ಸೋಮವಾರ, ಮೇ 17, 2021
28 °C

ತಂತ್ರಜ್ಞಾನದ ಬಲ ಬೇಕು

ಅಜ ಕುಮಾರ್ ಸಿಂಗ್ Updated:

ಅಕ್ಷರ ಗಾತ್ರ : | |

ಪೊಲೀಸ್ ವ್ಯವಸ್ಥೆಯಲ್ಲಿ ಖಂಡಿತವಾಗಿಯೂ ಸುಧಾರಣೆ ಅಗತ್ಯವಾಗಿದೆ. ಆ ಸುಧಾರಣೆಯ ಲಾಭ ಜನಸಾಮಾನ್ಯರಿಗೆ ತಲುಪಬೇಕಿದೆ. ನನ್ನ ಪ್ರಕಾರ, ಠಾಣೆಯಿಂದಲೇ ಪೊಲೀಸ್ ವ್ಯವಸ್ಥೆ ಸುಧಾರಣೆ ಆರಂಭವಾಗಬೇಕು. ದೂರುಗಳನ್ನು ಸ್ವೀಕಾರ ಮಾಡುವುದಿಲ್ಲ ಎನ್ನುವುದು ಸಾಮಾನ್ಯವಾದ ಆರೋಪ. ಈ ಪರಿಪಾಠ ನಿಲ್ಲಬೇಕು.ಜನಸಾಮಾನ್ಯರು ಯಾವುದೇ ಹೆದರಿಕೆ ಇಲ್ಲದೆ ಠಾಣೆಗೆ ಬಂದು ದೂರು ನೀಡುವಂತಾಗಬೇಕು. ದೂರು ಸ್ವೀಕರಿಸಿದ ಕೂಡಲೇ ಪ್ರಥಮ ಮಾಹಿತಿ ವರದಿ ಕೊಡಬೇಕು. ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಸಣ್ಣ ಕಳ್ಳತನದಿಂದ ಭಯೋತ್ಪಾದನೆವರೆಗೆ ಯಾವುದೇ ಪ್ರಕರಣ ನಡೆದರೂ ಮೊದಲು ಪ್ರತಿಸ್ಪಂದಿಸುವ ಹೊಣೆಗಾರಿಕೆ ಆಯಾ ಸರಹದ್ದಿನ ಪೊಲೀಸ್ ಠಾಣೆಯದ್ದಾಗಿದೆ. ಹೀಗಾಗಿ ಠಾಣೆಗಳಿಗೆ ಅಗತ್ಯವಾದ ಮೂಲ ಸೌಕರ್ಯವನ್ನು ಮೊದಲು ಒದಗಿಸಬೇಕು.ಪೊಲೀಸ್ ವ್ಯವಸ್ಥೆಯನ್ನು ಸರ್ಕಾರ ಉನ್ನತೀಕರಿಸುವುದು ಅಗತ್ಯವಾಗಿದ್ದು, ಅದಕ್ಕೆ ನನ್ನ ಕೆಲವು ಸಲಹೆಗಳು ಹೀಗಿವೆ:

* ಸಿಬ್ಬಂದಿ ಕೊರತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕು. ಜನರ ಜೊತೆ ಹೇಗೆ ವರ್ತಿಸಬೇಕು ಎನ್ನುವ ತರಬೇತಿಯನ್ನು ಎಲ್ಲ ಹಂತದ ಸಿಬ್ಬಂದಿಗೆ ನೀಡಬೇಕು.* ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳ ಜಾಡಿನ ಮೇಲೆ ಕಣ್ಗಾವಲು ಹಾಕಲು ತಂತ್ರಜ್ಞಾನ ಆಧಾರಿತ ವಿಶೇಷ ವ್ಯವಸ್ಥೆ ರೂಪಿಸಬೇಕು. ಈ ವ್ಯವಸ್ಥೆಯಿಂದ ಸಮಯೋಚಿತ ಮತ್ತು ಸೂಕ್ತವಾದ ಮಾಹಿತಿಯನ್ನು ಸಂಬಂಧಿಸಿದ ಠಾಣೆಗಳಿಗೆ ರವಾನೆ ಮಾಡಬೇಕು. ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಣದ ಮೂಲ ಪತ್ತೆಹಚ್ಚಲು ವಿವಿಧ ತೆರಿಗೆ ಇಲಾಖೆಗಳು, ರೈಲ್ವೆ, ಬಿಎಸ್‌ಎನ್‌ಎಲ್ ಹಾಗೂ ರಾಜ್ಯಗಳ ಪೊಲೀಸ್ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಘಟಕಗಳನ್ನು ರಚಿಸಬೇಕು.* ಸೈಬರ್ ದಾಳಿಯಿಂದ ರಾಷ್ಟ್ರದ ಭದ್ರತೆಗೆ ಆತಂಕವಿದ್ದು, ಸೈಬರ್ ಅಪರಾಧ ವಿಭಾಗದ ಸಿಬ್ಬಂದಿಗೆ ತಂತ್ರಜ್ಞಾನದ ಸಮಗ್ರ ತರಬೇತಿ ಕೊಡಬೇಕು. ಜಿಲ್ಲೆಗೊಂದು ಸೈಬರ್ ಅಪರಾಧ ಠಾಣೆಯನ್ನು ತೆರೆಯಬೇಕು ಮತ್ತು ಅದಕ್ಕೆ ಅಗತ್ಯ ಬಲ ತುಂಬಬೇಕು.* ಪೊಲೀಸ್ ಸಿಬ್ಬಂದಿ ಶೇಕಡ ನೂರರಷ್ಟು ವೃತ್ತಿಪರ ಉದ್ದೇಶಕ್ಕೆ ಬಳಕೆ ಆಗುತ್ತಿಲ್ಲ. ಜನಪ್ರತಿನಿಧಿಗಳ ಭದ್ರತೆಗೆ ಪೊಲೀಸರನ್ನು ಅತ್ಯಧಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಭದ್ರತಾ ವ್ಯವಸ್ಥೆಯ ಪುನರ್‌ವಿಮರ್ಶೆ ಆಗಬೇಕು. ಪೊಲೀಸರು ಜನಪ್ರತಿನಿಧಿಗಳಿಗಿಂತ ಜನರ ಕೆಲಸಕ್ಕೆ ಹೆಚ್ಚಾಗಿ ಬಳಕೆ ಆಗಬೇಕು.* ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ. ಅಣೆಕಟ್ಟು, ಬ್ಯಾಂಕ್ ಸೇರಿದಂತೆ ಪ್ರಮುಖ ಕಟ್ಟಡಗಳ ರಕ್ಷಣೆ ಹೊಣೆಯನ್ನು ಅದಕ್ಕೆ ವಹಿಸಲು ಉದ್ದೇಶಿಸಲಾಗಿದೆ. ಆದಷ್ಟು ಬೇಗ ಈ ಪಡೆಯನ್ನು ಕಾರ್ಯಾಚರಣೆಗೆ ಇಳಿಸಬೇಕು.* ಮುಂದುವರಿದ ಕೆಲವು ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಇರುವ ತಾಂತ್ರಿಕ ಸೌಲಭ್ಯಗಳು ಕಡಿಮೆ. ತಾಂತ್ರಿಕ ಉಪಕರಣಗಳಿಂದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು.* ಪೊಲೀಸ್ ವ್ಯವಸ್ಥೆಗೆ ಬೇಕಾದ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಬೇಕು. ಬೆಂಗಳೂರು ಮಾಹಿತಿ ತಂತ್ರಜ್ಞಾನದ ರಾಜಧಾನಿ ಆಗಿರುವುದರಿಂದ ಈ ಕೆಲಸ ಅಷ್ಟೇನೂ ಕಷ್ಟವಲ್ಲ. ಮಾರುಕಟ್ಟೆಗೆ ಬರುವ ಹೊಸ ತಂತ್ರಜ್ಞಾನದ ಮೇಲೆ ನಿಗಾ ಇಡಲು ತಾಂತ್ರಿಕವಾಗಿ ಪಳಗಿದವರ ತಂಡವೊಂದನ್ನು ಕಟ್ಟಬೇಕು.* ಪೊಲೀಸ್ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಕರೆ ಮಾಡಿದರೆ ಅವರ ದೂರನ್ನು ಧ್ವನಿ ಮುದ್ರಣ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು. ಸ್ವಯಂಚಾಲಿತವಾಗಿ ಆ ದೂರು ಸಂಬಂಧಿಸಿದ ಅಧಿಕಾರಿಗಳಿಗೆ ಹೋಗಬೇಕು. ಕೈಗೊಂಡ ಕ್ರಮದ ವರದಿ ದೂರುದಾರರಿಗೆ ತಲುಪಬೇಕು.

(ಲೇಖಕರು ನಿವೃತ್ತ ಪೊಲೀಸ್ ಮಹಾನಿರ್ದೇಶಕರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.