ಗುರುವಾರ , ಮೇ 13, 2021
16 °C

ಡೆವಿಲ್ಸ್ ಗೆಲುವಿನ ಓಟದ ಛಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಡೆಲ್ಲಿ ಡೇರ್‌ಡೆವಿಲ್ಸ್ ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದ್ದರೆ, ಎದುರಾಳಿ ಡೆಕ್ಕನ್ ಚಾರ್ಜರ್ಸ್‌ಗೆ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳವ ತವಕ.ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಈವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿ ಚಾರ್ಜರ್ಸ್ ನಿರಾಸೆಗೊಂಡಿದೆ. ಸೋಲಿನ ಸರಪಣಿಯ ಕೊಂಡಿ ಕಳಚಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ವಿರುದ್ಧ ಅದು ಸತ್ವವುಳ್ಳ ಆಟವಾಡಿ ಯಶಸ್ಸಿನ ಸಿಹಿ ಸವಿಯಲು ಸಾಧ್ಯವಾಗಲಿಲ್ಲ.ಗುರುವಾರದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧವೂ ಅಂಥ ಆಘಾತ ಕಾಡಬಾರದೆಂದು ಚಾರ್ಜರ್ಸ್ ನಾಯಕ ಕುಮಾರ ಸಂಗಕ್ಕಾರ ಬಯಸುವುದು ಸರಿ. ಆದರೆ ವೀರೇಂದ್ರ ಸೆಹ್ವಾಗ್ ನೇತೃತ್ವದ ಡೇರ್ ಡೆವಿಲ್ಸ್ ಸುಲಭದ ಎದುರಾಳಿಯಂತೂ ಅಲ್ಲ. ಅದು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಸಂಭ್ರಮಿಸಿದೆ.ಕೋಲ್ಕತ್ತ ನೈಟ್    ರೈಡರ್ಸ್ ಎದುರು ಎಂಟು ವಿಕೆಟ್‌ಗಳ ಅಂತರದಿಂದ ಜಯಿಸಿ ಶುಭಾರಂಭ ಮಾಡಿದ್ದ ಅದು ಆನಂತರ        ರಾಯಲ್ ಚಾಲೆಂಜರ್ಸ್ ತಂಡಕ್ಕೆ 20 ರನ್‌ಗಳಿಂದ ಶರಣಾದರೂ ಮತ್ತೆ ಪುಟಿದೆದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಎಂಟು ವಿಕೆಟ್‌ಗಳಿಂದ ಮಣಿಸಿತು. ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನಲ್ಲಿಯೇ ಏಳು ವಿಕೆಟ್‌ಗಳಿಂದ ಜಯಿಸಿತು.ಅದೇ ಗೆಲುವಿನ ಉತ್ಸಾಹದೊಂದಿಗೆ ಮುನ್ನುಗ್ಗುವ ವಿಶ್ವಾಸವೂ `ವೀರೂ~ ಪಡೆಗಿದೆ. ಬ್ಯಾಟಿಂಗ್ ಬಲವಾಗಿರುವ ಜೊತೆಗೆ ಡೇರ್‌ಡೆವಿಲ್ಸ್ ಬೌಲಿಂಗ್ ಶಕ್ತಿಯೂ ಅಪಾರ. ಶಹ್ಬಾಜ್ ನದೀಮ್, ಮಾರ್ನ್ ಮಾರ್ಕೆಲ್, ಅಜಿತ್ ಅಗರ್ಕರ್ ಹಾಗೂ ಉಮೇಶ್ ಯಾದವ್ ಅವರು ಬಿಗುವಿನ ದಾಳಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಐಪಿಎಲ್ ಐದನೇ ಅವತರಣಿಕೆಯಲ್ಲಿ ಈ ತಂಡವು ಬಲಾಢ್ಯವಾಗಿ ಕಾಣಿಸುತ್ತಿದೆ.ಆಡಿದ ನಾಲ್ಕೇ ಪಂದ್ಯಗಳಲ್ಲಿ ಆರು ಪಾಯಿಂಟುಗಳನ್ನು ಗಳಿಸಿರುವ ಕಾರಣ ಡೇರ್‌ಡೆವಿಲ್ಸ್ ತಂಡದ ಆಟಗಾರರು ಒತ್ತಡದಿಂದ ಮುಕ್ತವಾಗಿ ಆಡುವಂಥ ವಾತಾವರಣವೂ ಇದೆ. ಡೆಕ್ಕನ್ ಚಾರ್ಜಸ್ ಎದುರು ತನ್ನ ನೆಚ್ಚಿನ ಅಂಗಳದಲ್ಲಿಯೇ ಆಡುವುದರಿಂದ ಗೆಲುವು ಕೈತಪ್ಪದು ಎನ್ನುವ ಭರವಸೆಯೂ ಇಮ್ಮಡಿಯಾಗಿದೆ. ಬೌಲಿಂಗ್ ವಿಭಾಗದಲ್ಲಿನ ಕೊರತೆಯಿಂದ ತೊಳಲಾಡುತ್ತಿರುವ ಕುಮಾರ ಸಂಗಕ್ಕಾರ ಬಳಗಕ್ಕೆ ಸೆಹ್ವಾಗ್ ನಾಯಕತ್ವದ ತಂಡವು ಕಬ್ಬಿಣದ ಕಡಲೆ ಆಗುವುದರಲ್ಲಿ ಅನುಮಾನವಿಲ್ಲ.ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚಾರ್ಜರ್ಸ್‌ನ ಸಂಗಕ್ಕಾರ, ಶಿಖರ್ ಧವನ್ ಹಾಗೂ ಜೆನ್ ಪಾಲ್ ಡುಮಿನಿ ಬ್ಯಾಟಿಂಗ್ ವಿಭಾಗದಲ್ಲಿ ಗಮನ ಸೆಳೆದಿದ್ದರು. ಆದರೆ ಮುಂಚೂಣಿಯ ಬೌಲರ್‌ಗಳಾದ ಡೆಲ್ ಸ್ಟೇಯ್ನ ಹಾಗೂ ಡೇನಿಯಲ್ ಕ್ರಿಸ್ಟೀನ್ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ತಂಡಕ್ಕೆ ಗೆಲುವು ಮರಿಚಿಕೆಯಾಗಿಯೇ ಉಳಿದಿದೆ. ಕೋಟ್ಲಾ ಅಂಗಳದಲ್ಲಿಯೂ ಅಂಥ ನಿರಾಸೆ ಕಾಡಬಾರದು ಎನ್ನುವುದು ಸಂಗಕ್ಕಾರ ಆಶಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.