ತಂಡದ ಯಶಸ್ಸಿಗೆ ಅಳಿಲು ಸೇವೆ...!

7

ತಂಡದ ಯಶಸ್ಸಿಗೆ ಅಳಿಲು ಸೇವೆ...!

Published:
Updated:
ತಂಡದ ಯಶಸ್ಸಿಗೆ ಅಳಿಲು ಸೇವೆ...!

ಮುಂಬೈ: ಶ್ರೀರಾಮ ಲಂಕೆಗೆ ಸೇತುವೆ ಕಟ್ಟುವಾಗ ಅಳಿಲೊಂದು ತನ್ನ ಪಾಲಿನ ಕೊಡುಗೆ ನೀಡಿತ್ತು. ಅದು ರಾಮಾಯಣದ ಕಥೆ. ಆದರೆ ಇದು `ಕ್ರಿಕೆಟಾಯಣ~! ಇಲ್ಲಿ ಪ್ರತಿಯೊಬ್ಬ ಕ್ರಿಕೆಟಿಗನ ಯಶಸ್ಸಿಗೆ ಮಸಾಜ್ ಥೆರಪಿಸ್ಟ್ ನೆರವು ಅಗತ್ಯ.ಒಬ್ಬ ಆಟಗಾರ ದೈಹಿಕವಾಗಿ ಉಲ್ಲಸಿತನಾಗಿ ಇರುವಂತೆ ಮಾಡುವ ಗುರುತರ ಜವಾಬ್ದಾರಿ ಈ ಮಸಾಜರ್‌ಗಳದ್ದು. ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದ ಕ್ರಿಕೆಟಿಗರ ಮೈಕೈ ಸ್ನಾಯುಗಳು ಸಡಿಲಗೊಂಡು ನೋವು ಮರೆಯಾಗುವಂತೆ ಮಾಡುವವರೇ ಈ `ಸ್ಪರ್ಶಜ್ಞಾನಿ~ಗಳು.ಯಾವ ಆಟಗಾರನ ದೇಹದ ಯಾವ ಭಾಗದಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ ಎನ್ನುವುದನ್ನು ಖಚಿತವಾಗಿ ಗುರುತಿಸಿಕೊಂಡು ಅದಕ್ಕೆ ಸೂಕ್ತವಾದ ಮಸಾಜ್ ನೀಡುವ ಕೆಲಸ ಮಾಡುವ ಮಸಾಜ್ ಥೆರಪಿಸ್ಟ್‌ಗಳು ಎಲೆಮರೆಯ ಕಾಯಿಯಾಗಿಯೇ ಉಳಿಯುತ್ತಾರೆ. ಪ್ರತಿಯೊಂದು ತಂಡದಲ್ಲಿಯೂ ಇಂಥ ಪರಿಣತರು ಇರುತ್ತಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳಲ್ಲಿ ಈ ಜವಾಬ್ದಾರಿಯನ್ನು ಕ್ರಮವಾಗಿ ಅಮಿತ್ ಷಾ ಹಾಗೂ ವಿರ್ಗಿಲ್ ಬ್ರೌನ್ ನಿಭಾಯಿಸುತ್ತಿದ್ದಾರೆ.ಇವರಿಬ್ಬರೂ ಮಸಾಜ್ ಥೆರಪಿಯಲ್ಲಿ ಪರಿಣತಿ ಸಾಧಿಸಿದ್ದಾರೆ. ಅದರಲ್ಲಿಯೂ ಕ್ರೀಡಾಪಟುಗಳಿಗೆ ಅಗತ್ಯವಾದ ಮಸಾಜ್ ನೀಡುವುದನ್ನು ವಿಶೇಷವಾಗಿ ಅಭ್ಯಾಸ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಹಾಗೂ ಕ್ರೀಡಾಪಟುಗಳಿಗೆ ವಿಭಿನ್ನವಾದ ಮಸಾಜ್ ತಂತ್ರಗಳಿವೆ. ನಿತ್ಯ ಕೆಲಸದಲ್ಲಿ ತೊಡಗಿಕೊಂಡವರ ದೇಹದ ಮೇಲೆ ಅಷ್ಟೊಂದು ಒತ್ತಡ ಬಿದ್ದಿರುವುದಿಲ್ಲ. ಆದರೆ ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದವರ ದೇಹದ ಸ್ನಾಯುಗಳ ಮೇಲೆ ಸಾಕಷ್ಟು ಒತ್ತಡ ಇರುತ್ತದೆ.ಇಂಥ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಅಮಿತ್ ಹಾಗೂ ವಿರ್ಗಿಲ್. ಕೆಲವೊಮ್ಮೆ ದೀರ್ಘ ಆಟವಾಡಿದ ಆಟಗಾರರು ತೊಂದರೆಗೆ ಸಿಲುಕಿದಾಗ ಮಸಾಜ್ ಮಾಡಿ ಮತ್ತೆ ಚೇತರಿಸಿಕೊಳ್ಳುವಂತೆ ಮಾಡುವುದು ಇವರಿಗೂ ಕಷ್ಟ. ಆಗ ವಿಶ್ರಾಂತಿಗೆ ಸಲಹೆ ಮಾಡುವುದು ಅನಿವಾರ್ಯವಾಗುತ್ತದೆ. ವಿರ್ಗಿಲ್ ಅವರು ಶಿವನಾರಾಯಣ ಚಂದ್ರಪಾಲ್ ಅವರ ಮೀನುಖಂಡದ ಸ್ನಾಯು ಸೆಳೆತಕ್ಕೆ ಮಸಾಜ್ ನೀಡಿದ್ದಾರೆ. ಆದರೂ ಸ್ನಾಯುಗಳಲ್ಲಿನ ಒತ್ತಡದ ಬಿಸಿಯು ತಣ್ಣಗಾಗುವಂತೆ ಮಾಡಲು ಒಂದಿಷ್ಟು ವಿರಾಮ ಅಗತ್ಯ. ಆದ್ದರಿಂದಲೇ ಚಂದ್ರಪಾಲ್ ಮೂರನೇ ಟೆಸ್ಟ್‌ನಲ್ಲಿ ಹನ್ನೊಂದರ ಪಟ್ಟಿಯಿಂದ ಹೊರಗೆ ಉಳಿದರು.`ಸ್ನಾಯುಗಳು ರಬ್ಬರ್ ಎಳೆಗಳು ಇದ್ದಂತೆ. ಅತಿಯಾಗಿ ಬಲ ಪ್ರಯೋಗ ಮಾಡಲು ಪ್ರಯತ್ನಿಸಿದರೆ ಹರಿಯುತ್ತವೆ. ಅಂಥ ಸಂದರ್ಭದಲ್ಲಿ ಮತ್ತೆ ಅವು ಸಹಜ ಸ್ಥಿತಿಗೆ ಬರಲು ವಿಶ್ರಾಂತಿಯೊಂದೇ ಮಾರ್ಗ~ ಎನ್ನುವ ವಿರ್ಗಿಲ್ `ಮಾಂಸಖಂಡಗಳು ಮಜಬೂತಾಗಿ ಇರುವಂತೆ ಮಾಡುವುದು ನಮ್ಮ ಕೆಲಸ. ಆದರೆ ಶಕ್ತಿ ಮೀರಿದ ಶ್ರಮದಿಂದ ಆಗುವ ತೊಂದರೆಯನ್ನು ತಪ್ಪಿಸುವುದು ಮಾತ್ರ ಸಾಧ್ಯವಿಲ್ಲ~ ಎಂದು ಹೇಳಿದರು.ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ತತ್ವವನ್ನು ನಂಬಿರುವ ಅಮಿತ್ ಕೂಡ ಈ ಅಭಿಪ್ರಾಯವನ್ನು ಅಲ್ಲಗಳೆಯುವುದಿಲ್ಲ. `ಸ್ನಾಯು ಸೆಳೆತವಾದಾಗ ತಕ್ಷಣವೇ ಮಸಾಜ್ ನೀಡಿದರೆ ಒಳಿತು. ಕೆಲವೊಮ್ಮೆ           ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಇದ್ದಾಗ ಇಂಥ ತೊಂದರೆ ಅನುಭವಿಸಿದಾಗ ತುರ್ತು ಚಿಕಿತ್ಸೆ ಎನ್ನುವಂತೆ ನೋವು ನಿವಾರಕ ಸ್ಪ್ರೇ ಬಳಸಬಹುದು. ಆದರೆ ಅದೇ ಪರಿಹಾರಅಲ್ಲ~ ಎನ್ನುವುದು ಅವರ ವಿವರಣೆ.ಕ್ರಿಕೆಟ್ ತಂಡದಲ್ಲಿ ಮಸಾಜ್ ಥೆರಪಿಸ್ಟ್ ಆಗಿರುವುದು ದೊಡ್ಡ ಸವಾಲು ಎನ್ನುವ ವಿರ್ಗಿಲ್ `ಯಾವುದೇ ಗಾಯದ ಸಂದರ್ಭದಲ್ಲಿ ಮಾಧ್ಯಮಗಳ ಗಮನ ಹರಿಯುವುದು ಫಿಸಿಯೊ ಕಡೆಗೆ. ಫಿಸಿಯೊ ನೆಚ್ಚಿಕೊಂಡಿರುವುದು ಮಸಾಜರ್‌ಗಳನ್ನು. ಕ್ರಿಕೆಟಿಗರು ತಕ್ಷಣ ಗುಣವಾಗಬೇಕು ಎನ್ನುವ ಒತ್ತಡದ ಪರಿಸ್ಥಿತಿ. ಆಗ ನನಗೆ ಸುಲಭವಾಗಿ ನಿದ್ದೆಯೂ ಬರುವುದಿಲ್ಲ. ಸದಾ ಗಾಯಗೊಂಡ ಕ್ರಿಕೆಟಿಗನ ಬಗ್ಗೆ ಯೋಚಿಸುತ್ತೇನೆ~ ಎಂದರು.ತೆರೆಯ ಮರೆಯಲ್ಲಿನ ಕೆಲಸ ತಮ್ಮದಾದರೂ ಅದರಲ್ಲಿಯೇ ತೃಪ್ತಿ ಕಾಣುವ ವಿರ್ಗಿಲ್ ಹಾಗೂ ಅಮಿತ್ `ಆಟಗಾರರು ಅಂಗಳದಲ್ಲಿ ಉಲ್ಲಸಿತರಾಗಿ ಆಡುತ್ತಿದ್ದರೆ ಅದೇ ಸಮಾಧಾನ~ ಎನ್ನುತ್ತಾರೆ.ಹೀರೊ ತೆರೆಯ ಮೇಲೆ ಮಿಂಚಬೇಕಾದರೆ ಸ್ಪಾಟ್‌ಲೈಟ್ ಬಾಯ್ ಇರಲೇಬೇಕು. ಹಾಗೆಯೇ ಕ್ರೀಡಾ ತಾರೆಗಳು ದೈಹಿಕ ತೊಂದರೆಗಳಿಲ್ಲದೆಯೇ ಆಡಬೇಕು ಎಂದರೆ ಮಸಾಜ್     ಥೆರಪಿಸ್ಟ್‌ಗಳು ಅಗತ್ಯ! ಇತ್ತೀಚೆಗಂತೂ ಎಲ್ಲ ಕ್ರೀಡಾ ಕ್ಷೇತ್ರಗಳಲ್ಲಿ ಈ ಸಹಾಯಕ ಸಿಬ್ಬಂದಿಯ ಕೆಲಸಕ್ಕೆ ಬಹಳ ಬೇಡಿಕೆ. ಆದರೆ ಕ್ರಿಕೆಟ್ ತಂಡದಲ್ಲಿ ಈ ಸ್ಥಾನ ಪಡೆಯುವುದು ಸುಲಭವಂತೂ ಅಲ್ಲ. ಭಾರತ ತಂಡದೊಂದಿಗೆ ಕಾಣಿಸಿಕೊಳ್ಳಲು ಅಮಿತ್ ಅವರು ಪಟ್ಟ ಶ್ರಮವಂತೂ ಅಪಾರ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry