ತಂದೆಯನ್ನು ಮಗ ಬದಲಿಸಿಬಿಟ್ಟ...

7

ತಂದೆಯನ್ನು ಮಗ ಬದಲಿಸಿಬಿಟ್ಟ...

Published:
Updated:

ವಾರಣಾಸಿ: `ಬೇಟೇ ನೇ ಪಿತಾ ಕೋ ಬದಲ್‌ದಿಯಾ~ (ಮಗ ತಂದೆಯನ್ನು ಬದಲಿಸಿಬಿಟ್ಟ) ಎಂದು ಹೇಳಿದ ಸುಮಾರು ಅರ‌್ವತ್ತು ವರ್ಷದ ಎಸ್‌ಪಿ ಬೆಂಬಲಿಗ ಹರಿಸಿಂಗ್ ಕಣ್ಣಲ್ಲಿ ಅಖಿಲೇಶ್ ಯಾದವ್ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು. ಭಾನುವಾರ ಸಂಜೆ ಇಲ್ಲಿಗೆ ಸಮೀಪದ ಜೌನ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಅಖಿಲೇಶ್ ಭಾಷಣ ಕೇಳುತ್ತಿದ್ದ ಸಿಂಗ್ ಅವರನ್ನು ಮಾತಿಗೆಳೆದಾಗ ಅವರಿಂದ ಮೊದಲು ಹೊರಟ ಮಾತುಗಳೇ ಇವು. ಸಿಂಗ್ ಒಬ್ಬರೇ ಅಲ್ಲ, ಗೊಣಗಾಡುತ್ತಿರುವ ಸಮಾಜವಾದಿ ಪಕ್ಷದ ಒಂದಷ್ಟು ಹಿರಿತಲೆಗಳನ್ನು ಬಿಟ್ಟರೆ ಆ ಪಕ್ಷದ ಹೆಚ್ಚಿನ ಕಾರ್ಯಕರ್ತರು ಇದೇ ಮಾತನ್ನು ಹೇಳುತ್ತಿದ್ದಾರೆ.ಭಾರತದಲ್ಲಿ ಮಕ್ಕಳಿಂದಾಗಿ ರಾಜಕಾರಣವನ್ನು ಹಾಳುಮಾಡಿಕೊಂಡ ರಾಜಕಾರಣಿಗಳ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಇಂದಿರಾಗಾಂಧಿಯವರಿಂದ ಹಿಡಿದು ಬಿ.ಎಸ್.ಯಡಿಯೂರಪ್ಪನವರ ವರೆಗೆ ಹಲವು ಖ್ಯಾತನಾಮರ ಹೆಸರುಗಳಿವೆ. ಆದರೆ ದಾರಿ ತಪ್ಪಿರುವ ತಂದೆಯನ್ನು ಸರಿದಾರಿಗೆ ತಂದ ಮಕ್ಕಳ ಉದಾಹರಣೆಗಳು ರಾಜಕೀಯ ಕ್ಷೇತ್ರದಲ್ಲಿ ಅಪರೂಪ. ಎರಡೂವರೆ ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂಸಿಂಗ್ ಯಾದವ್ ಅವರ ರಾಜಕೀಯ ಮುಗಿದೇ ಹೋಯಿತೇನೋ ಎಂಬ ಸ್ಥಿತಿಯಲ್ಲಿತ್ತು. `ವೋ ಸಮಾಜವಾದಿ ನಹೀಂ, ಮಜವಾದಿ ಹೈ~ ಎಂದು ಅವರ ವಿರೋಧಿಗಳು ಮಾತ್ರವಲ್ಲ ಅವರ ಪಕ್ಷದ ಕಾರ್ಯಕರ್ತರೇ ಗೇಲಿ ಮಾಡುತ್ತಿದ್ದರು.ಅವರಿಗೆ ಅಮರ್‌ಸಿಂಗ್ ಎಂಬ `ರಾಜಕೀಯ ದಲ್ಲಾಳಿ~ಯೇ ಸರ್ವಸ್ವ ಆಗಿದ್ದರು, ಪಕ್ಷದ ಸಭೆಗಳಿಗಿಂತ ಹೆಚ್ಚು ಬಾಲಿವುಡ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ನಟ ಅಮಿತಾಬ್ ಬಚ್ಚನ್ ಮೂಲಕ ಜಾಹೀರಾತು ನೀಡಿದರೆ ಚುನಾವಣೆ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದರು. ಈ ದಾರಿತಪ್ಪಿದ ಸ್ಥಿತಿಯಲ್ಲಿಯೇ ದಶಕಗಳ ಕಾಲ ಜತೆಯಲ್ಲಿದ್ದ ಅಜಮ್‌ಖಾನ್ ದೂರವಾಗಿದ್ದರು. ತಮ್ಮ ಪಕ್ಷದ ಆಧಾರಸ್ಥಂಭಗಳಾಗಿದ್ದ ಮುಸ್ಲಿಮರು ದ್ವೇಷಿಸುವ ಬಿಜೆಪಿ ನಾಯಕ ಕಲ್ಯಾಣ್‌ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಮುಲಾಯಂ ಅವರ ಹಳೆಯ ಸಂಗಾತಿಗಳು ಎದುರು ಮಾತನಾಡಲೂ ಆಗದೆ ಕಣ್ಣುಮುಚ್ಚಿಕೊಂಡು ತೆಪ್ಪಗಿದ್ದರು. ಆಗಲೇ ಮಗ ಅಖಿಲೇಶ್ ಯಾದವ್ ಪ್ರವೇಶವಾಗಿದ್ದು. ಕಳೆದ ಹದಿಮೂರು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಅಖಿಲೇಶ್ ಪಕ್ಷದ ವ್ಯವಹಾರಗಳಲ್ಲಿ ನೇರ ಪಾತ್ರ ವಹಿಸದೆ ಯುವವಿಭಾಗವನ್ನಷ್ಟೇ ನೋಡಿಕೊಂಡಿದ್ದರು.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತುಹೋದ ಮುಲಾಯಂಸಿಂಗ್ ಅವರಿಗೆ ರಾಜಕೀಯವಾಗಿ ಮುಳುಗಿಯೇ ಹೋಗುತ್ತೇನೋ ಏನೋ ಎಂಬ ಭೀತಿ ಹುಟ್ಟಿಕೊಂಡಾಗ ಬೇರೆ ಗತಿ ಇಲ್ಲದೆ ಇರುವ ಒಬ್ಬನೇ ಮಗನ ಹೆಗಲು ಹಿಡಿದುಬಿಟ್ಟರು. ಮಗ ಕೈಬಿಡಲಿಲ್ಲ.ಮೂರು ತಿಂಗಳ ಹಿಂದೆಯೇ `ಕ್ರಾಂತಿರಥ~ದ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದ ಅಖಿಲೇಶ್ ಚುನಾವಣೆ ಘೋಷಣೆಯಾಗುವ ಮೊದಲೇ 300 ಕ್ಷೇತ್ರಗಳನ್ನು ಸುತ್ತಿ ಮುಗಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಪೂರ್ವ ಉತ್ತರಪ್ರದೇಶದ ಗಾಜಿಪುರದಲ್ಲಿ ಅಖಿಲೇಶ್ ಭಾಷಣ ಕೇಳಿದ್ದಾಗ ತಂದೆಗೂ ಮಗನಿಗೂ ಮಾತುಗಾರಿಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದು ನನಗೂ ಅನಿಸಿತ್ತು. ಅಂದು ಕಂಡ ಲಿಖಿತ ಭಾಷಣದ ಬಲದಲ್ಲಿ ಮಾತನಾಡುತ್ತಿದ್ದ, ಶಬ್ದಗಳಿಗಾಗಿ ತಡಕಾಡುತ್ತಿದ್ದ ಅಖಿಲೇಶ್‌ಗೂ, ಈಗ ಕಾಣುತ್ತಿರುವ ಅಖಿಲೇಶ್‌ಗೂ ಹೋಲಿಕೆಯೇ ಇಲ್ಲ. ಎಲ್ಲೂ ತಡವರಿಸದೆ ನಿರರ್ಗಳವಾಗಿ ಸ್ಪಷ್ಟ, ನೇರ ಮಾತುಗಳನ್ನಾಡುತ್ತಿರುವ ಅಖಿಲೇಶ್‌ಗೆ ಪಕ್ಷದ ಅಭ್ಯರ್ಥಿಗಳಿಂದ ಪ್ರಚಾರಕ್ಕಾಗಿ ತಂದೆಗಿಂತಲೂ ಹೆಚ್ಚಿನ ಬೇಡಿಕೆ ಇದೆಯಂತೆ.ಪಕ್ಷದ ರಾಜ್ಯ ಅಧ್ಯಕ್ಷನಾದ ನಂತರ ಅಖಿಲೇಶ್ ಮೊದಲು ಮಾಡಿದ ಕೆಲಸ ಎಲ್ಲ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು `ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು~ ಎನ್ನುವ ಆದೇಶ ನೀಡಿದ್ದು. ಡಿ.ಪಿ.ಯಾದವ್ ಎಂಬ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಅಜಮ್‌ಖಾನ್‌ನಂತಹ ಪಕ್ಷದ ಹಿರಿಯರೇ ಒತ್ತಡ ಹಾಕಿದರೂ ಅಖಿಲೇಶ್ ಒಪ್ಪಲೇ ಇಲ್ಲ. ಯಾದವ್ ಪರ ಮಾತನಾಡಿದ ಮೋಹನ್‌ಸಿಂಗ್ ಎಂಬ ಮುಲಾಯಂ ಅವರ ದಶಕಗಳ ಕಾಲದ ಗೆಳೆಯನನ್ನು ಪಕ್ಷದ ವಕ್ತಾರನ ಸ್ಥಾನದಿಂದಲೇ ಕಿತ್ತುಹಾಕಿಬಿಟ್ಟರು.ಟಿಕೆಟ್ ವಿತರಣೆಯಲ್ಲಿಯೂ ಮುಖ್ಯಪಾತ್ರ ವಹಿಸಿರುವ ಅಖಿಲೇಶ್ ಬಹಳಷ್ಟು ಹೊಸ ಮತ್ತು ಯುವ ಮುಖಗಳಿಗೆ ಅವಕಾಶ ನೀಡಿದ್ದಾರೆ. ಆದರೆ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ದೂರ ಇಡಲು ಅವರಿಗೆ ಸಾಧ್ಯವಾಗಿಲ್ಲ. `ಪಾರ್ಟಿ ಮೇ ನೇತಾಜಿ ಕೀ ಹೀ ಚಲ್ತಿ ಹೈ ಲೇಕಿನ್ ನೇತಾಜಿ ಅಖಿಲೇಶ್ ಕೀ ಸುನ್ತಾ ಹೈ~ (ಪಕ್ಷದಲ್ಲಿ ನೇತಾಜಿಯ ಮಾತೇ ನಡೆಯುವುದು, ಆದರೆ ನೇತಾಜಿ ಅಖಿಲೇಶ್ ಮಾತನ್ನು ಕೇಳುತ್ತಾರೆ) ಎನ್ನುತ್ತಿದ್ದಾರೆ ಕಾರ್ಯಕರ್ತರು.ಅಖಿಲೇಶ್ ಬದಲಾವಣೆ ತಂದದ್ದು ಕೇವಲ ಅಪ್ಪನಲ್ಲಿ ಮಾತ್ರ ಅಲ್ಲ, ಇಂಗ್ಲೀಷ್ ಮತ್ತು ಕಂಪ್ಯೂಟರ್ ಬಳಕೆಯನ್ನು ವಿರೋಧಿಸುತ್ತಾ ಬಂದ ಸಮಾಜವಾದಿ ಪಕ್ಷವನ್ನು ಕೂಡಾ ಪುರಾತನ ಆಲೋಚನೆಗಳಿಂದ ಹೊರಗೆ ತಂದು ಆಧುನಿಕ ಕಾಲಕ್ಕೆ ತಕ್ಕಂತೆ ಪರಿವರ್ತಿಸುವ ಪ್ರಯತ್ನ ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ನೀಡುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಮಾಡಿರುವ ಘೋಷಣೆಯೇ ಇದಕ್ಕೆ ಸಾಕ್ಷಿ.

ಎರಡು ವರ್ಷಗಳ ಹಿಂದೆ ಈ ಸಲಹೆಯನ್ನು ಯಾರಾದರೂ ನೀಡಿದ್ದರೆ ಅಂತಹವರನ್ನು  ಮುಲಾಯಂಸಿಂಗ್ ಪಕ್ಷದಿಂದ ಹೊರದೂಡುತ್ತಿದ್ದರೇನೋ? ಆದರೆ ಅಖಿಲೇಶ್ ಸಲಹೆಗೆ ನೇತಾಜಿ ತಲೆದೂಗಿದ್ದಾರೆ. ಆದರೆ ಲ್ಯಾಪ್‌ಟಾಪ್‌ಗಳಲ್ಲಿ ಹಿಂದಿ ಮಾತ್ರ ಇರಬೇಕೆಂದು ಷರತ್ತು ಹಾಕಿದ್ದಾರಂತೆ. ಸದ್ಯಕ್ಕೆ ಅಖಿಲೇಶ್ ತಲೆಯಾಡಿಸಿದ್ದಾರೆ. ಅಪ್ಪನನ್ನು ಹೇಗೆ ಒಪ್ಪಿಸಬೇಕೆಂದು ಮಗನಿಗೂ ಈಗ ಗೊತ್ತಾಗಿ ಹೋಗಿದೆ. ಮಗನ ಮಾತು ಕೇಳುವ ದರಲ್ಲಿಯೇ ಲಾಭ ಇದೆ ಎಂದು ಸುಮಾರು 50 ವರ್ಷಗಳನ್ನು ರಾಜಕೀಯ ಅಖಾಡ ದಲ್ಲಿಯೇ ಕಳೆದ ಕುಸ್ತಿಪಟು ಮುಲಾಯಂ ಂಗ್ ಅವರಿಗೂ ಅರ್ಥವಾಗಿದೆ.ಛೋಟಾ ನೇತಾಜಿ~ ಸರಿಯಾದ ಸಮಯಕ್ಕೆ ಬಂದು ಜವಾಬ್ದಾರಿ ವಹಿಸಿಕೊಳ್ಳದೆ ಇದ್ದಿದ್ದರೆ ಸಮಾಜವಾದಿ ಪಕ್ಷ  ಈ ಚುನಾವಣೆಯಲ್ಲಿ ಮೂಲೆಗುಂಪಾಗಿ ಹೋಗುತ್ತಿತ್ತೋ ಏನೋ? ಯುವ ಮತದಾರರನ್ನು ಸೆಳೆಯುವುದು ಹೇಗೆ ಎನ್ನುವುದೇ  ಇಂದಿನ ಎಲ್ಲ ರಾಜಕೀಯ ಪಕ್ಷಗಳ ಮುಂದೆ ಇರುವ ಪ್ರಮುಖ ಸವಾಲು. 30ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು ಶೇಕಡಾ 60ರಷ್ಟಿರುವ ಉತ್ತರಪ್ರದೇಶದ ಚುನಾವಣಾ ಕಣದಲ್ಲಿರುವ ಪಕ್ಷಗಳ ಮುಂದೆಯೂ ಈ ಸವಾಲಿದೆ. ಬಿಎಸ್‌ಪಿ ಮತ್ತು ಬಿಜೆಪಿಗಳೆರಡರಲ್ಲಿಯೂ ಈ ಸವಾಲನ್ನು ಎದುರಿಸಬಲ್ಲ ಯುವನಾಯಕರಿಲ್ಲ. ಇರುವವರೊಬ್ಬರೇ ರಾಹುಲ್‌ಗಾಂಧಿ ಎಂದು ಎದೆಬಡಿದುಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರ ಎದುರು ಕನಿಷ್ಠ ಉತ್ತರ ಪ್ರದೇಶದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿ ಅಖಿಲೇಶ್ ಯಾದವ್ ಕಾಣಿಸಿಕೊಂಡಿದ್ದಾರೆ.ಈ ರಾಜ್ಯದ  ಯುವಮತದಾರರ ಉತ್ಸಾಹ ಕಳೆದ ಎರಡು ಹಂತಗಳ ಮತದಾನದಲ್ಲಿ ವ್ಯಕ್ತವಾಗಿದೆ. ಸಾಂಪ್ರದಾಯಿಕ ರಾಜಕಾರಣದ ಹಾದಿ ಬಿಟ್ಟು ಹೊಸದಾರಿ ಹುಡುಕುತ್ತಿರುವ ರಾಹುಲ್ ಮತ್ತು ಅಖಿಲೇಶ್ ಇಬ್ಬರೂ ಈ ಯುವಸಮುದಾಯದ ಮೇಲೆ ಕಣ್ಣಿಟ್ಟಿದ್ದಾರೆ. ಯುವಮತದಾರರನ್ನು ಗುರಿಯಾಗಿಟ್ಟುಕೊಂಡ ಹೊಸ ರಾಜಕಾರಣ ಕುತೂಹಲಕಾರಿಯಾಗಿದೆ. ರಾಷ್ಟ್ರರಾಜಕಾರಣದ ಬದಲಾವಣೆಗೆ ದಿಕ್ಕು ತೋರಿಸುತ್ತಾ ಬಂದ ಉತ್ತರಪ್ರದೇಶ ಈ ಬಾರಿ ಯುವರಾಜಕಾರಣದ ಹೊಸಶಖೆಗೆ ಚಾಲನೆ ನೀಡಲಿದೆಯೇ?  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry