ಶನಿವಾರ, ಜುಲೈ 24, 2021
28 °C

ಡೊನೇಶನ್‌ ವಸೂಲಿಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಯಾವುದೇ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಸಂದರ್ಭದಲ್ಲಿ ವಂತಿಗೆ, ಅಧಿಕ ಪ್ರವೇಶಾತಿ ಶುಲ್ಕ ವಸೂಲು ಮಾಡುವಂತಿಲ್ಲ. ವಂತಿಗೆ ಅಥವಾ ಅಧಿಕ ಶುಲ್ಕ ವಸೂಲು ಮಾಡುವುದರ ವಿರುದ್ಧ ಪೋಷಕರು ದೂರು ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ತಿಳಿಸಿದ್ದಾರೆ.ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿ ಅವಧಿಗೆ ಮುನ್ನವೇ ದಾಖಲಾತಿ ಮಾಡುತ್ತಿರುವುದು ಮತ್ತು ಕ್ಯಾಪಿಟೇಶನ್‌ ಶುಲ್ಕ ವಸೂಲು ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ ಎಂದು ತಿಳಿಸಿದರು.ಖಾಸಗಿ ಶಿಕ್ಷಣಸಂಸ್ಥೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಇಲಾಖೆ ನಿಯಮಗಳನ್ನು ಅನುಸರಿಸಿ ಶಾಲೆಗಳನ್ನು ನಡೆಸಬೇಕು ಎಂದು ಇಲಾಖೆ ನೀಡಿದ ಸುತ್ತೋಲೆಗಳನ್ನು ಕೆಲವು ಸಂಸ್ಥೆಗಳು ಕಡೆಗಣಿಸುತ್ತಿವೆ.ಸ್ವಂತ ಹಿತಾಸಕ್ತಿ ಮತ್ತು ವ್ಯಾಪಾರಿ ಮನೋಭಾವನೆಯಿಂದ ನಿಯಮಗಳನ್ನು ಪಾಲಿಸದೆ ಶಾಲೆಗಳನ್ನು ನಡೆಸುತ್ತಿವೆ ಎಂಬುದು ಗಮನಕ್ಕೆ ಬಂದಿದೆ~ ಎಂದರು.ಯಾವುದೇ ವಿದ್ಯಾಸಂಸ್ಥೆಯು ಏಕರೂಪ ಪ್ರವೇಶಾತಿ ನಿಯಮ ಮತ್ತು ಶುಲ್ಕ ವಸೂಲಿ ನಿಯಮವನ್ನು ಉಲ್ಲಂಘಿಸುವುದು ಶಿಕ್ಷಣ ಕಾಯ್ದೆ ಅಧಿನಿಯಮ 1983ರ ಕಲಂ 51(2) ಹಾಗೂ 125 ಅಡಿಯಲ್ಲಿ ಅಪರಾಧ.ಎಲ್ಲಕ್ಕಿಂತ ಮೊದಲು, ಯಾವುದೇ ಡೊನೇಶನ್‌ ಅಥವಾ ವಂತಿಗೆ ವಸೂಲು ಮಾಡುವುದಿಲ್ಲ ಎಂದು ಫಲಕಗಳನ್ನು ಪ್ರದರ್ಶಿಸಿ ಅದರಂತೆ ದಾಖಲಾತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ತಾಲ್ಲೂಕಿನ ಶೇ. 25 - 30 ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮ ಉಲ್ಲಂಘಿಸಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಅಂಥ ಸಂಸ್ಥೆಗಳ ವಿರುದ್ಧ ಇಲಾಖೆ ಈಗಾಗಲೇ ಶಿಸ್ತುಕ್ರಮ ಜರುಗಿಸಿದೆ. ಅಧಿಕ ಶುಲ್ಕ ವಸೂಲಿಗಾಗಿ ಪೀಡಿಸುವ ಶಾಲೆಗಳ ವಿರುದ್ಧ ಪೋಷಕರು ಇಲಾಖೆಗೆ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಸಮಿತಿ ರಚನೆ: ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮ ಪಾಲಿಸುವ ಕುರಿತು ವೀಕ್ಷಣೆಗೆ ತಲಾ ಮೂವರು ಅಧಿಕಾರಿಗಳ ಮೂರು ತಂಡಗಳನ್ನು ರಚಿಸಲಾಗಿದೆ.  ಈಗಾಗಲೇ ತಾಲ್ಲೂಕಿನ ಎಲ್ಲ 82 ಖಾಸಗಿ ಶಾಲೆಗಳಿಗೂ ಭೇಟಿ ನೀಡಿವೆ. ನಿಯಮ ಪಾಲಿಸದ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ನೋಟೀಸ್‌ ಜಾರಿ ಮಾಡಲಾಗಿದೆ. ಹಲವು ಸಂಸ್ಥೆಗಳು  ಇನ್ನೂ ಉತ್ತರ ನೀಡಿಲ್ಲ. ಕೆಲವು ಸಂಸ್ಥೆಗಳು  ಸಮಂಜಸ ಉತ್ತರ ನೀಡಿದ್ದು ಶೀಘ್ರವೇ ಕಾನೂನು ಕ್ರಮ ಜರುಗಿಸಲು ಯೋಚಿಸಲಾಗುತ್ತಿದೆ ಎಂದರು.ಶಾಲಾ ಸಮವಸ್ತ್ರ, ಷೂ, ಟೈ, ನೋಟ್‌ ಪುಸ್ತಕ, ಹಾಗೂ ಲೇಖನ ಸಾಮಗ್ರಿಗಳನ್ನು ಶಾಲೆಯಲ್ಲಿ ಮಾರಾಟ ಮಾಡಬಾರದು. ಅಥವಾ ಅವುಗಳನ್ನು ಯಾವುದೇ ನಿರ್ದಿಷ್ಟ ಅಂಗಡಿ ಮಳಿಗೆಯಿಂದ ಖರೀದಿಸಲು ಸೂಚಿಸಬಾರದು. ಎಸ್‌ಸಿ, ಎಸ್‌ಟಿ, ಓಬಿಸಿ ಮತ್ತು ಅಲ್ಪ ಸಂಖ್ಯಾತರಿಗೆ ಶಾಲಾ ದಾಖಲಾತಿಗಳಲ್ಲಿ ಮೀಸಲಾತಿ ಕಡ್ಡಾಯ. ಸ್ವೀಕರಿಸಿದ ಶುಲ್ಕ ಹಣಕ್ಕೆ ಕಡ್ಡಾಯವಾಗಿ ರಸೀತಿ ನೀಡಬೇಕು ಎಂದರು.ಉಚಿತ, ಕಡ್ಡಾಯ ಶಿಕ್ಷಣ: ಸಂವಿಧಾನದ ಪರಿಚ್ಚೇದ 21ರ ಪ್ರಕಾರ ಶಿಕ್ಷಣ ಮೂಲಭೂತ ಹಕ್ಕು. ಶಿಕ್ಷಣ ಹಕ್ಕು ಕಾಯ್ದೆ-2009ರ ಅನ್ವಯ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 6ರಿಂದ 14ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು. ಯಾವುದೇ ವಿದ್ಯಾರ್ಥಿಯನ್ನು ಯಾವುದೇ ಶಿಕ್ಷಣ ಸಂಸ್ಥೆ ನಿರಾಕರಿಸುವಂತಿಲ್ಲ ಎಂದರು.ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಹಿಮಂತರಾಜು, ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಕದಿರಯ್ಯ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.