ಡೋಲಕ್ ರಾಮಕೃಷ್ಣರ ಹಾಡು- ಪಾಡು

7

ಡೋಲಕ್ ರಾಮಕೃಷ್ಣರ ಹಾಡು- ಪಾಡು

Published:
Updated:

ಗೌರಿಬಿದನೂರು ತಾಲ್ಲೂಕಿನ ಯಾವುದೇ ಭಾಗದಲ್ಲಿ ಖಾಸಗಿ ಮತ್ತು ಸರ್ಕಾರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಅಲ್ಲಿ ಕಲಾವಿದ ಚಂದಣದೂರಿನ ಎನ್.ರಾಮಕೃಷ್ಣ ಹಾಜರಿರುತ್ತಾರೆ. ಪರಿಸರ, ಜನಪದ ಮತ್ತು ಕ್ರಾಂತಿ ಗೀತೆಗಳ ಜೊತೆ  ಕಂಜರ, ಮೃದಂಗ, ಡೋಲಕ್ ಅರೆ ಮತ್ತು ಇನ್ನಿತರೆ ಪರಿಕರಗಳನ್ನು ನುಡಿಸುತ್ತಾರೆ. ಗಾಯನ ಮತ್ತು ಸಂಗೀತಕ್ಕೆ ತಮ್ಮ ಜೀವನ ಸಮರ್ಪಿಸಿಕೊಂಡಿರುವ ಅವರು, ಗ್ರಾಮೀಣ ಪ್ರದೇಶದಲ್ಲಿ ತಮ್ಮ ಕಲಾ ಚಟುವಟಿಕೆ ವಿಸ್ತರಿಸುತ್ತಿದ್ದಾರೆ.ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಕಲಾವಿದ ರಾಮಕೃಷ್ಣ ಗೌರಿಬಿದನೂರಿನ ವೀರಂಡಹಳ್ಳಿಯಲ್ಲಿ ವಾಸವಿದ್ದಾರೆ. ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿಯೇ ಉಳಿದು  ಬಿ.ಎ., ಪದವಿವರೆಗೆ ವ್ಯಾಸಂಗ ಮಾಡಿದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಂಗೀತ, ಗಾಯನದ ಕಡೆ ಒಲವು ಹೆಚ್ಚಿಸಿಕೊಂಡರು.2004ರಲ್ಲಿ ರಾಜ್ಯ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕಲಾ ಜಾಥಾದಲ್ಲಿ ಪಾಲ್ಗೊಂಡು  ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ಕಡೆ ಪ್ರವಾಸ ಕೈಗೊಂಡರು. ಬೀದಿ ನಾಟಕ, ಗಾಯನ ಮತ್ತು ಸಂಗೀತದ ಮೂಲಕ ಜಾಗತೀಕರಣ, ಭಯೋತ್ಪಾದನೆ, ರೈತರ ಆತ್ಮಹತ್ಯೆ ಬಗ್ಗೆ ಜಾಗೃತಿ ಮೂಡಿಸಿದರು.2006ರಲ್ಲಿ  ದೆಹಲಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ವಿಶ್ವ ಸಾಮಾಜಿಕ ವೇದಿಕೆ ಕಾರ್ಯಕ್ರಮದಲ್ಲೂ ಪಾಲ್ಗೊಂಡು ತಮ್ಮ ಕಲಾ ಚಟುವಟಿಕೆ ನಡೆಸಿಕೊಟ್ಟಿದ್ದಾರೆ. ಸಂಗೀತ, ಗಾಯನ ಮಾತ್ರವಲ್ಲದೆ ಪೌರಾಣಿಕ, ಸಾಮಾಜಿಕ ನಾಟಕಗಳಾದ ಕುರುಕ್ಷೇತ್ರ, ಮಾರನಾಯಕ, ಮಹಾತ್ಯಾಗಿ, ಕೈವಾರ ತಾತಯ್ಯ ಮುಂತಾದ ಬೀದಿ ನಾಟಕಗಳಲ್ಲೂ ಅಭಿನಯಿಸಿದ್ದಾರೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಯುವಜನ ಸೇವಾ ಇಲಾಖೆಯು ರಾಮಕೃಷ್ಣ ಅವರಿಗೆ 2009ರಲ್ಲಿ ಯುವ  ಪ್ರಶಸ್ತಿ ಮತ್ತು 2012ರಲ್ಲಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ಸಂಘ-ಸಂಸ್ಥೆಗಳಿಂದಲೂ ಅವರಿಗೆ ಪ್ರಶಸ್ತಿಗಳು ಲಭಿಸಿವೆ.`ಕಲಾ ಚಟುವಟಿಕೆಯಲ್ಲೇ ಜೀವನ ಮುಂದುವರಿಸಬೇಕು ಎಂಬ ಉದ್ದೇಶ ನನ್ನದು. ಕಷ್ಟದಲ್ಲೇ ಜೀವನ ನಡೆಸುತ್ತಿದ್ದೇನೆ. ವಿದುರಾಶ್ವತ್ಥದ ವೀರಸೌಧದಲ್ಲಿ ಸದ್ಯಕ್ಕೆ ತಾತ್ಕಾಲಿಕ ಕೆಲಸ ಸಿಕ್ಕಿದೆ. ವೀರಸೌಧದ ಸ್ಥಿರ  ಚಿತ್ರ ಗ್ಯಾಲರಿ ನೋಡಿಕೊಳ್ಳುವುದು ಮತ್ತು ಪ್ರವಾಸಿಗರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತೇನೆ. ಗ್ರಾಮೀಣ ಕಲೆಯನ್ನು ಬೆಳೆಸುವ ಮತ್ತು ಮಕ್ಕಳಿಗೆ ಕಲಿಸುವ ಆಸೆ ನನ್ನದು~ ಎಂದು ರಾಮಕೃಷ್ಣ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry