ಮಂಗಳವಾರ, ಮೇ 11, 2021
21 °C

ಡೆವಿಲ್ಸ್‌ಗೆ ಸತತ ಮೂರನೇ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೆವಿನ್ ಪೀಟರ್ಸನ್ ಅಜೇಯ ಶತಕದ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ಐಪಿಎಲ್‌ಟ್ವೆಂಟಿ-20 ಟೂರ್ನಿಯ ಗುರುವಾರದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್‌ಗಳ ಅಂತರದ ಗೆಲುವು ಪಡೆಯಿತು.



ಉರಿ ಬಿಸಿಲಿನಲ್ಲಿಯೇ ಆರಂಭವಾದ ಈ ಹಣಾಹಣಿಯನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಬಂದಿದ್ದರು. ಅವರಿಗೆ ನಿರಾಸೆಯಾಗಲಿಲ್ಲ. ವೀರೇಂದ್ರ ಸೆಹ್ವಾಗ್ ನಾಯಕತ್ವದ ತಂಡವು ಸತತ ಮೂರನೇ ವಿಜಯದೊಂದಿಗೆ ಸಂಭ್ರಮಿಸಿತು.



ಚುಟುಕು ಕ್ರಿಕೆಟ್ ಟೂರ್ನಿಯ ಐದನೇ ಅವತರಣಿಕೆಯಲ್ಲಿ ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಡೇರ್‌ಡೆವಿಲ್ಸ್ ನಾಲ್ಕರಲ್ಲಿ ಗೆಲುವಿನ ಸಿಹಿ ಸವಿದಿದೆ. ಕೋಲ್ಕತ್ತ ನೈಟ್ ರೈಡರ್ಸ್ ಎದುರು ವಿಜಯ ಸಾಧಿಸಿ, ಉತ್ಸಾಹದಿಂದ ಕಾರ್ಯಾಚರಣೆ ಆರಂಭಿಸಿದ್ದ ಅದಕ್ಕೆ ನಿರಾಸೆಯಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾತ್ರ. ಆನಂತರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎದುರು ಗೆದ್ದಿದ್ದ ಅದು ಚಾರ್ಜರ್ಸ್ ತಂಡವನ್ನೂ ಮಣಿಸಿದೆ. ಆದ್ದರಿಂದ ಅದರ ಖಾತೆಯಲ್ಲಿನ ಪಾಯಿಂಟುಗಳ ಸಂಖ್ಯೆ ಎಂಟಕ್ಕೇರಿದೆ.



ಮತ್ತೊಂದು ಗೆಲುವು ಸಾಧ್ಯ ಎನ್ನುವ ಭರವಸೆಯೊಂದಿಗೆ ಹೋರಾಟ ನಡೆಸಿದ `ವೀರೂ~ ಪಡೆಯು `ಟಾಸ್~ ಸೋತರೂ ನಿರಾಸೆಗೊಳ್ಳಲಿಲ್ಲ. ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡ ಡೆಕ್ಕನ್   ಚಾರ್ಜರ್ಸ್ ತಂಡವು ಭಾರಿ ಮೊತ್ತ ಗಳಿಸದಂತೆ ಎಚ್ಚರವಹಿಸಿತು. ಕುಮಾರ ಸಂಗಕ್ಕಾರ ನೇತೃತ್ವದ ತಂಡವು ತನ್ನ ಪಾಲಿನ ಇಪ್ಪತ್ತು ಓವರುಗಳಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 157 ರನ್ ಗಳಿಸಿತು.



ಚಾರ್ಜರ್ಸ್ ಇನಿಂಗ್ಸ್ ಆರಂಭದಲ್ಲಿಯೇ ದೊಡ್ಡ ಆಘಾತ ಅನುಭವಿಸಿತು. ನಾಯಕ `ಸಂಗಾ~, ಮಾರ್ನ್ ಮಾರ್ಕೆಲ್ ದಾಳಿಯಲ್ಲಿ ಆತುರದಿಂದ ಚೆಂಡನ್ನು ಕೆಣಕಿದರು. ಆಗ ಚುರುಕಾಗಿ ಪ್ರತಿಕ್ರಿಯಿಸಿದ ಯೊಗೇಶ್ ನಗರ್ ಚೆಂಡನ್ನು ಹಿಡಿತಕ್ಕೆ ಪಡೆದರು. ಆನಂತರ ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕಲು ಬೆವರು ಸುರಿಸಿದ್ದು ಶಿಖರ್ ಧವನ್ (44; 29 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಪಾರ್ಥಿವ್ ಪಟೇಲ್ (45; 27 ಎ., 5 ಬೌಂಡರಿ, 1 ಸಿಕ್ಸರ್). ಎರಡನೇ ವಿಕೆಟ್‌ನಲ್ಲಿ ಇವರಿಬ್ಬರೂ 71 ರನ್ ಕಲೆಹಾಕಿದರು. ಕರ್ನಾಟಕದ ಯುವ ಆಟಗಾರ ಭರತ್ ಚಿಪ್ಲಿ (25; 17 ಎ., 3 ಬೌಂಡರಿ, 1 ಸಿಕ್ಸರ್) ಅಜೇಯ ಆಟವಾಡಿ ಚಾರ್ಜರ್ಸ್ ಮೊತ್ತ ಹೆಚ್ಚಿಸಲು ಯತ್ನಿಸಿದರು.



ವಿಜಯಿ ತಂಡದ ಬೌಲರ್‌ಗಳಾದ ಮಾರ್ನ್ ಮಾರ್ಕೆಲ್ ಹಾಗೂ ಶಾಬಾಜ್ ನದೀಮ್ ಅವರು ಸಂಗಕ್ಕಾರ ಬಳಗದವರು ಚುರುಕಾಗಿ ರನ್ ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ನದೀಮ್ ಅಂತೂ ನಾಲ್ಕು ಓವರುಗಳಲ್ಲಿ ಕೇವಲ 16 ರನ್ ನೀಡಿ ಮೂರು ವಿಕೆಟ್ ಕೆಡವಿದರು. ಆದ್ದರಿಂದ ಡೇರ್‌ಡೆವಿಲ್ಸ್ ಮುಂದಿನ ಗೆಲುವಿನ ಹಾದಿ ಕಷ್ಟದ್ದಾಗಲಿಲ್ಲ. ಗುರಿಯನ್ನು ಬೆನ್ನಟ್ಟಿದ ಡೆವಿಲ್ಸ್ ತಂಡದವರು 19.1 ಓವರುಗಳಲ್ಲಿಯೇ 162 ರನ್ ಗಳಿಸಿದರು. ಕಳೆದುಕೊಂಡಿದ್ದು ಕೇವಲ ಐದು ವಿಕೆಟ್.



ಡೆವಿಲ್ಸ್ ತಂಡದ ಗೆಲುವಿನಲ್ಲಿ ಕೆವಿನ್ ಪೀಟರ್ಸನ್ (103; 64 ಎ., 6 ಬೌಂಡರಿ, 9 ಸಿಕ್ಸರ್) ಪಾತ್ರ ದೊಡ್ಡದು. ಹದಿನೈದು ರನ್ ಗಳಿಸುವಷ್ಟದಲ್ಲಿ ನಮನ್ ಓಜಾ ಹಾಗೂ ಸೆಹ್ವಾಗ್ ವಿಕೆಟ್ ಕಳೆದುಕೊಂಡಿದ್ದ ಡೇರ್‌ಡೆವಿಲ್ಸ್‌ಗೆ ಆಸರೆಯಾಗಿ ನಿಂತಿದ್ದು ಕೆವಿನ್. ಇನ್ನೊಂದು ಕೊನೆಯಲ್ಲಿ ವಿಕೆಟ್ ಪತನವಾದರೂ ತಮ್ಮ ತಂಡದ ಗುರಿಯ ಕಡೆಗಿನ ಓಟಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಅವರು ಎಚ್ಚರವಹಿಸಿದರು.

ಸ್ಕೋರ್ ವಿವರ

ಡೆಕ್ಕನ್ ಚಾರ್ಜರ್ಸ್: 20 ಓವರುಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 157



ಸಂಗಕ್ಕಾರ ಸಿ ಯೊಗೇಶ್ ನಗರ್ ಬಿ ಮಾರ್ನ್ ಮಾರ್ಕೆಲ್  01



ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಿ ಶಾಬಾಜ್ ನದೀಮ್  44



ಪಾರ್ಥಿವ್ ಪಟೇಲ್ ಸಿ ಜಯವರ್ಧನೆ ಬಿ ಶಾಬಾಜ್ ನದೀಮ್  45



ಡೇನಿಯಲ್ ಕ್ರಿಸ್ಟೀನ್ ಸಿ ನದೀಮ್ ಬಿ ಉಮೇಶ್ ಯಾದವ್  19



ಜೆನ್ ಪಾಲ್ ಡುಮಿನಿ ಸಿ ವೀರೇಂದ್ರ ಸೆಹ್ವಾಗ್ ಬಿ ನದೀಮ್  04



ಭರತ್ ಚಿಪ್ಲಿ ಔಟಾಗದೆ  25



ಅಭಿಷೇಕ್ ಸಿ ನಮನ್ ಓಜಾ ಬಿ ಮಾರ್ನ್ ಮಾರ್ಕೆಲ್  04



ಡೆಲ್ ಸ್ಟೇಯ್ನ ಸಿ ಸೆಹ್ವಾಗ್ ಬಿ ಮಾರ್ನ್ ಮಾರ್ಕೆಲ್  02



ಅಮಿತ್ ಮಿಶ್ರಾ ರನ್‌ಔಟ್ (ಕೆವಿನ್ ಪೀಟರ್ಸನ್/ನಮನ್ ಓಜಾ)      06



ಅಂಕಿತ್ ಶರ್ಮ ಔಟಾಗದೆ  01



ಇತರೆ: (ವೈಡ್-5, ನೋಬಾಲ್-1)  06



ವಿಕೆಟ್ ಪತನ:
1-10 (ಕುಮಾರ ಸಂಗಕ್ಕಾರ; 2.2), 2-81 (ಶಿಖರ್ ಧವನ್; 9.1), 3-106 (ಪಾರ್ಥಿವ್



ಪಟೇಲ್; 11.6), 4-113 (ಜೆನ್ ಪಾಲ್ ಡುಮಿನಿ; 13.4), 5-125 (ಡೇನಿಯಲ್ ಕ್ರಿಸ್ಟೀನ್; 16.1), 6-132



(ಅಭಿಷೇಕ್ ಜುಂಜುನ್ವಾಲಾ; 17.2), 7-134 (ಡೆಲ್ ಸ್ಟೇಯ್ನ; 17.5), 8-156 (ಅಮಿತ್ ಮಿಶ್ರಾ; 19.5).



ಬೌಲಿಂಗ್: ಇರ್ಫಾಣ್ ಪಠಾಣ್ 4-0-27-0, ಕೆವಿನ್ ಪೀಟರ್ಸನ್ 2-0-16-0 (ವೈಡ್-1), ಮಾರ್ನ್ ಮಾರ್ಕೆಲ್



4-0-23-3 (ವೈಡ್-1), ಅಜಿತ್ ಅಗರ್ಕರ್ 3-0-42-0 (ವೈಡ್-1), ಉಮೇಶ್ ಯಾದವ್ 3-0-33-1



(ನೋಬಾಲ್-1, ವೈಡ್-2), ಶಾಬಾಜ್ ನದೀಮ್ 4-0-16-3



ಡೆಲ್ಲಿ ಡೇರ್‌ಡೆವಿಲ್ಸ್: 19.1 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 162



ನಮನ್ ಓಜಾ ಸಿ ಜೆ.ಪಿ. ಡುಮಿನಿ ಬಿ ವೀರ್ ಪ್ರತಾಪ್ ಸಿಂಗ್ 01



ವೀರೇಂದ್ರ ಸೆಹ್ವಾಗ್ ಸಿ ಡೇನಿಯಲ್ ಕ್ರಿಸ್ಟೀನ್ ಬಿ ಡೆಲ್ ಸ್ಟೇಯ್ನ 07



ಕೆವಿನ್ ಪೀಟರ್ಸನ್ ಔಟಾಗದೆ  103



ಜಯವರ್ಧನೆ ಸಿ ಕುಮಾರ ಸಂಗಕ್ಕಾರ ಬಿ ಡೇನಿಯಲ್ ಕ್ರಿಸ್ಟೀನ್  06



ರಾಸ್ ಟೇಲರ್ ರನ್‌ಔಟ್ (ಶಿಖರ್ ಧವನ್)  13



ಇರ್ಫಾನ್ ಪಠಾಣ್ ಸಿ ಪಾರ್ಥಿವ್ ಪಟೇಲ್ ಬಿ ಡೆಲ್ ಸ್ಟೇಯ್ನ 05



ಯೊಗೇಶ್ ನಗರ್ ಔಟಾಗದೆ  23



ಇತರೆ
: (ವೈಡ್-4)  04



ವಿಕೆಟ್ ಪತನ: 1-2 (ನಮನ್ ಓಜಾ; 0.5), 2-15 (ವೀರೇಂದ್ರ ಸೆಹ್ವಾಗ್; 3.2), 3-23 (ಮಾಹೇಲ



ಜಯವರ್ಧನೆ; 4.3), 4-65 (ರಾಸ್ ಟೇಲರ್; 9.4), 5-114 (ಇರ್ಫಾನ್ ಪಠಾಣ್; 14.4).



ಬೌಲಿಂಗ್: ವೀರ್ ಪ್ರತಾಪ್ ಸಿಂಗ್ 4-0-31-1, ಡೆಲ್ ಸ್ಟೇಯ್ನ 4-0-19-2, ಡೇನಿಯಲ್ ಕ್ರಿಸ್ಟೀನ್ 4-0-35-1



(ವೈಡ್-2), ಜೆನ್ ಪಾಲ್ ಡುಮಿನಿ 3-0-33-0, ಅಮಿತ್ ಮಿಶ್ರಾ 2-0-26-0 (ವೈಡ್-1), ಅಂಕಿತ್ ಶರ್ಮ 2.1-0-18-0 (ವೈಡ್-1).  



ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 5 ವಿಕೆಟ್‌ಗಳ ಗೆಲುವು.



ಪಂದ್ಯ ಶ್ರೇಷ್ಠ: ಕೆವಿನ್ ಪೀಟರ್ಸನ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.