ಡೊಳ್ಳು ಬಾರಿಸುವ ಕಾಯಕಯೋಗಿ

7

ಡೊಳ್ಳು ಬಾರಿಸುವ ಕಾಯಕಯೋಗಿ

Published:
Updated:
ಡೊಳ್ಳು ಬಾರಿಸುವ ಕಾಯಕಯೋಗಿ

ಶಿಗ್ಗಾಂವ: ಜನರಲ್ಲಿ ಕಡಿಮೆಯಾಗುತ್ತಿರುವ ಧಾರ್ಮಿಕ ಭಾವನೆಯನ್ನು ಮತ್ತೆ ಜಾಗೃತಗೊಳಿಸುವ ಉದ್ದೇಶದಿಂದ ಮಠ ಮಾನ್ಯಗಳು, ಸಾಧು ಸಂತರು ಪುರಾಣ, ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಡೊಳ್ಳು ಬಾರಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟುಮಾಡುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.

ಹೌದು, ಅವರದ್ದು ನಿಜಕ್ಕೂ ನಿಸ್ವಾರ್ಥ ಸೇವೆ. ಯಾರೂ ಇವರನ್ನು ಈ ಕೆಲಸ ಮಾಡಲು ನೇಮಕ ಮಾಡಿಲ್ಲ. ಅವರು ಅದನ್ನು ಮಾಡದಿದ್ದರೂ ಏಕೆ ಮಾಡಲಿಲ್ಲ ಎಂದು ಕೇಳುವವರಿಲ್ಲ. ಆದರೂ ನಿತ್ಯ ಆ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಾರೆ.

ಅವರ ಹೆಸರು ಸಹದೇವಪ್ಪ ಕಮಡೊಳ್ಳಿ. ವೃತ್ತಿಯಲ್ಲಿ ಕೃಷಿಕರಾದ ಇವರು ಡೊಳ್ಳು ಬಾರಿಸುವುದನ್ನು ಸಣ್ಣವರಿದ್ದಾಗಲೇ ಕಲಿತುಕೊಂಡಿದ್ದಾರೆ. ಕಲಿತ ವಿದ್ಯೆಯನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು ಎಂಬ ಸದುದ್ದೇಶದಿಂದ ಪಟ್ಟಣದಲ್ಲಿ ಡೊಳ್ಳು ಬಾರಿಸುತ್ತಲೇ ಹಬ್ಬ ಹರಿದಿನಗಳ ವಿಶೇಷ ಹಾಗೂ ಧಾರ್ಮಿಕ ಕಾರ್ಯಗಳನ್ನು ಜನರಿಗೆ ಬಿತ್ತರಿಸುತ್ತಾ ಸಾಗುತ್ತಾರೆ.

ಕಳೆದ 30 ವರ್ಷಗಳಿಂದ ಈ ಕಾಯಕವನ್ನು ರೂಢಿಸಿಕೊಂಡಿರುವ ಇವರು, ಪ್ರತಿ ಗುರುವಾರ, ಭಾನುವಾರ, ಹಬ್ಬ ಹರಿದಿನಗಳ, ಹುಣ್ಣಿಮೆ ಅಮವಾಸ್ಯೆ ದಿನದಂದು ಕಡ್ಡಾಯವಾಗಿ ಕೊರಳಿಗೆ ಡೊಳ್ಳು ಹಾಕಿಕೊಂಡು ಅದನ್ನು ಬಾರಿಸುತ್ತಾ ಬೀದಿ ಬೀದಿಗಳಲ್ಲಿ ಆ ದಿನದ ಮಹತ್ವವನ್ನು ಸಾರುತ್ತಾರೆ.

ಇವರ ಡೊಳ್ಳಿನ ಸದ್ದು ಕೇಳಿಸುತ್ತಿದ್ದಂತೆ ಇಂದು ಯಾವುದೋ ಮಹತ್ವವಾದ ದಿನವಿರಬೇಕು. ಇಲ್ಲವೇ ಹಬ್ಬ ಇರಬೇಕು ಎಂಬುದು ಜನರಿಗೆ ಮನದಟ್ಟಾಗುತ್ತದೆ. ಸಹದೇವಪ್ಪರ ಡೊಳ್ಳಿನ ಸಪ್ಪಳ ಕೇಳುತ್ತಿದ್ದಂತೆ ಜನತೆ ಮನೆಯಿಂದ ಹೊರ ಬಂದು ಅವರಿಂದ ಬಂದ ಸುದ್ದಿ ತಿಳಿಯಲು ಆತುರರಾಗಿರುತ್ತಾರೆ.

67 ವಯಸ್ಸಿನ ಸಹದೇವಪ್ಪ ಕೇವಲ ಬೀದಿಗಳಲ್ಲಿ ಡೊಳ್ಳು ಬಾರಿಸುವುದಕಷ್ಟೇ ಸೀಮಿತವಾಗಿಲ್ಲ. ಆಮಂತ್ರಣ ಇರಲಿ, ಇರದಿರಲಿ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಇವರ ಸೇವೆ ಖಾಯಂ ಆಗಿ ಇರುತ್ತದೆ.

ಸಹದೇವಪ್ಪನವರು ಸುಮಾರು 50ಕ್ಕೊ ಹೆಚ್ಚು ಜಾನಪದ ಡೊಳ್ಳಿನ ಪದಗಳನ್ನು ರಚಿಸಿದ್ದಾರಲ್ಲದೇ ಅವುಗಳನ್ನು ತಾವೇ ಹಾಡುತ್ತಾರೆ.

ಇವರು ಆರ್ಥಿಕವಾಗಿ ಸದೃಢವಾಗಿಲ್ಲ. ಹಾಗಂತ ಡೊಳ್ಳು ಬಾರಿಸಿ ಹಣ ಮಾಡುವುದೂ ಇವರ ಉದ್ದೇಶವಲ್ಲ. ಇವರ ಸೇವೆಗೆ ಜನರು ತಾವಾಗಿಯೇ ಏನಾದರೂ ನೀಡಿದರೆ ತೆಗೆದುಕೊಳ್ಳುತ್ತಾರೆ. ಹೊರತು, ಯಾರಲ್ಲಿಯೂ ಕಾಡಿ, ಬೇಡಿ ಹಣ ಕೇಳುವುದಿಲ್ಲ. ತಮಗಿರುವ ಜಮೀನನ್ನು ಬೇರೆಯವರಿಗೆ ಲಾವಣಿ ಹಾಕಿ ಅದರಲ್ಲಿ ಬರುವ ಆದಾಯದಲ್ಲಿ ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಐವರು ಮಕ್ಕಳ ಕುಟುಂಬ ನಿರ್ವಹಣೆ ಮಾಡುತ್ತಾರೆ.

ಸಹದೇವಪ್ಪ ಅವರ ನಿಸ್ವಾರ್ಥ ಸೇವೆ ರಾಜ್ಯಕ್ಕಷ್ಟೇ ಅಲ್ಲದೇ ಹೊರ ಜಿಲ್ಲೆಗೂ ವ್ಯಾಪಿಸಿದೆ. ಅವರ ಸೇವೆಯನ್ನು ಮೆಚ್ಚಿ ರಾಜ್ಯದ ವಿವಿಧ ಜಿಲ್ಲೆಗಳ ಸಂಘ ಸಂಸ್ಥೆಗಳಷ್ಟೇ ಅಲ್ಲದೇ ಮಹಾರಾಷ್ಟ್ರದಲ್ಲಿ ಶಿವೂರಕರ ಸದ್ಗುರು ಹರಿ ಬಸವ ಸಂಘ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry