ಡ್ರಾ ಪಂದ್ಯದಲ್ಲಿ ವಿದಿತ್‌

7

ಡ್ರಾ ಪಂದ್ಯದಲ್ಲಿ ವಿದಿತ್‌

Published:
Updated:

ಕೊಜಾಯೆಲಿ, ಟರ್ಕಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌­ಷಿಪ್‌ನಲ್ಲಿ ಚೀನಾದ ಬಾಯ್‌ ಜಿನ್ಶಿ ಎದುರು ಡ್ರಾ ಸಾಧಿಸುವಲ್ಲಿ ಯಶಸ್ವಿ­ಯಾಗಿದ್ದಾರೆ. ಆದರೆ ಸಹಜ್‌ ಗ್ರೋವರ್‌ ಆಘಾತಕ್ಕೆ ಒಳಗಾದರು.ಮೂರನೇ ಸುತ್ತಿನ ಈ ಪಂದ್ಯದಲ್ಲಿ ವಿದಿತ್‌ ಅವರಿಗೆ ಉತ್ತಮ ಆರಂಭ­ವೇನೂ ಸಿಗಲಿಲ್ಲ. ಅವರು ‘ಇಂಗ್ಲಿಷ್‌ ಓಪನಿಂಗ್‌’ ಮಾದರಿಯ ಆಟಕ್ಕೆ ಮುಂದಾದರು. ಆದರೆ ಪಂದ್ಯ ಮುಂದು­ವ­ರಿ­-ದಂತೆ ನಿಯಂತ್ರಣ ಸಾಧಿಸುವಲ್ಲಿ ವಿದಿತ್‌ ಯಶಸ್ವಿಯಾದರು. ಈ ಮೂಲಕ ಅವರು ಅಪಾಯದಿಂದ ಪಾರಾದರು. 38ನೇ ನಡೆಯ ಬಳಿಕ ಉಭಯ ಆಟಗಾರರು ಡ್ರಾಗೆ ಸಮ್ಮತಿ ಸೂಚಿಸಿದರು. ಹಾಗಾಗಿ ತಲಾ ಅರ್ಧ ಪಾಯಿಂಟ್‌ ಲಬಿಸಿತು. ವಿದಿತ್‌ ಬಳಿ ಈಗ ಎರಡೂವರೆ ಪಾಯಿಂಟ್‌ಗಳಿವೆ.ಗ್ರ್ಯಾಂಡ್‌ಮಾಸ್ಟರ್‌ ಸಹಜ್‌ ಹಾಲಿ ಚಾಂಪಿಯನ್‌ ಟರ್ಕಿಯ ಅಲೆಕ್ಸಾಂಡರ್‌ ಇಪಾಟೊವ್‌ ಎದುರು ಸೋಲು ಕಂಡರು. ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದ ದೆಹಲಿ ಮೂಲದ ಈ ಆಟಗಾರ ಸೋಮವಾರ ಆರಂಭದಲ್ಲಿಯೇ ತಪ್ಪೆಸಗಿದರು. ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಅಲೆಕ್ಸಾಂಡರ್‌ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಮೇಲೆ ಒತ್ತಡ ಹೇರಿದರು. ಸಹಜ್‌ ಈ ಪಂದ್ಯವನ್ನು ಕಪ್ಪು ಕಾಯಿಗಳಿಂದ ಆಡಿದರು.ಭಾರತದ ಮತ್ತೊಬ್ಬ ಗ್ರ್ಯಾಂಡ್‌­ಮಾಸ್ಟರ್‌ ಎಸ್‌.ಪಿ.ಸೇತುರಾಮ್‌ ಮೂರನೇ ಸುತ್ತಿನ ಪಂದ್ಯದಲ್ಲಿ ಕಜಕಿಸ್ತಾ­ನದ ಅಯಾನ್‌ ಅಖ್‌ಮೆಟೊವ್‌ ಎದುರು ಗೆಲುವು ಸಾಧಿಸಿದರು. ಈ ಮೂಲಕ ಅವರಿಗೆ ಒಂದು ಪಾಯಿಂಟ್‌ ಲಭಿಸಿತು.ಈ ಟೂರ್ನಿಯಲ್ಲಿ ಇನ್ನೂ 10 ಸುತ್ತುಗಳ ಆಟ ಬಾಕಿ ಇದೆ. ಚೀನಾದ ಯು ಯಾಂಗಿಯಿ, ಯುಎಇನ ಎ.ಆರ್‌.ಸಲೇಮ್‌, ಪೋಲೆಂಡ್‌ನ ಡುದಾ ಜನ್‌–ಕ್ರಿಸ್ಟೊಫ್‌ ತಲಾ ಮೂರು ಪಾಯಿಂಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.ಬಾಲಕಿಯರ ವಿಭಾಗದಲ್ಲಿ ಭಾರತದ ಜಿ.ಕೆ.ಮೋನಿಷಾ ಮೂರನೇ ಸುತ್ತಿನ ಪಂದ್ಯದಲ್ಲಿ ಇರಾನ್‌ನ ಮಿತ್ರಾ ಹೆಜಾಜಿಪೌರ್‌ ಎದುರು ಗೆಲುವು ಸಾಧಿಸಿದರು. ಅವರ ಬಳಿ ಈಗ ಒಟ್ಟು ಎರಡೂವರೆ ಪಾಯಿಂಟ್‌ಗಳಿವೆ. ಪದ್ಮಿನಿ ರಾವತ್‌ ಫಿಲಿಪ್ಪಿನ್ಸ್‌ನ ಫ್ರಾಂಡಾ ಜಾನ್‌ ಜೋಡಿಲಿನ್‌ ಎದುರೂ, ಇವಾನಾ ಮರಿಯಾ ಫರ್ಟಾಡೊ ಇಟಲಿಯ ಲೌರಾ ಗುಯೆಸಿ ವಿರುದ್ಧವೂ,    ಅಂಜನಾ ಕೃಷ್ಣ ಟರ್ಕಿಯ ನೂರ್ಗುನೆ ಗಾಮ್ಜೆ ಮೇಲೂ ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry