ಗುರುವಾರ , ನವೆಂಬರ್ 21, 2019
20 °C

ಢಾಕಾ ಕಟ್ಟಡ ಕುಸಿತ: 290ಕ್ಕೇರಿದ ಸಾವಿನ ಸಂಖ್ಯೆ

Published:
Updated:

ಸವರ್ (ಪಿಟಿಐ) : ಬಾಂಗ್ಲಾದೇಶದ ಢಾಕಾದಲ್ಲಿ ಸಂಭವಿಸಿದ  ಬಹುಮಹಡಿ ವಾಣಿಜ್ಯ ಸಮುಚ್ಚಯ ಕುಸಿತದಿಂದ ಮೃತಪಟ್ಟವರ ಸಂಖ್ಯೆ ಶುಕ್ರವಾರ 290ನ್ನು  ಮುಟ್ಟಿದ್ದು, 2 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.ಟನ್‌ಗಟ್ಟಲೆ ರಾಶಿ ಬಿದ್ದಿರುವ ಅವಶೇಷಗಳಡಿಯಿಂದ 290 ಮೃತದೇಹಗಳನ್ನು ಹೊರತೆಗೆದಿದ್ದರೆ 2100 ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇನ್ನೂ ಹಲವು ಮಂದಿ ಕುಸಿದ ಕಟ್ಟಡದೊಳಗೆ ಸಿಲುಕಿರುವ ಸಾಧ್ಯತೆ ಇದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.ಈ ಪ್ರದೇಶದಲ್ಲಿ ಮೊಬೈಲ್ ಫೋನ್ ಸಂಪರ್ಕವನ್ನು ಕಡಿದು ಹಾಕಿದ್ದರಿಂದ ರೊಚ್ಚಿಗೆದ್ದ ಸಂತ್ರಸ್ಥರು ಪ್ರತಿಭಟನೆ ನಡೆಸಿದರು. ಅವಶೇಷಗಳಡಿ ಸಿಲುಕಿರುವವರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಅವರನ್ನು ಪತ್ತೆ ಮಾಡಿ ರಕ್ಷಿಸಲು ತಮಗೆ ಮೊಬೈಲ್ ಸಂಪರ್ಕ ಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸತೊಡಗಿದರು.ಅಲ್ಲದೆ ಕಟ್ಟಡ ತೆರವಿಗೆ ಭಾರಿ ಯಂತ್ರಗಳನ್ನು ಉಪಯೋಗಿಸಲು ನಿರ್ಧರಿಸಿದ್ದರಿಂದ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಇದರಿಂದ ತೊಂದರೆಯಾಗುವುದೆಂದು ಆರೋಪಿಸಿ ಸ್ಥಳದಲ್ಲಿದ್ದ ಜನ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಪೊಲೀಸರು ಅವರತ್ತ ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದರು.ದೇಶಾದ್ಯಂತ ಸಿದ್ಧಉಡುಪು ಕಾರ್ಖಾನೆಗಳ ನೌಕರರು ತಮಗೆ ಸೂಕ್ತ ರಕ್ಷಣೆ ಬೇಕೆಂದು ಆಗ್ರಹಿಸಿ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ವ್ಯಕ್ತಪಡಿಸಿದರು. ಕುಸಿದ ಕಟ್ಟಡದಲ್ಲಿ ಮೃತರಾದ ಸಿದ್ಧಉಡುಪು ನೌಕರರಿಗೆ ಗೌರವ ತೋರಿಸದೆ ಕಾರ್ಯನಿರ್ವಹಿಸುತ್ತಿದ್ದ ಅನೇಕ ಸಿದ್ಧಉಡುಪು ಕಾರ್ಖಾನೆಗಳನ್ನು ಬಲವಂತದಿಂದ ಪ್ರತಿಭಟನಾಕಾರರು ಮುಚ್ಚಿಸಿದರು. ಕೆಲವೆಡೆ ಹಿಂಸಾಚಾರ ಸಂಭವಿಸಿದ ಬಗೆಗೆ ವರದಿಗಳು ಬಂದಿವೆ.

ಪ್ರತಿಕ್ರಿಯಿಸಿ (+)