ಶುಕ್ರವಾರ, ನವೆಂಬರ್ 15, 2019
21 °C

ಡೊನೇಷನ್ ತಡೆಗಟ್ಟಲು ಆಗ್ರಹ

Published:
Updated:

ಬಾಗೇಪಲ್ಲಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ವಂತಿಗೆ ನೆಪದಲ್ಲಿ ಪೋಷಕರನ್ನು ಶೋಷಿಸುತ್ತಿವೆ. ಇದನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವ ದಲ್ಲಿ ನೂರಾರು ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಡೆಪ್ಯೂಟಿ ತಹಶೀಲ್ದಾರ್ ನಾರಾಯಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ನೆರೆದ ನೂರಾರು ವಿದ್ಯಾರ್ಥಿಗಳು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಎಸ್‌ಎಫ್‌ಐ ಮುಖಂಡ ಪಿ.ಎಸ್. ರಮೇಶ್ ಮಾತನಾಡಿ, ಯಾವುದೇ ನದಿ ನಾಲೆಯಿಲ್ಲದ ತಾಲ್ಲೂಕಿನಲ್ಲಿ ರೈತರು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲೂ ಬಾಗೇ ಪಲ್ಲಿ ತಾಲ್ಲೂಕು ಶಿಕ್ಷಣ ರಂಗದಲ್ಲಿ ಹಿಂದುಳಿದಿರುವ ಕುರಿತು ಪ್ರಸಾಪಿಸಲಾಗಿದೆ ಎಂದರು.ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಜಿಲ್ಲೆಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿದೆ. ಸರ್ಕಾರದ ಅಧೀನದಲ್ಲಿರುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲೂ ಯಾವುದೇ ಮೂಲ ಸೌಕರ್ಯ ಒದಗಿಸದೆ ವಂತಿಗೆ ವಸೂಲಿ ಮಾಡಲಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಟೀಕಿಸಿದರು.ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಿ ಡೊನೇಷನ್ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿದರು. ಮುಖಂಡರಾದ ಶ್ರೀನಿವಾಸ, ಮಧು, ನಾಗಾರ್ಜುನ, ಅನಿಲ್ ಕುಮಾರ್, ಮೂರ್ತಿ, ಬೈಯಪ್ಪರೆಡ್ಡಿ, ಶ್ರೀನಿವಾಸ್ ಮುಂಚೂಣಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)