ಢಾಕಾ: 20 ವಿದೇಶಿಯರ ಹತ್ಯೆ

7
ಐಎಸ್‌ ದಾಳಿ: ಅರೆಸೇನಾಪಡೆ ಕಾರ್ಯಾಚರಣೆಗೆ ಆರು ಉಗ್ರರ ಸಾವು

ಢಾಕಾ: 20 ವಿದೇಶಿಯರ ಹತ್ಯೆ

Published:
Updated:
ಢಾಕಾ: 20 ವಿದೇಶಿಯರ ಹತ್ಯೆ

ಢಾಕಾ (ಪಿಟಿಐ): ಇಲ್ಲಿನ ಹೋಲಿ ಆರ್ಟಿಸನ್ ಬೇಕರಿ ರೆಸ್ಟೋರೆಂಟ್‌ ಒಳಗೆ ಶುಕ್ರವಾರ ರಾತ್ರಿ ನುಗ್ಗಿದ್ದ ಐಎಸ್‌ ಉಗ್ರರು, ಭಾರತ ಮೂಲದ ಯುವತಿಯೊಬ್ಬಳು ಸೇರಿದಂತೆ 20 ವಿದೇಶಿಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಇದಕ್ಕೆ ಪ್ರತಿಯಾಗಿ ಕಮಾಂಡೊ ಪಡೆ  ನಡೆಸಿದ ಕಾರ್ಯಾಚರಣೆ ಶನಿವಾರ ಅಂತ್ಯಗೊಂಡಿದ್ದು, ಆರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರೆ,  ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ.ರಾಯಭಾರ ಕಚೇರಿಗಳಿರುವ ಅತಿಭದ್ರತೆಯ ಪ್ರದೇಶದಲ್ಲಿಯೇ ಈ ಘಟನೆ ನಡೆದಿದ್ದು, ಆತಂಕ ಮೂಡಿಸಿದೆ.ವಿದೇಶಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ರೆಸ್ಟೋರೆಂಟ್‌ಗೆ ನುಗ್ಗಿದ ಉಗ್ರರು 20 ಮಂದಿಯನ್ನು ಒತ್ತೆಯಿರಿಸಿಕೊಂಡಿದ್ದರು. ಸಶಸ್ತ್ರ ಪಡೆಗಳು ಜಂಟಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನವೇ ಒತ್ತೆಯಾಳುಗಳನ್ನು ಉಗ್ರರು ಕೊಂದು ಹಾಕಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವುದು ಕಂಡುಬಂದಿದೆ ಎಂದು ಸೇನಾ ಕಾರ್ಯಾಚರಣೆಗಳ ನಿರ್ದೇಶಕ ಬ್ರಿಗೇಡಿಯರ್ ಜನರಲ್‌ ನಯೀಮ್‌ ಅಶ್ಫಕ್‌ ಚೌಧುರಿ ತಿಳಿಸಿದ್ದಾರೆ.ಸೇನೆಯ ಅರೆ ಕಮಾಂಡೊ ಘಟಕದ ನೇತೃತ್ವದಲ್ಲಿ ನಡೆದ  ಕಾರ್ಯಾಚರಣೆಯಲ್ಲಿ 13 ನಿಮಿಷದಲ್ಲೇ ಆರು ಉಗ್ರರನ್ನು ಕೊಂದು ಹಾಕಲಾಯಿತು ಎಂದು ಅವರು ಹೇಳಿದ್ದಾರೆ.ಒತ್ತೆಯಾಳು ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸೇನೆ ಮಧ್ಯಪ್ರವೇಶಿಸುವಂತೆ ಪ್ರಧಾನಿ ಶೇಖ್ ಹಸೀನಾ ಅವರು ಆದೇಶಿಸಿದ ಬಳಿಕ ಬೆಳಗಿನ ಜಾವ ‘ಆಪರೇಷನ್‌ ಥಂಡರ್‌ಬೋಲ್ಟ್‌’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ಚಾಲನೆ ನೀಡಲಾಗಿತ್ತು.ಮೃತಪಟ್ಟ 20 ವಿದೇಶಿಯರಲ್ಲಿ ಹೆಚ್ಚಿನವರು ಇಟಲಿ ಮತ್ತು ಜಪಾನ್‌ನವರಾಗಿದ್ದಾರೆ. ಕಳೆದ ರಾತ್ರಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳು ಸಹ ಬಲಿಯಾಗಿದ್ದಾರೆ.ದಾಳಿಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ರಕ್ಷಣೆಗೊಳಗಾದವರಲ್ಲಿ ಭಾರತ, ಶ್ರೀಲಂಕಾ ಮತ್ತು ಜಪಾನ್‌ನ ಪ್ರಜೆಗಳು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಮೃತರಲ್ಲಿ ಭಾರತದ ಯುವತಿ

ನವದೆಹಲಿ:
ಬಾಂಗ್ಲಾದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ 20 ಜನರಲ್ಲಿ ಭಾರತದ 19 ವರ್ಷದ ಯುವತಿ ಸೇರಿದ್ದಾಳೆ.

ಅಮೆರಿಕದ ಕ್ಯಾಲಿಫೋರ್ನಿಯ ವಿವಿ  ವಿದ್ಯಾರ್ಥಿನಿಯಾಗಿರುವ ತರುಷಿ ಜೈನ್‌ ಉಗ್ರರ ದಾಳಿಗೆ ಬಲಿಯಾದ ಯುವತಿ. ಈಕೆ ರಜಾ ದಿನಗಳನ್ನು ಕಳೆಯಲು ಢಾಕಾಗೆ ತೆರಳಿದ್ದಳು. ಆಕೆಯ ತಂದೆ  ಉತ್ತರ ಪ್ರದೇಶದ ಫಿರೋಜಾಬಾದ್‌ ಮೂಲದವರಾಗಿದ್ದು, ಬಾಂಗ್ಲಾದಲ್ಲಿ 15–20  ವರ್ಷಗಳಿಂದ ಜವಳಿ ಉದ್ಯಮ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ಢಾಕಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒತ್ತೆಯಾಳಾಗಿದ್ದ ತರುಷಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂಬುದನ್ನು ಹೇಳಲು ತುಂಬಾ ದುಃಖವಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.‘ಆಕೆಯ ತಂದೆ ಸಂಜೀವ್ ಜೈನ್‌ ಅವರೊಂದಿಗೆ ನಾನು ಮಾತನಾಡಿದ್ದು, ಅವರಿಗೆ ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದೇನೆ. ಈ ದುಃಖದ ಗಳಿಗೆಯಲ್ಲಿ ಇಡೀ ದೇಶ ಅವರೊಂದಿಗಿದೆ’ ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.ಆ ಕುಟುಂಬದವರಿಗೆ ವೀಸಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸುಷ್ಮಾ ತಿಳಿಸಿದ್ದಾರೆ.ಪಾರಾದ ವೈದ್ಯ: ಭಾರತ ಮೂಲದ ವೈದ್ಯರೊಬ್ಬರು ಉಗ್ರರ ಕೈಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಬಂಗಾಳಿ ಭಾಷೆ ಮಾತನಾಡುವ ಅವರನ್ನು ಬಾಂಗ್ಲಾದೇಶದ ಪ್ರಜೆ ಎಂದುಕೊಂಡ ಉಗ್ರರು ಅವರನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.ಇದು ಅತ್ಯಂತ ಹೇಯ ಕೃತ್ಯ. ಇವರು ಯಾವ ರೀತಿಯ ಮುಸ್ಲಿಮರು? ಇವರಿಗೆ ಯಾವ ಧರ್ಮವೂ ಇಲ್ಲ

-ಶೇಖ್‌ ಹಸೀನಾ

ಬಾಂಗ್ಲಾದೇಶ ಪ್ರಧಾನಿ
ಮುಖ್ಯಾಂಶಗಳು

* ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದಲ್ಲಿ ನಡೆಯಬೇಕಿರುವ ಕ್ರಿಕೆಟ್‌  ಸರಣಿ ಅನುಮಾನ

* ಜೀವಂತ ಸೆರೆಸಿಕ್ಕ ಒಬ್ಬ ಉಗ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry