ತಂದೆ,ಪುತ್ರಿ ಅಸ್ವಸ್ಥ; ಆಘಾತದಿಂದ ತಾಯಿ ಸಾವು

7

ತಂದೆ,ಪುತ್ರಿ ಅಸ್ವಸ್ಥ; ಆಘಾತದಿಂದ ತಾಯಿ ಸಾವು

Published:
Updated:
ತಂದೆ,ಪುತ್ರಿ ಅಸ್ವಸ್ಥ; ಆಘಾತದಿಂದ ತಾಯಿ ಸಾವು

ವಿಜಾಪುರ: ಕಣ್ತಪ್ಪಿನಿಂದ ಚಹಾ ಪುಡಿ ಬದಲಾಗಿ ಹೇನಿನ ಪುಡಿ ಹಾಕಿ ಮಾಡಿದ ಚಹಾ ಕುಡಿದು ತಂದೆ-ಮಗಳು ಒದ್ದಾಡುತ್ತಿರುವುದನ್ನು ಕಂಡು ತಾಯಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಿಂದಗಿ ತಾಲ್ಲೂಕು ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಬನ್ನವ್ವ ತಿಪ್ಪೆಗೋಳ (62) ಮೃತಪಟ್ಟ ಮಹಿಳೆ. ಹೇನಿನ ಪುಡಿಯಿಂದ ಮಾಡಿದ ಚಹಾ ಕುಡಿದು ಅಸ್ವಸ್ಥಗೊಂಡಿರುವ ಬನ್ನವ್ವಳ ಪುತ್ರಿ ಲಕ್ಷ್ಮಿಬಾಯಿ (30) ಹಾಗೂ ಪತಿ ತಿಪ್ಪಣ್ಣ (70) ಅವರನ್ನು ಇಲ್ಲಿಯ ವಾತ್ಸಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.‘ಶುಕ್ರವಾರ ಸಂಜೆ ತಂದೆ ಮನೆಗೆ ಬಂದ ನಂತರ ಲಕ್ಷ್ಮಿಬಾಯಿ ಚಹಾ ಮಾಡಿದಳು. ಗಡಿಬಿಡಿಯಲ್ಲಿ ಚಹಾಪುಡಿಯ ಬದಲಾಗಿ ಹೇನಿನ ಪುಡಿಯನ್ನು ಹಾಕಿದಳು. ಆ ಚಹಾವನ್ನು ತಂದೆ-ಮಗಳಿಬ್ಬರೂ  ಸೇವಿಸಿದರು. ಸ್ವಲ್ಪ ಹೊತ್ತಿನಲ್ಲಿ ಇಬ್ಬರೂ ಬಿದ್ದು ಒದ್ದಾಡಲಾರಂಭಿಸಿದರು. ಆಗ ತಾಯಿ ಬನ್ನವ್ವ ಕೇಳಿದಾಗ ವಿಷಯ ತಿಳಿಸಿದರು. ಪತಿ-ಮಗಳಿಬ್ಬರೂ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಬನ್ನವ್ವ ಆಘಾತಗೊಂಡಳು. ಆಕೆಯನ್ನು ಸಿಂದಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೃದಯಾಘಾತದಿಂದ ಆಕೆ ಮೃತಪಟ್ಟಳು’ ಎಂದು ಇಂಡಿಯ ಡಿವೈಎಸ್ಪಿ ಎಂ. ಮುತ್ತುರಾಜ್ ತಿಳಿಸಿದ್ದಾರೆ.ಬಳಗಾನೂರ ಗ್ರಾಮದ ಕಡುಬಡವರಾದ ಬನ್ನವ್ವ ಅವರದ್ದು ಚಿಕ್ಕ ಮನೆ. ಪ್ರತ್ಯೇಕ ಅಡುಗೆ ಕೋಣೆಯೂ ಇಲ್ಲ. ಅಡುಗೆ ಸಾಮಾನು, ಕ್ರಿಮಿನಾಶಕಗಳನ್ನೆಲ್ಲ ಒಂದೇ ಕಡೆಗೆ ಇಟ್ಟುಕೊಂಡಿದ್ದಾರೆ.ಹೇನಿನ ಪುಡಿ ಹಾಗೂ ಚಹಾ ಪುಡಿಯ ಬಣ್ಣ ಒಂದೇ ಇದ್ದು, ನೋಡಲೂ ಎರಡೂ ಒಂದೇ ತೆರನಾಗಿವೆ. ಹೀಗಾಗಿ ಗಡಿಬಿಡಿಯಲ್ಲಿ ಲಕ್ಷ್ಮಿಬಾಯಿ, ಚಹಾಪುಡಿಯ ಬದಲಾಗಿ ಹೇನಿನ ಪುಡಿ ಹಾಕಿದ್ದಾಳೆ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry