ಡ್ರಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್

7
ಜಸ್ವೀರ್ ಛಲದ ಆಟ; ಸೋಲು ತಪ್ಪಿಸಿಕೊಂಡ ಆತಿಥೇಯರು

ಡ್ರಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್

Published:
Updated:
ಡ್ರಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್

ಜೈಪುರ: ಪಂದ್ಯದ ಕೊನೆಯ ಕ್ಷಣದವರೆಗೂ ಛಲದ ಹೋರಾಟ ಮಾಡಿದ ಆತಿಥೇಯ ತಂಡದ ನಾಯಕ ಜಸ್ವೀರ್ ಸಿಂಗ್ ತಮ್ಮ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.  ಇದರ ಫಲವಾಗಿ   ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಮತ್ತು  ಬೆಂಗಳೂರು ಬುಲ್ಸ್ ನಡುವಣ ಪಂದ್ಯವು 28–28 ರಿಂದ ರೋಚಕ ಡ್ರಾ ಕಂಡಿತು.  ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಒಟ್ಟು  ಒಂಬತ್ತು ಅಂಕ ಗಳಿಸಿದ ಜಸ್ವೀರ್ ಸಿಂಗ್ ಬುಲ್ಸ್ ತಂಡದ ಕೈಗಳಿಂದ ಗೆಲುವನ್ನು ಕಸಿದುಕೊಂಡರು.ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡದ ಹೊಸ ಪ್ರತಿಭೆ ವಿನೋದ್ ಕುಮಾರ್ (5 ಪಾಯಿಂಟ್ಸ್) ಮತ್ತು ರೋಹಿತ್ ಕುಮಾರ್ (6 ಪಾಯಿಂಟ್ಸ್) ಅವರ ಉತ್ತಮ ಆಟವು ವ್ಯರ್ಥವಾಯಿತು.   ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸುವ ಬುಲ್ಸ್‌ ತಂಡದ (ಮುಂಬೈನಲ್ಲಿ ನಡೆದಿದ್ದ  ಪಂದ್ಯದಲ್ಲಿ ಬುಲ್ಸ್ ತಂಡವು ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತ್ತು) ಕನಸಿಗೆ ಜಸ್ವೀರ್ ಅಡ್ಡಿಯಾದರು.ಪಂದ್ಯದ 25ನೇ ನಿಮಿಷದಲ್ಲಿ ಆಲೌಟ್ ಆಗಿದ್ದ ಪಿಂಕ್ ಪ್ಯಾಂಥರ್ಸ್ ತಂಡವು 12–23ರ ಭಾರಿ ಹಿನ್ನಡೆ ಅನುಭವಿಸಿತ್ತು. ಆದರೆ ನಂತರದ ಹದಿನೈದು ನಿಮಿಷಗಳಲ್ಲಿ ಆಟದ ಚಿತ್ರಣವೇ ಬದಲಾಯಿತು.ಈ ಅವಧಿಯಲ್ಲಿ ಜಸ್ವೀರ್ ಬಳಗವು ಗಳಿಸಿದ್ದು 16 ಅಂಕಗಳನ್ನು. ಅದೇ ಬೆಂಗಳೂರು ತಂಡವು ಕೇವಲ ಐದು ಅಂಕಗಳನ್ನು ಮಾತ್ರ. ಜಸ್ವೀರ್ ಸಿಂಗ್ ಅವರ ಚುರುಕಾದ ದಾಳಿಯಿಂದಾಗಿ ಬುಲ್ಸ್ 32ನೇ ನಿಮಿಷದಲ್ಲಿ ಆಲೌಟ್ ಆಯಿತು.  ದಾಳಿಗೆ ಹೋದ ಪವನ್‌ಕುಮಾರ್ ಅವರನ್ನು ಕಟ್ಟಿಹಾಕಿದ ಪ್ಯಾಂಥರ್ಸ್ ತಂಡದ ಸ್ಕೋರ್ 21ಕ್ಕೆ ಏರಿತು. ಆದರೆ, ಪವನ್ ಒಂದು ಬೋನಸ್‌ ಪಾಯಿಂಟ್ ಪಡೆದಿದ್ದರು. ಅದರ ಜೊತೆಗೆ ಒಂದು ತಾಂತ್ರಿಕ ಅಂಕ ಲಭಿಸಿದ್ದರಿಂದ ಬುಲ್ಸ್ ಅಂಕಗಳಿಕೆಯೂ 25ಕ್ಕೆ ಏರಿಕೆ ಕಂಡಿತು. ಮೋಹಿತ್ ಚಿಲ್ಲಾರ್ ಅವರ ಅಮೋಘ ರಕ್ಷಣಾ ಆಟದಿಂದ ಮತ್ತೆರಡು ಅಂಕಗಳು ಬುಲ್ಸ್ ಖಾತೆ ಸೇರಿದವು. ಆದರೂ ಛಲ ಬಿಡದ ಜಸ್ವೀರ್ ಬಳಗವು ಎರಡು ರೈಡಿಂಗ್ ಪಾಯಿಂಟ್ ಎರಡು ಟ್ಯಾಕ್ಲಿಂಗ್ ಮತ್ತು ಒಂದು ಬೋನಸ್ ಅಂಕ ಗಳಿಸಿತು.ಇದೆಲ್ಲದರ ಹೊರತಾಗಿಯೂ ಬುಲ್ಸ್ ತಂಡವು ಕೊನೆಯ ನಿಮಿಷದಲ್ಲಿ   28–26ರಿಂದ ಮುಂದಿತ್ತು. ಆಗ ದಾಳಿಗೆ ಬಂದ ಜಸ್ವೀರ್ ಒಂದು ಪಾಯಿಂಟ್‌ ಗಳಿಸಿ ಬುಲ್ಸ್‌ ಬಳಗಕ್ಕೆ ಸೆಡ್ಡು ಹೊಡೆದರು.  ಆದರೆ ಪಂದ್ಯ ಮುಗಿಯಲು ಐದು ಸೆಕೆಂಡುಗಳು ಬಾಕಿ ಇದ್ದಾಗ  ದಾಳಿಗೆ ಹೋದ ರೋಹಿತ್ ಕುಮಾರ್ ಅವರ ಕಾಲುಗಳಿಗೆ ಅಮಿತ್ ಹೂಡಾ ತೊಡರುಗೈ ಹಾಕಿದರು.  ಉಳಿದ ಆಟಗಾರರು ರೋಹಿತ್ ಕೊಸರಾಟಕ್ಕೆ ಕಡಿವಾಣ ಹಾಕಿದರು. ಇದರೊಂದಿಗೆ ಬುಲ್ಸ್‌ ತಂಡದ ಆಟಗಾರರು ನಿರಾಸೆಯಿಂದ ತಲೆ ಮೇಲೆ ಕೈಹೊತ್ತು ನಿಂತರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಗುಲಾಬಿ ವರ್ಣದ ಧ್ವಜಗಳು ಸಡಗರದಿಂದ ಹಾರಾಡಿದವು. ಆತಿಥೇಯ ಫ್ರಾಂಚೈಸ್ ಮಾಲೀಕ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮುಖದಲ್ಲಿ ಮಂದಹಾಸ ಮರಳಿತು. ಮುಂಬೈನಲ್ಲಿ ಆಡಿದ್ದ ಮೊದಲ ಪಂದ್ಯದಲ್ಲಿ ಸೋತಿದ್ದ ಪ್ಯಾಂಥರ್ಸ್, ಬುಧವಾರ ತವರಿನ ಅಂಗಳದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಗೆದ್ದಿತ್ತು. ಬುಲ್ಸ್ ಎದುರು ಡ್ರಾ ಮಾಡಿಕೊಂಡಿತು. ಒಟ್ಟು ಮೂರು ಪಂದ್ಯಗಳಿಂದ 9 ಅಂಕಗಳನ್ನು ಗಳಿಸಿರುವ ಪ್ಯಾಂಥರ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಮೊದಲ ಋತುವಿನಲ್ಲಿ ಪ್ಯಾಂಥರ್ಸ್ ಚಾಂಪಿಯನ್ ಆಗಿತ್ತು.ಮಿಂಚಿದ ಅಭಿಲಾಷಾ: ಐಸ್‌ ದಿವಾಸ್‌ಗೆ ಜಯ

ಅಭಿಲಾಷಾ ಮಾತ್ರೆ ನಾಯಕತ್ವದ ಐಸ್ ದಿವಾಸ್ ತಂಡವು ಇದೇ ಮೊದಲ ಬಾರಿಗೆ ನಡೆಯುತ್ತಿರುವ ವನಿತೆಯರ ಕಬಡ್ಡಿ ಚಾಲೆಂಜರ್ಸ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಗೆದ್ದಿತು.

ಜೈಪುರ ಕಬಡ್ಡಿ ಪ್ರೇಮಿಗಳ ಅಬ್ಬರದ ಪ್ರೋತ್ಸಾಹದ ನಡುವೆ ನಡೆದ ಪಂದ್ಯದಲ್ಲಿ ಮಿಂಚಿದ ಐಸ್ ದಿವಾಸ್ ಬಳಗವು 28–15ರಿಂದ ಅನುಭವಿ ಆಟಗಾರ್ತಿ ತೇಜಸ್ವಿನಿ ಬಾಯಿ ನಾಯಕತ್ವದ ಸ್ಟಾರ್ಮ್‌ ಕ್ವೀನ್ಸ್‌ ಎದುರು ಗೆದ್ದಿತು.ಮುಂಬೈನಲ್ಲಿ ಮಮತಾ ಪೂಜಾರಿ ನಾಯಕತ್ವದ ಫೈರ್‌ಬರ್ಡ್ಸ್‌ ತಂಡದ ಎದುರು ಸೋತಿದ್ದ ಐಸ್ ದಿವಾಸ್ ಇಂದಿನ ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿತು. ಚುರುಕಾದ ದಾಳಿ ನಡೆಸಿದ ನಾಯಕಿ ಅಭಿಲಾಷಾ  ಒಟ್ಟು ಒಂಬತ್ತು ಅದರಲ್ಲಿ ನಾಲ್ಕು ಟ್ಯಾಕ್ಲಿಂಗ್ ಮತ್ತು ಐದು ರೈಡಿಂಗ್ ಪಾಯಿಂಟ್‌ಗಳು ಸೇರಿದ್ದವು.  ಅಂಕಗಳನ್ನು ಗಳಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ   ಸೋನಾಲಿ ಶಿಂಗಟೆ ಕೂಡ ಮೂರು  ಅಂಕ ಗಳಿಸಿದರು. ಮಿನಾಲ್ ಜಾಧವ್ ಮತ್ತು ಮೋನು ಟ್ಯಾಕ್ಲಿಂಗ್‌ನಲ್ಲಿ ಮಿಂಚಿದರು.ಪಂದ್ಯದಲ್ಲಿ ಆರಂಭದಿಂದಲೇ ಶಿಸ್ತಿನ ಆಟವಾಡಿದ ದಿವಾಸ್ ಬಳಗವನ್ನು ಕಟ್ಟಿಹಾಕಲು ತೇಜಸ್ವಿನಿಯವರ ತಂಡಕ್ಕೆ ಸಾಧ್ಯವಾಗಲಿಲ್ಲ. ಸ್ವತಃ ತೇಜಸ್ವಿನಯವರು ಕೂಡ ಪಾಯಿಂಟ್ ಗಳಿಸುವಲ್ಲಿ ಹಿನ್ನಡೆ ಅನುಭವಿಸಿದರು. ಬದಲೀ ಆಟಗಾರ್ತಿ ಜ್್ಯೋತಿ ಐದು ಅಂಕ ಗಳಿಸಿದರು. ಸೋನಾಲಿ ಇಂಗಳೆ ಮತ್ತು ಮೋತಿ ಚಂದನ ಟ್ಯಾಕ್ಲಿಂಗ್‌ನಲ್ಲಿ ಮಿಂಚಿದರು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಲಿಲ್ಲ.

ಇಂದಿನ ಪಂದ್ಯಗಳು

ಯು ಮುಂಬಾ ವಿರುದ್ಧ ದಬಂಗ್ ಡೆಲ್ಲಿ (ರಾತ್ರಿ 8)

ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್

(ರಾತ್ರಿ 9)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry