ಶನಿವಾರ, ಆಗಸ್ಟ್ 17, 2019
27 °C
ಕ್ರಿಕೆಟ್: ಭಾರತದ ಬೌಲರ್‌ಗಳ ನೀರಸ ಪ್ರದರ್ಶನ

ಡ್ರಾ ಸಾಧಿಸಿದ ಶ್ರೀಲಂಕಾ ತಂಡ

Published:
Updated:

ಕುರುನೆಗಾಲಾ, ಶ್ರೀಲಂಕಾ (ಪಿಟಿಐ): ಬೌಲರ್‌ಗಳ ನೀರಸ ಪ್ರದರ್ಶನದ ಕಾರಣ ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡದವರು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವಿನ ಉತ್ತಮ ಅವಕಾಶ ಕಳೆದುಕೊಂಡರು. ಸೋಲಿನ ಭೀತಿ ಎದುರಿಸಿದ್ದ ಲಂಕಾ ತಂಡ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.ವೆಲಗೆಡರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನ ಅಮೋಘ ಶತಕ ಗಳಿಸಿದ ಬಿನುಕ ಫೆರ್ನಾಂಡೊ (ಅಜೇಯ 100) ಮತ್ತು ಎ.ಜೆ. ಟೈರೊನ್ (123) ಭಾರತದ ಜಯದ ಕನಸಿಗೆ ಅಡ್ಡಿಯಾದರು. ಆತಿಥೆಯ ತಂಡ ಐದು ವಿಕೆಟ್‌ಗೆ 245 ರನ್‌ಗಳಿಂದ ಗುರುವಾರ ಆಟ ಆರಂಭಿಸಿತ್ತು. ಮೂರನೇ ದಿನ ಅಜೇಯರಾಗುಳಿದಿದ್ದ ಸದೀರ ಸಮರವಿಕ್ರಮ (63) ಮತ್ತು ಪ್ರಿಯಾಮಳ್ ಪೆರೇರಾ (41) ಬೇಗನೇ ಔಟಾದರು. ಏಳು ವಿಕೆಟ್‌ಗಳು ಬಿದ್ದಾಗ ಲಂಕಾ ತಂಡ ಕೇವಲ 77 ರನ್‌ಗಳ ಮುನ್ನಡೆಯಲ್ಲಿತ್ತು. ವಿಜಯ್ ಜೋಲ್ ನೇತೃತ್ವದ ಭಾರತ ತಂಡ ಈ ಹಂತದಲ್ಲಿ ಗೆಲುವು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿತ್ತು.ಆದರೆ ಎಂಟು ಹಾಗೂ ಒಂಬತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಬಿನುಕ ಮತ್ತು ಟೈರೊನ್ 188 ರನ್‌ಗಳ ಜೊತೆಯಾಟ ನೀಡಿ ಪ್ರವಾಸಿ ತಂಡದ ಗೆಲುವಿನ ಎಲ್ಲ ಸಾಧ್ಯತೆಗಳನ್ನು ದೂರ ಮಾಡಿದರು. ಬಿನುಕ ತಾಳ್ಮೆಯ ಆಟವಾಡಿದರೆ, ಟೈರೊನ್ ಆಕ್ರಮಣಕಾರಿ ಪ್ರದರ್ಶನ ನೀಡಿದರು. 123 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.ಗೆಲುವಿಗೆ 27 ಓವರ್‌ಗಳಲ್ಲಿ 319 ರನ್ ಗಳಿಸುವ ಗುರಿ ಭಾರತಕ್ಕೆ ಲಭಿಸಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಜೋಲ್ ಬಳಗ ತನ್ನ ಎರಡನೇ ಇನಿಂಗ್ಸ್‌ನಲ್ಲಿ  27 ಓವರ್‌ಗಳಲ್ಲಿ 3 ವಿಕೆಟ್‌ಗೆ 113 ರನ್ ಗಳಿಸಿತ್ತು. ಸರಣಿಯ ಮೊದಲ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿತ್ತು.ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: ಮೊದಲ ಇನಿಂಗ್ಸ್ 212 ಹಾಗೂ ಎರಡನೇ ಇನಿಂಗ್ಸ್ 175.5 ಓವರ್‌ಗಳಲ್ಲಿ 499 (ಸದೀರ ಸಮರವಿಕ್ರಮ 63, ಪ್ರಿಯಾಮಳ್ ಪೆರೇರಾ 41, ಬಿನುರ ಫೆರ್ನಾಂಡೊ ಔಟಾಗದೆ 100, ಎ.ಕೆ. ಟೈರೊನ್ 123, ಚಾಮಾ ಮಿಲಿಂದ್ 98ಕ್ಕೆ 4, ಕುಲದೀಪ್ ಯಾದವ್ 132ಕ್ಕೆ 2) ಭಾರತ: ಮೊದಲ ಇನಿಂಗ್ಸ್ 101 ಓವರ್‌ಗಳಲ್ಲಿ 8 ವಿಕೆಟ್‌ಗೆ 393 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 27 ಓವರ್‌ಗಳಲ್ಲಿ 3 ವಿಕೆಟ್‌ಗೆ 113 (ಅಖಿಲ್ ಹೆರ್ವಾಡ್ಕರ್ 32, ಶ್ರೇಯಸ್ ಅಯ್ಯರ್ ಔಟಾಗದೆ 26, ಸಂಜು ಸ್ಯಾಮ್ಸನ್ ಔಟಾಗದೆ 23, ಪ್ರಿಯಾಮಳ್ ಪೆರೇರಾ 28ಕ್ಕೆ 2)

ಫಲಿತಾಂಶ: ಪಂದ್ಯ ಡ್ರಾ ಹಾಗೂ ಎರಡು ಪಂದ್ಯಗಳ ಸರಣಿ 0-0 ರಲ್ಲಿ ಸಮಬಲ

Post Comments (+)