ಶುಕ್ರವಾರ, ನವೆಂಬರ್ 22, 2019
23 °C

ಢಾಕಾ : ಅವಶೇಷಗಳಡಿ ಇನ್ನೂ 1500 ಜನ

Published:
Updated:

ಢಾಕಾ (ಪಿಟಿಐ/ಐಎಎನ್ಎಸ್): ಢಾಕಾದಲ್ಲಿ ಬುಧವಾರ ಕುಸಿದುಬಿದ್ದ ಬಹುಮಹಡಿ ಕಟ್ಟಡ ಸಂಕೀರ್ಣದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 191 ನ್ನು ತಲುಪಿದ್ದು, ಇನ್ನೂ ಒಂದುವರೆ ಸಾವಿರ ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಸರ್ಕಾರ 'ರಾಷ್ಟ್ರೀಯ ಶೋಕಾಚರಣೆ'  ಘೋಷಿಸಿದೆ.ಇಲ್ಲಿನ ಸವರ್ ಪ್ರದೇಶದಲ್ಲಿರುವ 8 ಅಂತಸ್ತುಗಳ ಬೃಹತ್ ವಾಣಿಜ್ಯ ಸಂಕೀರ್ಣದಲ್ಲಿ 300ಕ್ಕೂ ಹೆಚ್ಚು ಅಂಗಡಿಗಳು, ಬ್ಯಾಂಕ್ ಕಚೇರಿಗಳು, ಸಿದ್ದ ಉಡುಪು ಕಾರ್ಖಾನೆಗಳೂ ಇದ್ದವು. ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಮಂದಿ ಘಟನೆ ಸಂಭವಿಸಿ 24 ಗಂಟೆ ಕಳೆದರೂ ಹೊರಬರಲಾಗದೆ ಸಾವು ಬದುಕಿನ ನಡುವೆ ಸೆಣಸುತ್ತಿದ್ದಾರೆ.ಸ್ಥಳಿಯ ಪ್ರೌಢಶಾಲೆಯ ಮೈದಾನದಲ್ಲಿ ನೂರಾರು ಮೃತದೇಹಗಳನ್ನು ಇಡಲಾಗಿದ್ದು, ಸಂಬಂಧಿಕರ ಆರ್ತನಾದ ಮನಕಲಕುವಂತಿದೆ.ಘಟನೆಯಿಂದ ದಿಗ್ಭ್ರಾಂತಗೊಂಡಿರುವ ಬಾಂಗ್ಲಾ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಶೋಕಾಚರಣಾ ದಿನವನ್ನಾಗಿ ಕರೆಕೊಟ್ಟಿದ್ದು, ಎಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದೆ.ಈ ಮಧ್ಯೆ ಅಗ್ನಿಶಾಮಕಪಡೆ ಹಾಗೂ ಪೊಲೀಸರೊಂದಿಗೆ ಸೇನೆ, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಗಳೂ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದು, ಬದುಕುಳಿದವರ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.2 ದಿನಕ್ಕೂ ಮುಂಚೆಯೇ ಈ ನತದೃಷ್ಟ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದನ್ನು ಉದಾಸೀನ ಮಾಡಿದ್ದು ಹಾಗೂ ರಕ್ಷಣಾ ನಿಯಮಗಳನ್ನು ಗಾಳಿಗೆ ತೂರಿದ್ದು ಈ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ಇದೇ ರೀತಿಯ ಬಿರುಕುಗಳು ಢಾಕಾದ ಮೂರು ಬಹುಮಹಡಿ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದು, ಜನರು ಭಯಭೀತಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಅವುಗಳಿಂದಲೂ ಜನರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.ಸಂಪೂರ್ಣ ಬಾಂಗ್ಲಾದೇಶದಲ್ಲಿ ಶೋಕ ಮಡುಗಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಪ್ರತಿಕ್ರಿಯಿಸಿ (+)