ತಂತ್ರೀ ನಾದಮಣಿಗಳ ನಿನಾದ

7

ತಂತ್ರೀ ನಾದಮಣಿಗಳ ನಿನಾದ

Published:
Updated:

ನಾದ-ನೃತ್ಯ

ಮೊನ್ನೆ ಮಂಗಳವಾರ (ಜ.31) ಮಲ್ಲೇಶ್ವರದ ಕಂಚಿ ಶಂಕರ ಮಠದಲ್ಲಿ ಒಂದು ವಿಶೇಷ ಕಾರ್ಯಕ್ರಮ. ಕಂಚಿ ಕಾಮಾಕ್ಷಿಯ ದಿವ್ಯ ಸನ್ನಿಧಾನದಲ್ಲಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರ 77ನೇ ವರ್ಧಂತಿ ಪ್ರಯುಕ್ತ ಸಂಗೀತ ಕಛೇರಿ ಹಾಗೂ ಕಲಾವಿದರ ಸನ್ಮಾನ.

ಸ್ವತಃ ಸ್ವಾಮೀಜಿ ಉಪಸ್ಥಿತಿ ಹಾಗೂ ಕಲಾ ಪ್ರೋತ್ಸಾಹ ಸಂದರ್ಭದ ಮಹತ್ವವನ್ನು ಇಮ್ಮಡಿಗೊಳಿಸಿತು. ರಾಷ್ಟ್ರದ ಗಣ್ಯ ಪಿಟೀಲು ವಾದಕರಲ್ಲಿ ಒಬ್ಬರಾದ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಅವರಿಗೆ `ತಂತ್ರೀ ನಾದಮಣಿ~ ಎಂಬ ಬಿರುದನ್ನು ಪ್ರದಾನ ಮಾಡಿದರು. ಜೊತೆಗೆ ಪೀತಾಂಬರ, ಫಲ ಪುಷ್ಪಗಳನ್ನು ನೀಡಿ ಆಶೀರ್ವದಿಸಿದರು.   ನಂತರ ಮಠದ ಆವರಣವನ್ನೆಲ್ಲಾ ಪಿಟೀಲು ನಾದ ಆವರಿಸಿತು. ಮೈಸೂರು ನಾಗರಾಜ್ ಮತ್ತು ಮಂಜುನಾಥ್ ತನಿ ವಾದಕರಾಗಿಯೂ ಪ್ರಸಿದ್ಧರಲ್ಲದೆ ಪಕ್ಕವಾದ್ಯಗಾರರಾಗೂ ಬಹು ಬೇಡಿಕೆಯುಳ್ಳವರು.ಕಾನಡ ರಾಗದ ನಾಂದಿಯೇ ಆಹ್ಲಾದಕರ. `ನಾದಸುಧಾ~ ನಂತರ ಒಂದು ದಿವಿನಾದ ಸಂಗೀತ ವಾತಾವರಣ ಸೃಷ್ಟಿಯಾಯಿತು. ಸಾರಮತಿ ರಾಗವನ್ನು ಒಂದೆರಡು ಆವರ್ತಗಳ ಹಿನ್ನೆಲೆ ಹಾಕಿ ನಿರೀಕ್ಷಿಸಿದ್ದಂತೆ `ಮೋಕ್ಷಮುಗಲದಾ~ ಕೀರ್ತನೆ ತೆಗೆದುಕೊಂಡರು. ಸಂತ ತ್ಯಾಗರಾಜರ ಪ್ರಸಿದ್ಧ ಕೃತಿಗಳಲ್ಲಿ ಇದೂ ಒಂದು.`ಪ್ರಣವನಾದವು ಪ್ರಾಣಾಗ್ನಿ~ ಸಂಯೋಗದಿಂದ ಸಪ್ತ ಸ್ವರಗಳಾಗಿ ನಾಭಿ, ಹೃದಯ ಕಂಠಗಳನ್ನು ಮುಟ್ಟಿ ಪ್ರಕಟವಾಗುವುದು. ಸದ್ಭಕ್ತಿ ಸಂಗೀತವು ಸಾಕ್ಷಾತ್ ಮುಕ್ತಿಗೆ ಕಾರಣ. `ನಾದಾನುಭವ ಮುಕ್ತಿಸಾಧಕ~ ಎಂಬ ಗಹನವಾದ ಅರ್ಥವುಳ್ಳ ಕೀರ್ತನೆ ಸಂದರ್ಭಕ್ಕೆ ಬಹು ಉಚಿತವಾಗಿತ್ತು.

 

ದೇವಿಯ ಮೇಲಿನ ಗಾಢ ಕೃತಿ `ಅನ್ನಪೂರ್ಣೆ ವಿಶಾಲಾಕ್ಷಿ~ಗೆ ನಾಗರಾಜ್ ನುಡಿಸಿದ ಕಿರು ಆಲಾಪನೆ ಬಲು ಪರಿಣಾಮಕಾರಿ. ಹಳೆಯ ಮೈಸೂರಿನಲ್ಲಿ ತುಂಬ ಬಳಕೆಯಲ್ಲಿದ್ದ `ಸರೋಜದಳನೇತ್ರಿ~ ಇಂದು ಅಷ್ಟಾಗಿ ಕೇಳಿ ಬರುತ್ತಿಲ್ಲ.ದೇವಿಯ ಮೇಲಿನ ಕೃತಿಯನ್ನು ಆಲಾಪನೆ, ನೆರವಲ್, ಸ್ವರ ಪ್ರಸ್ತಾರಗಳಿಂದ ಹೊಮ್ಮಿಸಿದರು. ವಾದ್ಯದ ಮೇಲೆ ತಮಗಿರುವ ಪ್ರಭುತ್ವ, ಸಾಧನೆಗಳಿಂದ ಮೈಗೂಡಿದ ಸುನಾದ ಹಾಗೂ ಪ್ರತಿ ಸ್ವರವನ್ನು ಬೆಳಗಿಸಬಲ್ಲ ಕೈ ಚಳಕಗಳಿಂದ ಯುಗಳ ಪಿಟೀಲು ಕೇಳುಗರ ಮನ ತುಂಬಿತು.

 

ಕೊನೆಯ ಭಕ್ತಿ ರಚನೆಯೂ ಹಸನು. ಯಾವುದನ್ನೂ ಅತಿಯಾಗಿಸದ ಹಿತಮಿತ ವಾದನ. ಸುನಾದ ಹಾಗೂ ಮಿಂಚಿನ ಸಂಗತಿ ಮತ್ತು ರಂಜನೀಯ ನಿರೂಪಣೆ. ಹಿರಿಯ ಲಯವಾದ್ಯಗಾರ ಭಕ್ತವತ್ಸಲ ಸಂಯಮಪೂರ್ಣವಾಗಿ ನುಡಿಸಿದರೂ ವಿನಿಕೆಯ ಕಾವನ್ನು ಹಿಡಿದಿಟ್ಟುಕೊಳ್ಳುತ್ತಾ ಸಾಗಿದ ಬಗೆ ಅನುಕರಣೀಯ. ವ್ಯಾಸವಿಠಲ ಖಂಜರಿಯಲ್ಲಿ ನೀಡಿದ ಅನುಸರಣೆ, ರಂಜನೀಯ.ಗಾಢ ಪರಿಣಾಮದ ವ್ಯಾಖ್ಯಾನ, ವಾಚನ

ಕಳೆದ ವಾರ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಒಂದು ವಿಶೇಷ ಕಾರ್ಯಕ್ರಮ. ಸಂತ ಶಿಶುನಾಳ ಶರೀಫರ ಪದಗಳನ್ನು ಹಿರಿಯರಾದ ಗುರುರಾಜ ಕರ್ಜಗಿ ವ್ಯಾಖ್ಯಾನಿಸಿದರು. ಪ್ರಾರಂಭಕ್ಕೆ ಶರೀಫರ ಜೀವನದ ಮೇಲೆ ಬೆಳಕು ಚೆಲ್ಲಿದರು.   ಹರಿದಾಸರು, ಡಿ.ವಿ.ಜಿ. (ಮಂಕುತಿಮ್ಮನ ಕಗ್ಗ)   ಮುಂತಾದವರ ಉಕ್ತಿಗಳನ್ನು ಸಂದರ್ಭೋಚಿತವಾಗಿ ಉದಾಹರಿಸುತ್ತಾ ಅರ್ಥೈಸಿದ ಬಗೆ ಸ್ವಾರಸ್ಯವಾಗಿತ್ತು. ಗೂಡಾರ್ಥಗಳನ್ನು ತಿಳಿಯಾಗಿ ವಿವರಿಸಿ, ತಮ್ಮ ಸಹಜ ನುಡಿಗಳಿಂದ ಶ್ರೋತೃಗಳನ್ನು ಹಿಡಿದಿಟ್ಟುಕೊಂಡರು.

 

ಕುದುರೆಯ ಸ್ವಭಾವ, ಗುರುಶಿಷ್ಯ ಸಂಬಂಧ ಮುಂತಾದವುಗಳನ್ನು ಹೇಳಿದ ಬಗೆಯಂತೂ ರಸವತ್ತಾಗಿತ್ತು. ವ್ಯಾಖ್ಯಾನಕ್ಕೆ ತಕ್ಕಂತೆ ಗಾಯನವೂ ಹೊಮ್ಮಿತು. ಪರಿಚಿತ ಗಾಯಕಿ ಸ್ಮಿತಾ ಬೆಳ್ಳೂರು ಶರೀಫರ ಪದಗಳನ್ನು ಮಧುರವಾಗಿ ಹಾಡಿ, ಕಾರ್ಯಕ್ರಮಕ್ಕೆ ಇಂಬುಕೊಟ್ಟರು.

 

ಭೂಪಾಲಿ ರಾಗದಲ್ಲಿ `ಬಿದ್ದೀಯಜಿ ಮುದುಕಿ~ ಹಾಗೂ ಪೀಲುನಲ್ಲಿ `ಎಂಥ ಮೋಜಿನ ಕುದುರೆ~ ಹಾಡಿದ್ದು ಸ್ವಾದಿಷ್ಟವಾಗಿತ್ತು. ಕೀಬೋರ್ಡ್‌ನಲ್ಲಿ ಜಯರಾಂ, ತಬಲದಲ್ಲಿ ಆದರ್ಶ್ ಷಣಾಯ್ ಮತ್ತು ರಿದಂ ಪ್ಯಾಡ್‌ನಲ್ಲಿ ನಾಗೇಂದ್ರ ಪ್ರಸಾದ್- ಹಿತಮಿತವಾಗಿ ನುಡಿಸಿ, ನೆರವಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry