ಗುರುವಾರ , ನವೆಂಬರ್ 21, 2019
21 °C
ಜಯವರ್ಧನೆ ಪಡೆಗೆ ಈ ಬಾರಿಯಾದರೂ ಲಭಿಸುವುದೇ ಗೆಲುವು?

ಡೆವಿಲ್ಸ್-ಇಂಡಿಯನ್ಸ್ ಪೈಪೋಟಿ

Published:
Updated:

ನವದೆಹಲಿ (ಪಿಟಿಐ): ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪರದಾಡುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಆರನೇ ಆವೃತ್ತಿಯಲ್ಲಿ ಸತತ ಆರು ಪಂದ್ಯಗಳಲ್ಲಿ ನಿರಾಸೆ ಕಂಡಿದೆ. ಮೊದಲ ಗೆಲುವು ಪಡೆಯಲು ಭಾನುವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಅವಕಾಶ ಲಭಿಸಿದೆ.ಈ ಅವಕಾಶವನ್ನಾದರೂ ಬಳಸಿಕೊಂಡು ಡೆವಿಲ್ಸ್ ಗೆಲುವು ಪಡೆಯಬೇಕಿದೆ. ಸತತ ನಿರಾಸೆಗೆ ಒಳಗಾಗುತ್ತಿರುವ ಅಭಿಮಾನಿಗಳಿಗೆ ಈ ಪಂದ್ಯದ ಜಯದ ಮೂಲಕವಾದರೂ ಸಮಾಧಾನ ಮಾಡಬೇಕಿದೆ. ಈ ಆಸೆಯನ್ನು ಈಡೇರಿಸುವ ಗುರಿ ಡೆವಿಲ್ಸ್ ಬ್ಯಾಟ್ಸ್‌ಮನ್‌ಗಳ ಮೇಲಿದೆ. ಆದರೆ, ಎದುರಾಳಿ ಇಂಡಿಯನ್ಸ್ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ ಎನ್ನುವ ಸತ್ಯವೂ ಡೆವಿಲ್ಸ್‌ಗೆ ಚೆನ್ನಾಗಿ ಗೊತ್ತಿದೆ.ಬ್ಯಾಟಿಂಗ್ ವೈಫಲ್ಯ: ಹಿರಿಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ನಾಯಕ ರಿಕಿ ಪಾಂಟಿಂಗ್ ಅವರನ್ನೊಳಗೊಂಡಿರುವ ಇಂಡಿಯನ್ಸ್ ಕೂಡಾ ಹಿಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ನಿರಾಸೆ ಕಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆರಂಭಿಕ ಜೋಡಿ ಸಚಿನ್-ಪಾಂಟಿಂಗ್ ರನ್ ಗಳಿಸಲು ಪರದಾಡುತ್ತಿದ್ದಾರೆ. `ನಾನು ಹಾಗೂ ಸಚಿನ್ ಜವಾಬ್ದಾರಿಯಿಂದ ಆಡಬೇಕಿದೆ. ಉತ್ತಮ ಆರಂಭ ದೊರಕಿಸಿಕೊಡುವುದು ಕರ್ತವ್ಯ' ಎಂದು ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಖುದ್ದು ಪಾಂಟಿಂಗ್ ಹೇಳಿದ್ದರು.ಬುಧವಾರ (ಏಪ್ರಿಲ್ 24) 40ನೇ ವರ್ಷಕ್ಕೆ ಕಾಲಿಡಲಿರುವ ಲಿಟಲ್ ಚಾಂಪಿಯನ್ ಐಪಿಎಲ್ ಆರನೇ ಅವೃತ್ತಿಯಲ್ಲಿ ನಿರೀಕ್ಷೆಯಂತೆ ಬ್ಯಾಟಿಂಗ್ ಮಾಡಿಲ್ಲ. ಈ ಆಟಗಾರ ಐದು ಪಂದ್ಯಗಳಿಂದ ಒಟ್ಟು 69 ರನ್ ಗಳಿಸಿದ್ದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ ಇಷ್ಟೇ ಪಂದ್ಯಗಳಿಂದ 52 ರನ್ ಮಾತ್ರ ಕಲೆ ಹಾಕಿದ್ದಾರೆ.ದಿನೇಶ್ ಕಾರ್ತಿಕ್, ರೋಹಿತ್ ಶರ್ಮ, ಕೀರನ್   ಪೊಲಾರ್ಡ್ ಅವರಂತಹ ಬ್ಯಾಟ್ಸ್‌ಮನ್‌ಗಳು ಹಾಗೂ ಮಿಷೆಲ್ ಜಾನ್ಸನ್, ಲಸಿತ್ ಮಾಲಿಂಗ, ರಿಷಿ ಧವನ್ ಅವರನ್ನೊಳಗೊಂಡ ಇಂಡಿಯನ್ಸ್ ತಂಡ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಆದರೂ, ನಿರಾಸೆ ತಪ್ಪುತ್ತಿಲ್ಲ. ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 92 ರನ್‌ಗೆ ಆಲ್‌ಔಟ್ ಆಗಿದ್ದ ಪಾಂಟಿಂಗ್ ಪಡೆ ಈ ವಿಭಾಗದತ್ತ ಗಮನ ಹರಿಸಬೇಕಿದೆ. ಐದು ಪಂದ್ಯಗಳನ್ನಾಡಿರುವ ಇಂಡಿಯನ್ಸ್ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ಆರು ಅಂಕಗಳನ್ನು ಕಲೆ ಹಾಕಿದೆ.ಡೆವಿಲ್ಸ್‌ಗೂ ಬೇಕಿದೆ ಬಲ:  ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಸಂಕಷ್ಟ ಡೇರ್‌ಡೆವಿಲ್ಸ್ ತಂಡವನ್ನೂ ಬಿಟ್ಟಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್ ಇದ್ದರೂ ಈ ತಂಡಕ್ಕೆ ಉತ್ತಮ ಆರಂಭ ಲಭಿಸಿಲ್ಲ. ಈ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 86 ರನ್‌ಗಳ ಸೋಲು ಕಂಡಿತ್ತು. ಕೆವಿನ್ ಪೀಟರ್ಸನ್ ಹಾಗೂ ರಾಸ್ ಟೇಲರ್ ಅವರ ಅನುಪಸ್ಥಿತಿಯೂ ಕಾಡುತ್ತಿದೆ.2012ರ ಐಪಿಎಲ್ ಋತುವಿನಲ್ಲಿ ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಡೆವಿಲ್ಸ್‌ಗೆ ಆರನೇ ಆವೃತ್ತಿಯಲ್ಲಿ ಪಾಯಿಂಟ್ ಖಾತೆ ತೆರೆಯಲು ಸಾಧ್ಯವಾಗಿಲ್ಲ.ಡೆಲ್ಲಿ ಡೇರ್‌ಡೆವಿಲ್ಸ್-ಮುಂಬೈ ಇಂಡಿಯನ್ಸ್ (ನವದೆಹಲಿ)

ಆರಂಭ: ಸಂಜೆ 4 ಗಂಟೆಗೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರತಿಕ್ರಿಯಿಸಿ (+)