ಬುಧವಾರ, ಏಪ್ರಿಲ್ 14, 2021
32 °C

ತಂತ್ರಾಂಶಗಳ ಅದ್ಭುತ ಪತ್ತೆದಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂತ್ರಾಂಶಗಳ ಅದ್ಭುತ ಪತ್ತೆದಾರ!

ಹುಡುಕುವುದು~ ಎಷ್ಟೊಂದು ಕಷ್ಟ ಅಂತ ನಿಜವಾಗಿ ಹುಡುಕಿ ದಣಿದವರಿಗೇ ಗೊತ್ತು!

ಕಳೆದುಕೊಂಡದ್ದನ್ನು ಹುಡುಕುವುದು ಒಂದು ಬಗೆ. ಅದೇ ರೀತಿ ತಮಗೆ ಬೇಕಾದ್ದನ್ನು ಹುಡುಕುವುದು ಮತ್ತೊಂದು ಬಗೆ. ಅಂತರ್ಜಾಲಕ್ಕೆ ಸಂಬಂಧಿಸಿದಂತೆ ಹುಡುಕುವುದಕ್ಕೆ `ಗೂಗಲ್~ ಕಾಮಧೇನು ಎಂಬುದು ಎಲ್ಲರಿಗೂ ಗೊತ್ತು.

 

ಒಂದು ಪದವನ್ನು ಟೈಪಿಸಿ `ಹುಡುಕಾಟಕ್ಕೆ~ ಬಿಟ್ಟರೆ ಒಂದಲ್ಲ ಎರಡಲ್ಲ, ಅದಕ್ಕೆ ಸಂಬಂಧಿಸಿದ ಸಾವಿರಾರು ಪುಟಗಳು ತೆರೆದುಕೊಳ್ಳುತ್ತವೆ. ನಿಮಗೆ ಬೇಕಿರಲಿ, ಬೇಡದಿರಲಿ, ವಿಶ್ವದ ಯಾವುದೋ ಮೂಲೆಯ, ಆ ಪದಕ್ಕೆ ಸಂಬಂಧಿಸಿದ ಸಂಗತಿಗಳು ನಿಮ್ಮ ಗಣಕದ ಪರದೆ ಮೇಲೆ `ನೀವು ಹುಡುಕುತ್ತಿರುವುದು ನನ್ನನ್ನೇ?~ ಎಂದು ಕೇಳುವಂತೆ ನಿಲ್ಲುತ್ತವೆ.ಮಾಹಿತಿಗಳನ್ನು ಕಲೆಹಾಕುವ ಅಂತರ್ಜಾಲದ ಕೊಂಡಿಗಳಿಗಂತೂ ಲೆಕ್ಕವಿಲ್ಲ. ಆದರೆ ತಂತ್ರಾಂಶಗಳನ್ನು ಹುಡುಕುವುದು ಹೇಗೆ...? ತಂತ್ರಾಂಶಗಳನ್ನು ಹುಡುಕುವುದಕ್ಕೆ ಮತ್ತೊಂದು ತಂತ್ರಾಂಶ...!ಮಾಹಿತಿ ತಂತ್ರಜ್ಞಾನ ಯುಗದಲ್ಲಿ ದಿನಕ್ಕೊಂದರಂತೆ ಹೊಸ ತಂತ್ರಾಂಶಗಳು ಜೀವ ತಳೆಯುತ್ತಿವೆ. ಆದರೆ ಅವು ಯಾವುವು? ಯಾವುದಕ್ಕೆ ಬಳಸಲಾಗುತ್ತದೆ? ಬಳಕೆಗೆ ಯೋಗ್ಯವೇ? ಅವು ಎಲ್ಲಿವೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಎದುರಾಗುತ್ತವೆ.ಹೊಸ ತಂತ್ರಾಂಶಗಳ ಪತ್ತೆ, ಲಾಲ್‌ಬಾಗ್‌ನಲ್ಲಿ ನಿಂತು ಹೂಗಿಡವನ್ನು ಹುಡುಕಿದಷ್ಟು ಸುಲಭವಲ್ಲ! ಯಾವುದೋ ಮೂಲೆಯಲ್ಲಿ ಹುಟ್ಟುವ ಎಷ್ಟೋ ಉತ್ತಮ ತಂತ್ರಾಂಶಗಳು ಜನಪ್ರಿಯತೆ ಪಡೆದುಕೊಳ್ಳದೆ, ನಮ್ಮ ಗಮನಕ್ಕೇ ಬಾರದ ಸಾಧ್ಯತೆಯೂ ಇರುತ್ತವೆ.ಅವುಗಳ ಪತ್ತೆ ಅಷ್ಟು ಸಲೀಸಲ್ಲ. ಈಗ ಈ ಸಮಸ್ಯೆಗೂ ಪರಿಹಾರ ಸಿಕ್ಕಿದೆ.

ಅಂದ ಹಾಗೆ, ತಂತ್ರಾಂಶ ಹುಡುಕಾಟಕ್ಕೆ ಪರಿಹಾರ ನೀಡಿರುವುದು ಮತ್ತೊಂದು ತಂತ್ರಾಂಶ. ಇಂತಹದ್ದೊಂದು ಹೊಸ ನಮೂನೆ ತಂತ್ರಾಂಶ ಇದೆ ಎಂಬುದೇ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.ಇದು ಜನ್ಮತಳೆದು ಈಗಾಗಲೇ ಒಂದು ವರ್ಷ ತುಂಬಿದೆ. ಹೌದು, ಇದು ಕೇವಲ ಹುಡುಕುವುದು ಮಾತ್ರವಲ್ಲ, ನಿಮಗೆ ಬೇಕಾದ ತಂತ್ರಾಂಶವನ್ನು ನಿಮ್ಮ ಬಳಿಗೇ ಬರುವಂತೆ ಮಾಡುತ್ತದೆ.http://crosswa.lk ಇದುವೇ ತಂತ್ರಾಂಶಗಳನ್ನು ಹುಡುಕುವವರ ಪಾಲಿನ ಕಲ್ಪವೃಕ್ಷ. ಹೌದು, ಮನುಷ್ಯ ಬಯಸಿದ್ದನ್ನು ಕೊಡುವುದೇ ಕಲ್ಪವೃಕ್ಷ ಎಂಬುದು ಭಾರತೀಯರ ನಂಬಿಕೆ. ಅದೇ ರೀತಿ ಇದು ನಾವು ಕೇಳುವ ತಂತ್ರಾಂಶಗಳನ್ನು ಹುಡುಕಿಕೊಡುತ್ತದೆ. ಆ ಬಗೆಯ ತಂತ್ರಾಂಶ ಅಸ್ತಿತ್ವದಲ್ಲಿ ಇರಬೇಕಷ್ಟೆ!ಇದು ಅತ್ಯಂತ ಸುಲಭ ಹಾಗೂ ಸರಳ. ಇದರ ತಾಣದಲ್ಲಿ ಶೋಧ ಯಂತ್ರಕ್ಕೆ (ಸರ್ಚ್ ವಿಭಾಗ) ಹೋಗಿ ಬೇಕಾದ ತಂತ್ರಾಂಶದ ಹೆಸರನ್ನೊತ್ತಿದರೆ ಸಾಕು ತಂತ್ರಾಂಶ ಪರದೆ ಮೇಲೆ ಮೂಡುತ್ತದೆ. ಒಂದು ವೇಳೆ ತಂತ್ರಾಂಶದ ನಿಖರ ಹೆಸರು ತಿಳಿಯದೇ ಇದ್ದರೂ ಯಾವ ವಿಷಯಕ್ಕೆ ಸಂಬಂಧಿಸಿದ ತಂತ್ರಾಂಶ ಬೇಕೋ ಆ ವಿಚಾರ ಟೈಪಿಸಿದರೆ ಸಾಕು ಕ್ಷಣಾರ್ಧದಲ್ಲೇ ವಿಷಯಕ್ಕೆ ಸಂಬಂಧಿಸಿದ ಅನೇಕ ತಂತ್ರಾಂಶಗಳು ಒಟ್ಟಾಗಿ ಮೂಡಲಾರಂಭಿಸುತ್ತವೆ.ಉದಾ: `ಫೋಟೋ ಎಫೆಕ್ಟ್~ ತಂತ್ರಾಂಶಗಳು ಬೇಕಿದ್ದಲ್ಲಿ. ಫೋಟೋ ಎಫೆಕ್ಟ್ ಎಂದು ಟೈಪಿಸಿದರೆ ಸಾಕು ಫೋಟೋ ಎಫೆಕ್ಟ್‌ಗಾಗಿಯೇ ಇರುವ ಅನೇಕ ತಂತ್ರಾಂಶಗಳು ಮೂಡುತ್ತವೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಹೊಸ ಹೊಸ ತಂತ್ರಾಂಶಗಳು, ಇತರರಿಂದ ಶಿಫಾರಸಾದ ತಂತ್ರಾಂಶಗಳೂ ಕಾಣಿಸಿಕೊಳ್ಳುತ್ತವೆ.ಇವುಗಳಲ್ಲಿ ಆಯಾ ತಂತ್ರಾಂಶದ ಸಂಕೇತಗಳು, ಅವುಗಳ ಬೆಲೆ ಅವುಗಳನ್ನು ಎಷ್ಟು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ರೇಟಿಂಗ್ ಎಷ್ಟು , ಯಾವುದು ಜನಪ್ರಿಯ ಎಂಬೆಲ್ಲಾ ವಿಷಯಗಳೂ ಚೊಕ್ಕವಾಗಿ ಮೂಡಿ ಬರುತ್ತವೆ. ಇವುಗಳಲ್ಲಿ ನಿಮಗೆ ಬೇಕಾದ ತಂತ್ರಾಂಶವನ್ನು ಪಡೆಯಲು ಎಷ್ಟು ಹಣ ತೆರಬೇಕು, ಯಾವುದು ಅಗ್ಗ, ಯಾವುದು ತುಟ್ಟಿ ಎಂಬ ಮಾಹಿತಿಯೂ ಪರದೆ ಮೇಲೆ ಕಾಣಿಸುತ್ತವೆ. ಕುಳಿತಲ್ಲಿಯೇ ತಂತ್ರಾಂಶದ ಗುಣಾವಗುಣಗಳನ್ನೆಲ್ಲಾ ತಿಳಿದುಕೊಳ್ಳಬಹುದು.ಈ ತಂತ್ರಾಂಶಗಳನ್ನು ಇಚ್ಛಿಸಿದಲ್ಲಿ ಫೇಸ್‌ಬುಕ್ ಮುಖಾಂತರ ಸ್ನೇಹಿತರಿಗೆ ರೆಕಮಂಡ್ (ಶಿಫಾರಸು) ಮಾಡಬಹುದು. `ಲೈಕ್~ ಕ್ಲಿಕ್ಕಿಸಬಹುದು. ಇದರ ಬಗ್ಗೆ ವಿವರ ವಿಮರ್ಶೆಯನ್ನೂ ಬರೆಯಲು ಅವಕಾಶ ಇದೆ. ಹೀಗೆ ಸ್ನೇಹಿತರೊಂದಿಗೆ ಹಂಚಿಕೊಂಡಾಗ ಅಂತಹವನ್ನು ಪಡೆಯಲು ಅವರಿಗೂ ಸಹಾಯವಾಗುತ್ತದೆ. ಜತೆಗೆ ಇವಕ್ಕೆ ಪೂರಕವಾದ ಮಾಹಿತಿ, ಸೂಚನೆಗಳೂ ಅವರಿಂದ ಸಿಗಬಹುದು. ಸ್ವಕಾರ್ಯ- ಸ್ವಾಮಿ ಕಾರ್ಯ!


ಈ    crosswa.lk ತಂತ್ರಾಂಶ ರೂಪುಗೊಂಡದ್ದು 2011ರ ನವೆಂಬರ್‌ನಲ್ಲಿ. ಅಂದರೆ ಅದಕ್ಕೀಗ ಮೊದಲ ಹುಟ್ಟುಹಬ್ಬದ ಸಂಭ್ರಮ.ಪೇಜ್ ಲೈಮ್, ಸ್ಪೈವಿಡ್, ಕಂಟ್ರೋಲ್ ಶಿಫ್ಟ್ ಮೊದಲಾದ ವಿಭಿನ್ನ ಬಗೆಯ ತಂತ್ರಾಂಶಗಳನ್ನು ರೂಪಿಸಿದ ಥಾಮಸ್ ಮ್ಯಾಕ್ ಲಿಯೋಡ್ ತಂಡಕ್ಕೆ ಎದುರಾದ ಸಮಸ್ಯೆ ಎಂದರೆ ತಾವು ರೂಪಿಸಿದ ತಂತ್ರಾಂಶಗಳನ್ನು ಸುಲಭವಾಗಿ ಹುಡುಕಲು ಸಾಧ್ಯವಾಗದೇ ಇದ್ದದ್ದು.  ಅದಕ್ಕಾಗಿ ಅವರು crosswa.lk ರೂಪಿಸಿ ಮೊದಮೊದಲು ತಮ್ಮ ತಂಡವೇ ರೂಪಿಸಿದ್ದ ತಂತ್ರಾಂಶಗಳನ್ನು ಅದರಲ್ಲಿ ಹರಿಯಬಿಟ್ಟರು. ನಂತರದಲ್ಲಿ ಅದು ಕ್ರಮೇಣ ಎಲ್ಲಾ ತಂತ್ರಾಂಶಗಳನ್ನು ಒಳಗೊಂಡು ಬೆಳೆಯಿತು.ಈ ತಾಣದಲ್ಲಿ ಮೊದಲು ಕೇಳುವುದೇ ಸದಸ್ಯರಾಗಿ ಎಂದು. ಅದಕ್ಕೆ ಫೇಸ್‌ಬುಕ್ ಖಾತೆ ಕಡ್ಡಾಯ. ಏಕೆಂದರೆ ಫೇಸ್‌ಬುಕ್ಕೇ ಇದಕ್ಕೆ ವೇದಿಕೆ. ಹಾಗೆಂದು ತಕ್ಷಣಕ್ಕೆ ಇದರ ಬಳಕೆ ಸಾಧ್ಯವಿಲ್ಲ. ಫೇಸ್‌ಬುಕ್‌ನಿಂದ ಕನಿಷ್ಠ ಒಬ್ಬರನ್ನಾದರೂ ಇದಕ್ಕೆ ಸದಸ್ಯರಾಗುವಂತೆ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಫೇಸ್‌ಬುಕ್ ಖಾತೆಯಿಂದ ಒಬ್ಬರು crosswa.lkಗೆ ಲಾಗಿನ್ ಆಗುವವರೆಗೂ ಕಾಯಬೇಕಾಗುತ್ತದೆ. `ಸ್ವಕಾರ್ಯದೊಂದಿಗೆ ಸ್ವಾಮಿ ಕಾರ್ಯ~ವನ್ನೂ ಮಾಡಬೇಕಾದ ಹೊಣೆಗಾರಿಕೆ ಈ ತಾಣದ್ದು. ಆ ಜವಾಬ್ದಾರಿಯನ್ನು ತನ್ನನ್ನು ಭೇಟಿ ಮಾಡಲು ಬರುವ ಗ್ರಾಹಕನಿಗೆ ಅದು ವರ್ಗಾಯಿಸುತ್ತದೆ!ಇದರಲ್ಲಿ ನೀವು ಒಮ್ಮೆಗೆ ಒಂದು ತಂತ್ರಾಂಶವನ್ನು ಆಯ್ದುಕೊಂಡಿರಿ ಎಂದರೆ ಅದರ ಸಂದೇಶ ನಿಮ್ಮೆಲ್ಲಾ ಫೇಸ್‌ಬುಕ್ ಸ್ನೇಹಿತರಿಗೆ ತಲುಪುತ್ತದೆ. ಹೀಗಾಗಿ ಇದೊಂದು ರೀತಿಯ ಸಾಮಾಜಿಕ ಜಾಲತಾಣವಾಗಿಯೂ ಕಾರ್ಯ  ನಿರ್ವಹಿಸುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.