ತಂತ್ರಜ್ಞಾನ ಪ್ರಯೋಜನ

ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಈಗ ವ್ಯಾಪಕವಾಗಿದೆ. ಕೋರ್ ಬ್ಯಾಂಕಿಂಗ್, ಎಟಿಎಂ, ಆರ್ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್), ಎನ್ಇಎಫ್ಟಿ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್), ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಹತ್ತಾರು ಸೇವೆಗಳನ್ನು ಒದಗಿಸಲು ತಂತ್ರಜ್ಞಾನ ಮತ್ತು ಅಂತರ್ಜಾಲ ಅವಕಾಶ ಮಾಡಿಕೊಟ್ಟಿದೆ.
ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕ್ನ ಯಾವುದೇ ಶಾಖೆಯಿಂದಲಾದರೂ ಹಣ ಜಮಾ ಮಾಡಲು, ವರ್ಗಾಯಿಸಲು, ಚೆಕ್ ನೀಡಿ ಹಣ ಪಡೆದುಕೊಳ್ಳಲು ಕೋರ್ ಬ್ಯಾಂಕಿಂಗ್ ಅವಕಾಶ ಮಾಡಿಕೊಡುತ್ತಿದೆ.ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕ ಇರುವೆಡೆಯಿಂದ ದಿನದ ಯಾವುದೇ ಸಮಯದಲ್ಲಾದರೂ ತಮ್ಮ ಖಾತೆಯಲ್ಲಿ ವ್ಯವಹರಿಸಲು ‘ನೆಟ್ ಬ್ಯಾಂಕಿಂಗ್’ ಅವಕಾಶ ಮಾಡಿಕೊಡುತ್ತಿದೆ.ಮುಷ್ಟಿಯೊಳಗಿನ ಮೊಬೈಲ್ ಫೋನ್ ಸಹ ‘ಬ್ಯಾಂಕಿಂಗ್ ಸೇವೆ’ ಪಡೆದುಕೊಳ್ಳಲು ಹೆಚ್ಚಿನ ಅವಕಾಶ ಮಾಡಿಕೊಡುತ್ತಿದೆ.
ಈವರೆಗೆ ಕೇಂದ್ರ ಸರ್ಕಾರದ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ), ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್ ಸೇರಿದಂತೆ ಬಹಳಷ್ಟು ಬ್ಯಾಂಕ್ಗಳು ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡು ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿವೆ. ಮಂಗಳೂರು ಮೂಲದ ಹಾಗೂ ಖಾಸಗಿ ಕ್ಷೇತ್ರದ ಕರ್ಣಾಟಕ ಬ್ಯಾಂಕ್ ಸಹ 2012ರ ಸೆಪ್ಟೆಂಬರ್ 25ರಂದು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ‘ಕೆಬಿಎಲ್ ಮೊಬೈಲ್’ ಬ್ರಾಂಡ್ನಡಿ ಆರಂಭಿಸಿದೆ.
ತಂತ್ರಜ್ಞಾನ ಅಳವಡಿಕೆಯಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಮುಂದೆ ಇದೆ. ಸದ್ಯ ಬ್ಯಾಂಕ್ 64,33,216 ಗ್ರಾಹಕರನ್ನು ಹೊಂದಿದ್ದು, ಇವರಲ್ಲಿ 32,60,881 ಖಾತೆದಾರರು ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಕಳೆದ ಒಂದೂಕಾಲು ವರ್ಷದಲ್ಲಿ 28,776 ಮಂದಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ವಿವರಿಸುತ್ತಾರೆ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಜಯರಾಂ ಭಟ್.
ಮೊಬೈಲ್ ಬ್ಯಾಂಕಿಂಗ್ ಸೇವೆ ಪಡೆಯುವುದು ಬಹಳ ಸುಲಭದ್ದಾಗಿದೆ. ವಾರದ ಏಳೂ ದಿನ, ದಿನದ ಯಾವುದೇ ಸಮಯದಲ್ಲಾದರೂ, ಕ್ಷಣ ಮಾತ್ರದಲ್ಲಿ ತಮ್ಮ ಬ್ಯಾಂಕಿಂಗ್ ಸೇವೆಯ ಅಗತ್ಯಗಳನ್ನು ಗ್ರಾಹಕರು ಈಡೇರಿಸಿಕೊಳ್ಳಬಹುದು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಯತ್ನ ನಿರಂತರ ನಡೆಯುತ್ತಿದೆ. ಹಾಗಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ನೋಂದಣಿ ಶೇ 126.15ರ ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆ. ಮೊಬೈಲ್ ಫೋನ್ ಮೂಲಕದ ವಹಿವಾಟಿನಲ್ಲಿಯೂ ಈವರೆಗೆ ಶೇ 68ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಕರ್ಣಾಟಕ ಬ್ಯಾಂಕ್ನ ಚೀಫ್ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ಭಟ್.
ಸೈಬರ್ ಅಪರಾಧಗಳು, ಹ್ಯಾಂಕಿಂಗ್ ವಿಚಾರವಾಗಿ ಗ್ರಾಹಕರು ತುಸು ಕಳವಳಕ್ಕೊಳಗಾಗುವುದು ಸಹಜ. ಇದು ಎಲ್ಲ ಬ್ಯಾಂಕ್ಗಳ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯಲ್ಲಿ ವೇಗದ ಬೆಳವಣಿಗೆಗೆ ಅಡ್ಡಿ ಎನಿಸುತ್ತಿದೆ. ಮೊಬೈಲ್ ಫೋನ್ ಕಳೆದುಹೋದರೆ ಏನು ಮಾಡುವುದು? ಎಂಬ ಭೀತಿಯೂ ಕೆಲವು ಗ್ರಾಹಕರನ್ನು ಮೊಬೈಲ್ ಬ್ಯಾಂಕಿಂಗ್ ಆಕರ್ಷಣೆಯಿಂದ ದೂರವಿಡುತ್ತಿದೆ. ಆದರೆ, ಗ್ರಾಹಕರು ಬ್ಯಾಂಕ್ಗಳು ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬ್ಯಾಂಕ್ ಖಾತೆ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅಪರಿಚಿತರು ದುರ್ಬಳಕೆ ಮಾಡಿಕೊಳ್ಳಲು, ವಂಚನೆ ಎಸಗಲು ಅವಕಾಶವಾಗುವುದಿಲ್ಲ ಎಂಬ ಭರವಸೆಯ ಮಾತುಗಳನ್ನೂ ಹೇಳುತ್ತಾರೆ ಮಹಾಬಲೇಶ್ವರ ಭಟ್.
ಇಂತಹ ಗೊಂದಲ, ಭೀತಿಯ ನಡುವೆಯೂ ಮೊಬೈಲ್ ಬ್ಯಾಂಕಿಂಗ್ ಸೇವೆ ನಿಧಾನವಾಗಿ ವಿಸ್ತಾರಗೊಳ್ಳುತ್ತಿದೆ. ಹೊಸ ತಲೆಮಾರಿನವರು, ಮುಖ್ಯವಾಗಿ ಯುವಜನರು ಈ ಸುಲಭದ, ಸದಾಕಾಲ ಲಭ್ಯವಿರುವ ಬ್ಯಾಂಕಿಂಗ್ ಸೇವೆಗೆ ಮನಸೋತಿದ್ದಾರೆ. ಹಾಗಾಗಿ ಭಾರತದಲ್ಲಿಯೂ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಭವಿಷ್ಯವಿದೆ. ಈ ಸೇವೆ ವಿಸ್ತರಿಸಿದಷ್ಟೂ ವಿತ್ತೀಯ ಸೇರ್ಪಡೆ ಕಾರ್ಯಕ್ರಮಕ್ಕೆ ಬಹಳ ಅನುಕೂಲವಾಗಲಿದೆ ಎನ್ನುತ್ತಾರೆ ಮಹಾಬಲೇಶ್ವರ ಭಟ್.
ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಎಂಬುದು ದೇಶದ ಬ್ಯಾಂಕಿಂಗ್ ಸೇವೆಯ ಪ್ರಮುಖ ವಿಭಾಗವಾಗಿರಲಿವೆ. ದೊಡ್ಡ ಸಂಖ್ಯೆಯ ಖಾತೆದಾರರ ಮೆಚ್ಚಿನ ಸೇವೆ ಎನಿಸಿಕೊಳ್ಳಲಿದೆ ಎಂಬ ಆಶಾವಾದವನ್ನೂ ವ್ಯಕ್ತಪಡಿಸುತ್ತಾರೆ ಭಟ್.
ತಕ್ಷಣದ ಹಣ ವರ್ಗಾವಣೆಗೆ ‘ಕೆಬಿಎಲ್ ಮೊಬೈಲ್’
ನಾನು ಕಳೆದ 9 ತಿಂಗಳಿಂದ ಕರ್ಣಾಟಕ ಬ್ಯಾಂಕಿನ ‘ಕೆಬಿಎಲ್ ಮೊಬೈಲ್’ ಅಪ್ಲಿಕೇಷನ್ ಬಳಸುತ್ತಿದ್ದೇನೆ. ಇಂಟರ್ನೆಟ್ ಬ್ಯಾಂಕಿಂಗ್ಗೆ ಹೋಲಿಸಿದರೆ ಇದು ತುಂಬಾ ಸಹಕಾರಿ. ಅಪ್ಲಿಕೇಷನ್ ಗ್ರಾಹಕ ಸ್ನೇಹಿ ಆಗಿದ್ದು, ತಕ್ಷಣದ ಹಣ ವರ್ಗಾವಣೆಗೆ (ಇನ್ಸ್ಟಂಟ್ ಮನಿ ಟ್ರಾನ್ಸ್ಫರ್) ಹೇಳಿ ಮಾಡಿಸಿದಂತಿದೆ. ಖಾತೆಯಲ್ಲಿರುವ ಬಾಕಿ ಹಣದ ವಿವರ, ಮಿನಿ ಸ್ಟೇಟ್ಮೆಂಟ್ಗಾಗಿ ನಾನು ಮೊಬೈಲ್ ಬ್ಯಾಂಕಿಂಗ್ ಅನ್ನೇ ಬಳಸುತ್ತೇನೆ.
ಬಸವರಾಜ್.ಖಾಸಗಿ ಕಂಪೆನಿ ಉದ್ಯೋಗಿ
ಯುಟಿಲಿಟಿ ಬಿಲ್ ಪಾವತಿ
ಎಸ್ಎಂಎಸ್ ಮತ್ತು ಅಪ್ಲಿಕೇಷನ್ ಎರಡೂ ಮಾದರಿಗಳಲ್ಲಿ ನಾನು ಕಳೆದ 5–6 ತಿಂಗಳಿಂದ ಕರ್ನಾಟಕ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಪ್ರಯೋಜನ ಪಡೆದುಕೊಳ್ಳುತ್ತಿದ್ದೇನೆ. ಯುಟಿಲಿಟಿ ಬಿಲ್ ಪಾವತಿಗೆ ನನಗೆ ಈ ಆ್ಯಪ್ ಹೆಚ್ಚು ಅನುಕೂಲವಾಗಿದೆ. ಹಣ ವರ್ಗಾವಣೆ ಸೇರಿದಂತೆ ಎಲ್ಲ ರೀತಿಯ ಬ್ಯಾಂಕಿಂಗ್ ಸೇವೆಗಳು ಈ ಅಪ್ಲಿಕೇಷನ್ನಲ್ಲಿ ಲಭ್ಯ. ಇದೊಂದು ಬಳಕೆದಾರ ಸ್ನೇಹಿ ತಂತ್ರಜ್ಞಾನ.
–ಪ್ರಸನ್ನ ಐ.ಟಿ ಕಂಪೆನಿ ಉದ್ಯೋಗಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.