`ಢುಂಢಿ`ಗೆ ಬೆಂಬಲ ಎಷ್ಟು ಸರಿ?

7

`ಢುಂಢಿ`ಗೆ ಬೆಂಬಲ ಎಷ್ಟು ಸರಿ?

Published:
Updated:

ರಾಮನಗರ: `ಸಂಶೋಧನಾ ಕೃತಿಗಳ ಹೆಸರಿನಲ್ಲಿ ಸಮಾಜವನ್ನು ಹಾಳು ಮಾಡುವ ಹುನ್ನಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ' ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, `ಢುಂಢಿ ಕೃತಿ ರಚನೆ ಮಾಡುವಂತಹ ಲೇಖಕರಿಗೆ ಕೆಲ ಪ್ರಮುಖ ಸಾಹಿತಿಗಳು ಬೆಂಬಲ ಕೊಡುತ್ತಿರುವುದು ಸರಿಯಲ್ಲ' ಎಂದು ಹೇಳಿದರು.`ಕೆಲವು ಸಾಹಿತಿಗಳು ಜನರ ಮೇಲೆ  ತಮ್ಮ ಭಾವನೆಗಳನ್ನು ಈ ರೀತಿ ಹೇರಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಢುಂಢಿ ಲೇಖಕರಿಗೆ ಇದೇ ರೀತಿಯ ಸಂಶೋಧನೆಯನ್ನೇ ಮಾಡಬೇಕು ಎಂದು ಭಗವಂತ ಏನಾದರೂ ಕನಸಿನಲ್ಲಿ ಬಂದು ಹೇಳಿದ್ದನೇನೋ' ಎಂದು ಅವರು ಕುಟುಕಿದರು.ಜನರ ಭಾವನೆಗಳಿಗೆ ಧಕ್ಕೆಯಾಗುವ ಇಂತಹ ಸಂಶೋಧನೆಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, `ಸಂಶೋಧನಾ ಕೃತಿಗಳು ಜನ ಸಮುದಾಯದ ಭಾವನೆ ಮತ್ತು ಅಭಿರುಚಿಗಳನ್ನು ಕೆರಳಿಸುವಂತಿರಬಾರದು.ಸಮಾಜ ಅನುಸರಿಸುತ್ತಿರುವ ಕೆಲ ನಂಬಿಕೆಗಳನ್ನು ಅಪನಂಬಿಕೆ ಬರುವ ರೀತಿಯಲ್ಲಿ ಬರೆದರೆ ಹೇಗೆ? ಅಂತಹ ಕೃತಿಗಳು ಓದುಗರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ಇದು ಸಮಾಜವನ್ನು ಅನಾಗರಿಕತೆಯ ಕಡೆಗೆ ಕರೆದುಕೊಂಡು ಹೋಗುವುದಿಲ್ಲವೆ? ಇಂತಹ ಕಾದಂಬರಿ, ಸಂಶೋಧನೆಗಳ ಅಗತ್ಯ ಇದೆಯಾ' ಎಂದು ಖಾರವಾಗಿ ಕೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry