ತಂಡದಲ್ಲಿ ಬಿರುಕಿಲ್ಲ: ಬಿಸಿಸಿಐ ಸ್ಪಷ್ಟನೆ

7

ತಂಡದಲ್ಲಿ ಬಿರುಕಿಲ್ಲ: ಬಿಸಿಸಿಐ ಸ್ಪಷ್ಟನೆ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಳ್ಳಿ ಹಾಕಿದೆ.

ಹಿರಿಯ ಆಟಗಾರರಿಗೆ ಸರದಿ ಪ್ರಕಾರ ವಿಶ್ರಾಂತಿ ನೀಡಿ ಆಡಿಸುತ್ತಿರುವ ಬಗ್ಗೆ ನಾಯಕ ದೋನಿ ಹಾಗೂ ಉಪನಾಯಕ ವೀರೇಂದ್ರ ಸೆಹ್ವಾಗ್ ವಿಭಿನ್ನ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ವಿವಾದವನ್ನು ಶಮನಗೊಳಿಸಲು ಬಿಸಿಸಿಐ ಮುಂದಾಗಿದೆ.

`ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇಲ್ಲ. ನನ್ನ ಪ್ರಕಾರ ತಂಡದಲ್ಲಿ ಯಾವುದೇ ರೀತಿಯ ಒಡಕು ಇಲ್ಲ~ ಎಂದು ಬಿಸಿಸಿಐ ಅಧ್ಯಕ್ಷ  ಎನ್.ಶ್ರೀನಿವಾಸನ್ ನುಡಿದಿದ್ದಾರೆ.

`ಮಾಧ್ಯಮದವರು ಕೇಳುತ್ತಿರುವ ಪ್ರಶ್ನೆಗಳಿಗೆ ದೋನಿ ಹಾಗೂ ಸೆಹ್ವಾಗ್ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಅಷ್ಟೆ. ನಾನು ಈಗಾಗಲೇ ಭಾರತ ತಂಡದ ಮಾಧ್ಯಮ ಮ್ಯಾನೇಜರ್ ಜೊತೆ ಮಾತನಾಡಿದ್ದೇನೆ. ಇವೆಲ್ಲಾ ವರ್ಣರಂಜಿತ ಸುದ್ದಿ ಎಂದು ಅವರು ನನಗೆ ವಿವರಿಸಿದ್ದಾರೆ~ ಎಂದು ಶ್ರೀನಿವಾಸನ್ ಹೇಳಿದರು.

ಹಿರಿಯ ಆಟಗಾರರ ಉಪಸ್ಥಿತಿ ಫೀಲ್ಡಿಂಗ್ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೋನಿ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಸೆಹ್ವಾಗ್ ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, `ಸೆಹ್ವಾಗ್ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಸುಮ್ಮನೇ ಊಹಾಪೋಹದ ಸುದ್ದಿಯನ್ನು ಹಬ್ಬಿಸುತ್ತಿವೆ. ತಂಡದಲ್ಲಿ ಯಾವುದೇ ಸಮಸ್ಯೆ ಇಲ್ಲ~ ಎಂದರು.

ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ತಂಡ ರೊಟೇಷನ್ ನೀತಿಯನ್ನು ಅನುಸರಿಸುತ್ತಿದೆ. ಇದರ ಪ್ರಕಾರ ಪ್ರತಿ ಪಂದ್ಯಕ್ಕೆ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಈ ಕ್ರಮಕ್ಕೆ ಈಗ ಟೀಕೆ ವ್ಯಕ್ತವಾಗುತ್ತಿದೆ.

ಎದುರಾಳಿಯ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ದೋನಿ ಅನುಸರಿಸಿದ ಬ್ಯಾಟಿಂಗ್ ಶೈಲಿಯನ್ನು ಮೊದಲು ಗಂಭೀರ್ ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ `ಹಿರಿಯ ಆಟಗಾರರು ಕಳಪೆ ಫೀಲ್ಡಿಂಗ್ ಮೂಲಕ 20 ರನ್‌ಗಳನ್ನು ಎದುರಾಳಿಗೆ ಉಡುಗೊರೆ ನೀಡುತ್ತಾರೆ. ಹಾಗಾಗಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ~ ಎಂದು ದೋನಿ ಹೇಳಿದ್ದರು. ಆದರೆ `ಹಿರಿಯ ಆಟಗಾರರ ದುರ್ಬಲ ಫೀಲ್ಡಿಂಗ್ ರೊಟೇಷನ್ ನೀತಿ ಅನುಸರಿಸಲು ಕಾರಣ ಎಂದು ಸಭೆಯಲ್ಲಿ ಚರ್ಚೆಯೇ ಆಗಿಲ್ಲ~ ಎಂಬುದಾಗಿ ಸೆಹ್ವಾಗ್ ನುಡಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry