ಶನಿವಾರ, ನವೆಂಬರ್ 16, 2019
21 °C
ಇಂಡೊನೇಷ್ಯಾ ಎದುರು 5-0 ಗೆಲುವು; ಸೋಮ್, ಯೂಕಿ ಮೆರೆದಾಟ

ಡೇವಿಸ್ ಕಪ್: ಮೋಡಿ ಮಾಡಿದ ಭಾರತದ ಪಾರುಪತ್ಯ

Published:
Updated:
ಡೇವಿಸ್ ಕಪ್: ಮೋಡಿ ಮಾಡಿದ ಭಾರತದ ಪಾರುಪತ್ಯ

ಬೆಂಗಳೂರು: ಆರಂಭಕ್ಕೆ ಮುನ್ನವೇ ಗೆಲುವಿನ ನಿರೀಕ್ಷೆ ಇತ್ತು. ಆದರೆ ಈ ರೀತಿ ಪಾರಮ್ಯ ಮೆರೆಯಬಹುದು ಎಂದು ಯಾರೂ ಊಹಿಸಿರಲಿಲ್ಲ. ಯುವ ಹಾಗೂ ಅನುಭವಿ ಆಟಗಾರರ ಸಮ್ಮಿಶ್ರಣದಿಂದ ಕೂಡಿದ ಭಾರತದ ಆಟಗಾರರದ್ದು ಅದ್ಭುತ ಹಾಗೂ ಮನಮೆಚ್ಚುವಂಥ ಪ್ರದರ್ಶನ.ಇದರ ಪರಿಣಾಮ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೋರ್ಟ್‌ನಲ್ಲಿ ಭಾರತ ತಂಡದವರು ಭಾನುವಾರ 5-0ರಲ್ಲಿ ಇಂಡೊನೇಷ್ಯಾ ಎದುರು ವಿಜಯದುಂದುಭಿ ಮೊಳಗಿಸಿದರು.ಶನಿವಾರ 3-0ರಲ್ಲಿ ಮುನ್ನಡೆ ಸಾಧಿಸಿದಾಗಲೇ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಏಷ್ಯಾ ಓಸೀನಿಯಾ ಗುಂಪು-1ರ್ಲ್ಲಲಿ ಭಾರತ ತಂಡ ತನ್ನ ಸ್ಥಾನ ಗಟ್ಟಿಮಾಡಿಕೊಂಡಿತ್ತು. ಹಾಗಾಗಿ ಅಂತಿಮ ದಿನದ ಪಂದ್ಯಗಳಿಗೆ ಅಷ್ಟೊಂದು ಮಹತ್ವ ಇರಲಿಲ್ಲ.ಆದರೆ ರಿವರ್ಸ್ ಸಿಂಗಲ್ಸ್‌ನ್ಲ್ಲಲಿ ಸೋಮದೇವ್ ದೇವವರ್ಮನ್ ಹಾಗೂ ಯೂಕಿ ಭಾಂಬ್ರಿ ಸುಲಭವಾಗಿ ಗೆಲುವು ಸಾಧಿಸಿದ್ದು, ಈ ಪೈಪೋಟಿಯಲ್ಲಿ ಆತಿಥೇಯರು ಪೂರ್ಣ ಪಾರಮ್ಯ ಮೆರೆಯಲು ಸಾಧ್ಯವಾಯಿತು. ಎಲ್ಲಾ ಪಂದ್ಯಗಳನ್ನು ಗೆದ್ದು `ಕ್ಲೀನ್ ಸ್ವೀಪ್' ಮಾಡಿದರು. ಹಾಗಾಗಿ ಪ್ರವಾಸಿ ಇಂಡೊನೇಷ್ಯಾ ಸೊನ್ನೆ ಸುತ್ತುವಂತಾಯಿತು.ಈ ಗೆಲುವಿನ ಬಳಿಕ ಆತಿಥೇಯ ತಂಡದವರು ಮತ್ತೊಮ್ಮೆ ತ್ರಿವರ್ಣ ಧ್ವಜ ಹಿಡಿದು ಅಂಗಳದ ತುಂಬೆಲ್ಲಾ ಓಡಾಡಿದರು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳಿಂದ ಚಪ್ಪಾಳೆಯ ಮೆಚ್ಚುಗೆ ಲಭಿಸಿತು.ರಿವರ್ಸ್ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಯುವ ಆಟಗಾರ ಸನಮ್ ಸಿಂಗ್ ಆಡಬೇಕಿತ್ತು. ಆದರೆ ಸನಮ್‌ಗೆ ಗಾಯವಾಗಿದ್ದ ಕಾರಣ ಅಂತಿಮ ಕ್ಷಣದಲ್ಲಿ ಆತಿಥೇಯ ತಂಡ ತನ್ನ ಅಗ್ರ ಶ್ರೇಯಾಂಕದ ಆಟಗಾರ ಸೋಮದೇವ್ ಅವರನ್ನು ಕಣಕ್ಕಿಳಿಸಿತು.ಈ ಬದಲಾವಣೆ ಪ್ರೇಕ್ಷಕರಲ್ಲೂ ಖುಷಿಗೆ ಕಾರಣವಾಯಿತು. 208ನೇ ರಾಂಕ್ ನ ಸೋಮ್ ಮನಮೋಹಕ ಆಟದ ಮೂಲಕ ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಉಳಿಸಿಕೊಂಡರು. ಅವರು 6-3, 6-1ರಲ್ಲಿ ಡೇವಿಡ್ ಆಂಗ್ ಸುಸಾಂತೊ ಅವರನ್ನು ಮಣಿಸಿದರು.ಮೊದಲ ಸೆಟ್‌ನ ಆರನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು 4-2ರಲ್ಲಿ ಮುನ್ನಡೆದರು. ಬಳಿಕ ಏಳು ಹಾಗೂ ಒಂಬತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್ ಕಾಪಾಡಿಕೊಂಡು ಸೆಟ್ ಜಯಿಸಿದರು.ದೇವವರ್ಮನ್ ಆಕರ್ಷಕ ಸರ್ವ್‌ಗಳ ಮೂಲಕ 1357ನೇ ರಾಂಕ್ ನ ಆಟಗಾರನ ಮೇಲೆ ಪ್ರಭುತ್ವ ಸಾಧಿಸಿದರು. ಅದ್ಭುತ ಏಸ್‌ಗಳ ಮೂಲಕ ಪ್ರೇಕ್ಷಕರಿಂದ ಜೋರು ಚಪ್ಪಾಳೆ ಗಿಟ್ಟಿಸಿಕೊಂಡರು. ಎರಡನೇ ಸೆಟ್ ಬಹುತೇಕ ಏಕಮುಖಿಯಾಗಿತ್ತು. ಈ ಸೆಟ್‌ನಲ್ಲಿ ಮೂರು ಬಾರಿ ಡೇವಿಡ್ ಅವರ ಸರ್ವ್ ತುಂಡರಿಸಿದರು. ಇಂಡೊನೇಷ್ಯಾ ಆಟಗಾರ ಸರ್ವ್‌ನಲ್ಲಿ ಹಲವು ಬಾರಿ ಎಡವಟ್ಟು ಮಾಡಿಕೊಂಡರು. ಈ ಪೈಪೋಟಿ 68 ನಿಮಿಷ ನಡೆಯಿತು.ಆದರೆ ಯೂಕಿ ಭಾಂಬ್ರಿ ಹಾಗೂ ವಿಸ್ನು ಆದಿ ನುಗ್ರೊ ನಡುವಿನ ಪಂದ್ಯ ಸಂಪೂರ್ಣ ಏಕಮುಖಿಯಾಗಿತ್ತು. ಈ ಕಾರಣ ಈ ಪಂದ್ಯ ಕೇವಲ 44 ನಿಮಿಷಗಳಲ್ಲಿ ಮುಗಿದು ಹೋಯಿತು. 279ನೇ ರಾಂಕ್ ನ ಯೂಕಿ ನಿರೀಕ್ಷೆಗೂ ಮೀರಿದ ಆಟವಾಡಿದರು. ಹಾಗಾಗಿ ಅವರು 6-0, 6-1ರಲ್ಲಿ ಜಯಭೇರಿ ಮೊಳಗಿಸಿದರು.ಮೊದಲ ಸೆಟ್‌ನಲ್ಲಿ ಪ್ರವಾಸಿ ಆಟಗಾರ ಒಂದೂ ಗೇಮ್ ಗೆಲ್ಲಲಿಲ್ಲ. ಭಾಂಬ್ರಿ ಆಟದ ವೈಖರಿಗೆ ಇದೇ ಸಾಕ್ಷಿ. ಈ ಸೆಟ್‌ನಲ್ಲಿ ಭಾರತದ ಆಟಗಾರ ಮೂರು ಬಾರಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದರು. ಎರಡನೇ ಸೆಟ್‌ನಲ್ಲಿ ವಿಸ್ನು ಏಕೈಕ ಗೇಮ್ ಗೆದ್ದರು. ಇನ್ನುಳಿದಂತೆ 20 ವರ್ಷ ವಯಸ್ಸಿನ ಯೂಕಿ ಅವರದ್ದೇ ಪಾರಮ್ಯ.ಬೆಂಗಳೂರಿನಲ್ಲಿ ನಡೆದ ಡೇವಿಸ್ ಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ

ಎದುರಾಳಿ             ವರ್ಷ        ಫಲಿತಾಂಶ

ಆಸ್ಟ್ರೇಲಿಯಾ         1970    3-1 ಗೆಲುವು (ಭಾರತ)

ಆಸ್ಟ್ರೇಲಿಯಾ         1972    0-5 ಸೋಲು (ಭಾರತ)

ಸ್ವೀಡನ್               1985    1-4 ಸೋಲು (ಭಾರತ)

ಇಂಡೊನೇಷ್ಯಾ      2013    5-0 ಗೆಲುವು (ಭಾರತ)

ಪ್ರತಿಕ್ರಿಯಿಸಿ (+)