಸ್ಪಡೆಯ ಗೆಲುವಿನ ಕನಸು

ಮುಂಬೈ (ಪಿಟಿಐ): ಐಪಿಎಲ್ ಟೂರ್ನಿಯಲ್ಲಿ ಇನ್ನೂ ಗೆಲುವಿನ ಸಿಹಿ ಅನುಭವಿಸದಿರುವ ಏಕೈಕ ತಂಡ ದೆಹಲಿ ಡೇರ್‌ಡೆವಿಲ್ಸ್. ಇತರ ಒಂಬತ್ತು ತಂಡಗಳು ಈಗಾಗಲೇ ಪಾಯಿಂಟ್‌ಗಳ ಖಾತೆ ತೆರೆದಿವೆ. ಆದರೆ ವೀರೇಂದ್ರ ಸೆಹ್ವಾಗ್ ನೇತೃತ್ವದ ದೆಹಲಿ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಭಾನುವಾರ ನಡೆಯುವ ಪಂದ್ಯದಲ್ಲಿ ದೆಹಲಿ ತಂಡ ಪುಣೆ ವಾರಿಯರ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಪಾಯಿಂಟ್ ಖಾತೆ ತೆರೆಯುವುದು ಮಾತ್ರ ಈ ತಂಡದ ಮುಂದಿರುವ ಏಕೈಕ ಗುರಿ. ಆದರೆ ಅದರಲ್ಲಿ ಯಶಸ್ವಿಯಾಗುವುದು ಅಷ್ಟು ಸುಲಭವಲ್ಲ.

 

ಏಕೆಂದರೆ ಯುವರಾಜ್ ಸಿಂಗ್ ನೇತೃತ್ವದ ಪುಣೆ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಲ್‌ರೌಂಡ್ ಪ್ರದರ್ಶನ ನೀಡುತ್ತಿರುವ ಪುಣೆ ತಂಡ ‘ಹ್ಯಾಟ್ರಿಕ್’ ಗೆಲುವಿನ ಕನಸಿನಲ್ಲಿದೆ. ದೆಹಲಿ ತಂಡ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ಕೈಯಲ್ಲಿ ನಿರಾಸೆ ಅನುಭವಿಸಿದೆ. ಗೆಲುವಿನ ಟ್ರ್ಯಾಕ್‌ಗೆ ಮರಳಬೇಕಾದರೆ ಸಂಘಟಿತ ಹೋರಾಟ ನೀಡುವುದು ಅಗತ್ಯ. ಸೆಹ್ವಾಗ್ ಒಳಗೊಂಡಂತೆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ಇನ್ನೂ ಟ್ವೆಂಟಿ-20 ಪಂದ್ಯದ ಅಬ್ಬರ ತೋರಲು ಸಾಧ್ಯವಾಗಿಲ್ಲ.

 

ಕಳೆದ ಎರಡು ಪಂದ್ಯಗಳಲ್ಲಿ ದೆಹಲಿ ತಂಡ ಕ್ರಮವಾಗಿ ಎಂಟು ಹಾಗೂ ಆರು ವಿಕೆಟ್‌ಗಳ ಸೋಲು ಅನುಭವಿಸಿತ್ತು. ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗದ್ದು ಇದಕ್ಕೆ ಕಾರಣ. ಸೆಹ್ವಾಗ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗುತ್ತಿದ್ದಾರೆ. ಅಲ್ಪ ಮಿಂಚಲು ಯಶಸ್ವಿಯಾದದ್ದು ಡೇವಿಡ್ ವಾರ್ನರ್ ಮತ್ತು ವೇಣುಗೋಪಾಲ್ ರಾವ್ ಮಾತ್ರ.

ಪುಣೆ ತಂಡ ಮೊದಲ ಎರಡು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಜಯ ಪಡೆದಿದೆ.

ತಂಡಗಳು

ಪುಣೆ ವಾರಿಯರ್ಸ್

ಯುವರಾಜ್ ಸಿಂಗ್ (ನಾಯಕ), ಗ್ರೇಮ್ ಸ್ಮಿತ್, ಜೆಸ್ಸಿ ರೈಡರ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಕಾಲಮ್ ಫರ್ಗ್ಯುಸನ್, ಮಿಷೆಲ್ ಮಾರ್ಷ್, ನಥಾನ್ ಮೆಕ್ಲಮ್, ಟಿಮ್ ಪೈನ್, ನಮನ್ ಓಜಾ, ವೇಯ್ನಿ ಪಾರ್ನೆಲ್, ಜೆರೊಮಿ ಟೇಲರ್, ಅಲ್ಫೊನ್ಸೊ ಥಾಮಸ್, ಮುರಳಿ ಕಾರ್ತಿಕ್, ಮೋನಿಶ್ ಮಿಶ್ರಾ, ರಾಹುಲ್ ಶರ್ಮಾ,  ಶ್ರೀಕಾಂತ್ ವಾಗ್.

ದೆಹಲಿ ಡೇರ್‌ಡೆವಿಲ್ಸ್

ವೀರೇಂದ್ರ ಸೆಹ್ವಾಗ್ (ನಾಯಕ), ವರುಣ್ ಆ್ಯರನ್, ಅಜಿತ್ ಅಗರ್‌ಕರ್, ಅಶೋಕ್ ದಿಂಡಾ, ಆ್ಯರೊನ್ ಫಿಂಚ್, ರಾಬರ್ಟ್ ಫ್ರಿಲಿಂಕ್, ಜೇಮ್ಸ್ ಹೋಪ್ಸ್, ಮಾರ್ನ್ ಮಾರ್ಕೆಲ್, ಶಾಬಾಜ್ ನದೀಮ್, ಇರ್ಫಾನ್ ಪಠಾಣ್, ರಾಜೇಶ್ ಪವಾರ್, ರೆಲೋಫ್ ವಾನ್ ಡೆರ್ ಮೆರ್ವ್, ವೇಣುಗೋಪಾಲ್ ರಾವ್, ಡೇವಿಡ್ ವಾರ್ನರ್.

ಪಂದ್ಯದ ಆರಂಭ: ಸಂಜೆ 4.00ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry