ಭಾನುವಾರ, ನವೆಂಬರ್ 17, 2019
27 °C

ತಂದೆಯ ಕೊಳಲ ನಾದಕ್ಕೆ ಮಗನ ಚಿತ್ರದ ಚೌಕಟ್ಟು!

Published:
Updated:

`ಸಂಗೀತವನ್ನೇ ಉಸಿರಾಡುವಷ್ಟು ಒಲವು  ನಮ್ಮಳಗಿರಬೇಕು. ಸಂಗೀತ ಇಂಥದ್ದೇ ಸಾಧನಕ್ಕೆಂದು ಸೀಮಿತವಾಗಬಾರದು. ಅದು ಅಂಕೆಯನ್ನು ಎಂದಿಗೂ ಪ್ರೇರೇಪಿಸುವುದಿಲ್ಲ'- ಹೀಗೆಂದವರು ಬಾನ್ಸುರಿ ಗುರು ಎಂದೇ ಪ್ರಸಿದ್ಧರಾದ ಪಂಡಿತ್ ಹರಿಪ್ರಸಾದ್ ಚೌರಾಸಿಯಾ.ಬದುಕಿನ ಪ್ರತಿ ತಿರುವನ್ನೂ ಸಂಗೀತದೊಂದಿಗೇ ಸ್ವಾಗತಿಸಿ, ಕೊಳಲಿನ ನಾದವನ್ನೇ ಮೈಗೂಡಿಸಿಕೊಂಡ ಹರಿಪ್ರಸಾದ್ ಅವರ ಜೀವನ ಚರಿತ್ರೆಯನ್ನು ಅವರ ಪುತ್ರ ರಾಜೀವ್ ಚೌರಾಸಿಯಾ ಕಿರುಚಿತ್ರವಾಗಿ ಹೊರತಂದಿದ್ದಾರೆ. ಬಾನ್ಸುರಿ ನಾದದೊಂದಿಗೆ ಬೆರೆತ ಅವರ ಜೀವನದ ಹಲವು ಮಜಲುಗಳು ಈ ಕಿರುಚಿತ್ರದಲ್ಲಿ ಹಾಸುಹೊಕ್ಕಾಗಿದೆಯಂತೆ. ಕಾಡಿನಲ್ಲಿನ ಬಿದಿರಿನಿಂದ ಹೊಮ್ಮಿದ ಸಂಗೀತದ ಹೊನಲನ್ನು ಇಡೀ ಜಗತ್ತಿಗೆ ಅವರು ಪಸರಿಸಿದ ಪರಿ ಇಲ್ಲಿ ಬಿಂಬಿತವಾಗಿದೆ. `ಬಾನ್ಸುರಿ ಗುರು' ಎಂಬ ಈ ಕಿರುಚಿತ್ರ ಏಪ್ರಿಲ್ 12 ರಂದು ನಗರದ್ಲ್ಲಲಿ ಬಿಡುಗಡೆಯಾಗಲಿದ್ದು, ಈ ಬಗ್ಗೆ ರಾಜೀವ್ ಚೌರಾಸಿಯಾ ಅವರು ಹಂಚಿಕೊಂಡ ಮಾತುಗಳಿಲ್ಲಿವೆ...ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ನಾದವೆಂದರೆ...

ಪಂಡಿತ್ ಅವರ ಸಂಗೀತ ತಂಗಾಳಿಯಂತೆ. ನಾದದಲೆಯಲ್ಲಿ ಮನಸ್ಸನ್ನು ತೋಯಿಸಬಲ್ಲ ಧನಾತ್ಮಕ ಅಂಶ ಸಂಗೀತಕ್ಕೆ ಇರುತ್ತದೆ ಎಂಬುದು ಅವರಿಂದ ನಿರೂಪಿತಗೊಂಡಿತು. ಅವರ ಮನಸ್ಸು, ಆತ್ಮ, ದೇಹದ ಕಣ ಕಣದಲ್ಲೂ ಬಾನ್ಸುರಿಯ ಸಂಗೀತವೇ ಹರಿಯುತ್ತಿದೆ.`ಬಾನ್ಸುರಿ ಗುರು' ಹೊರತರಲು ನಿಮಗೆ ಸ್ಫೂರ್ತಿ ಏನು?

ನನ್ನ ತಂದೆಯೇ ನನಗೆ ಸ್ಫೂರ್ತಿ. ನನ್ನ ತಂದೆ ಹರಿಪ್ರಸಾದ್ ಅವರ ನಾದವನ್ನು ಆರಾಧಿಸುವ, ಅವರನ್ನು ಪ್ರೀತಿಯಿಂದ ಕಾಣುವ ಮಂದಿಯನ್ನು ನೋಡುತ್ತಾ ಬೆಳೆದವನು ನಾನು. ಅವರ ಸಂಗೀತ ಕಲ್ಲು ಮನಸ್ಸನ್ನೂ ಕರಗಿಸುವಂಥದ್ದು. ಇನ್ನು ನನ್ನನ್ನು ಬಿಟ್ಟೀತೆ? ಈ ಚಿತ್ರಕ್ಕೆ ಅವರ ಸಂಗೀತ ಸಾಧನೆಯೇ ತಳಪಾಯ.ಈ ಚಿತ್ರದ ಹಾದಿಯಲ್ಲಿ ಕಂಡ ಸವಾಲುಗಳು?

ಈ ಕಿರುಚಿತ್ರವನ್ನು ಮಾಡಿ ಮುಗಿಸಿದಾಗ ಸವಾಲು ಎದುರಾಯಿತು. 100 ಗಂಟೆಯ ಚಿತ್ರೀಕರಣವನ್ನು 60 ನಿಮಿಷಕ್ಕೆ ಇಳಿಸುವಾಗ ತುಂಬಾ ಗೊಂದಲವಾಯಿತು. ಯಾವುದನ್ನು ತೆಗೆಯುವುದು, ಯಾವುದನ್ನು ಉಳಿಸುವುದು ಎಂಬುದೇ ದೊಡ್ಡ ಸಮಸ್ಯೆ ಎನಿಸಿತು. ಎಲ್ಲಾ ಅಂಶಗಳೂ ಪ್ರಮುಖವಾಗಿದ್ದವು. ಅಷ್ಟೇ ಅಲ್ಲ, ನನ್ನ ತಂದೆಯ ಸಮಯಕ್ಕೆ ತಕ್ಕಂತೆ ಚಿತ್ರೀಕರಣ ನಡೆಸುವುದೂ ಒಂದು ರೀತಿ ಸವಾಲಾಗಿತ್ತು. ಇವೆಲ್ಲವುಗಳ ಮಧ್ಯೆ ಫಿಲ್ಮ್ ಡಿವಿಷನ್‌ನ ನಿರ್ದೇಶಕರು ಬದಲಾಗಿದ್ದರು. ನಾಲ್ಕು ತಿಂಗಳ ಕಾಲ ಚಿತ್ರ ನಿಂತ ನೀರಿನಂತಾಗಿ ಏನೂ ನಿರ್ಧಾರ ತೆಗೆದುಕೊಳ್ಳದಂತಾಗಿತ್ತು.ಚಿತ್ರ ತೆಗೆಯುವಾಗಿನ ಅನುಭವಗಳು ಹೇಗಿದ್ದವು?

ತಂದೆಯ ಬಗ್ಗೆ ಚಿತ್ರ ತೆಗೆಯುವ ಅದೃಷ್ಟ ನನ್ನದಾಗಿದ್ದು ಅದ್ಭುತ ಅನುಭವ. ಆದರೆ ಅವರು ನನ್ನ ತಂದೆ ಎನ್ನುವುದಕ್ಕಿಂತ ಹೆಚ್ಚಾಗಿ ಇಡೀ ಜಗತ್ತಿಗೇ ಬೇಕಿರುವ ವ್ಯಕ್ತಿ ಎನ್ನುವುದೇ ಇನ್ನೂ ಹೆಚ್ಚು ಆನಂದ ನೀಡಿದ್ದು. ಈ ಚಿತ್ರ ತೆಗೆಯುತ್ತಿದ್ದಾಗ ಹಲವು ಜನರನ್ನು ಭೇಟಿ ಮಾಡಿದ್ದೆ. ಆ ಸಮಯದಲ್ಲೆಲ್ಲಾ ತಂದೆ ಬಗ್ಗೆ ತುಂಬಾ ಭಾವುಕನಾಗಿದ್ದೆ. ನನ್ನ ಜೀವನದಲ್ಲಿ ಅವರ ಬಗ್ಗೆ ಹುದುಗಿದ್ದ ಅವ್ಯಕ್ತ ಭಾವ, ಹೇಳದೇ ಉಳಿಸಿದ್ದ ಅದೆಷ್ಟೋ ಮಾತುಗಳನ್ನು ಈ ಚಿತ್ರ ಹೊರಗೆಡವಿತು. ಅಷ್ಟೇ ಅಲ್ಲ, ಮಮತೆಯ ದಾಸ್ಯ ಎಷ್ಟು ಚೆಂದ ಎಂದೂ ಅರಿತುಕೊಂಡೆ.ನಿಮ್ಮ ಸಂಗೀತಾಸಕ್ತಿ?

ಸಂಗೀತ ನನ್ನ ರಕ್ತದಲ್ಲೇ ಇದೆ. ನಾನು ಸಿತಾರ್ ಅಭ್ಯಾಸ ಮಾಡಿದ್ದೇನೆ. ಗಾಯನಾಭ್ಯಾಸವನ್ನೂ ಮಾಡಿದ್ದೇನೆ. ಆದರೆ ಅಪ್ಪ ಹಾಕಿದ ಆಲದ ಮರ ಎಂಬಂತೆ ಅದೇ ದಾರಿಯಲ್ಲಿ ಹೋಗುವ ಬದಲು ವಿಭಿನ್ನ ಹಾದಿ ಹಿಡಿ ಎಂಬಂತೆ ಕುಟುಂಬದವರು ಬೆಳೆಸಿದರು. ಆದ್ದರಿಂದ ಹಾದಿ ಸ್ವಲ್ಪ ಬದಲಾಯಿತು. ನಾನು ಸಂಗೀತಕ್ಕೆ ಇನ್ನೂ ಹತ್ತಿರವಾದದ್ದು ಎಂ.ಟಿ.ವಿ.ಯ ಕಾರ್ಯಕ್ರಮದಿಂದ.ಈ ಚಿತ್ರಕ್ಕೆಂದು ಯಾವ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡಿದ್ದೀರಿ?

ಹಲವು ಪ್ರಸಿದ್ಧರು ಈ ಚಿತ್ರದಲ್ಲಿ ತಂದೆ ಬಗ್ಗೆ ಮಾತನಾಡಿದ್ದಾರೆ. ಎಲ್ಲರನ್ನೂ ಸಂದರ್ಶನ ಮಾಡಿದಾಗ, ಎಲ್ಲರೂ ಭಾವುಕರಾಗಿ ಮಾತನಾಡಿದ್ದು ನನ್ನ ಪಾಲಿಗೆ ಖುಷಿ ಸಂಗತಿ.ನಿಮ್ಮ ಬೆಂಬಲಕ್ಕೆ ನಿಂತಿದ್ದವರು ಯಾರು? ಕಿರುಚಿತ್ರ ಹೊರತರಲು ತೆಗೆದುಕೊಂಡ ಸಮಯ?

ನನ್ನ ಕುಟುಂಬ ಮತ್ತು ಸ್ನೇಹಿತರು ತುಂಬಾ ಸಹಕಾರ ನೀಡಿದರು. ಕೆಲವು ವರ್ಷಗಳ ಹಿಂದೆ ನಟ ಅಮೀರ್ ಖಾನ್, ಪಂಡಿತ್ ಅವರ ಜೀವನ ಒಂದೊಳ್ಳೆ ಸಿನಿಮಾ ಆಗಬಹುದು ಎಂದಿದ್ದರು. ಶ್ಯಾಮ್ ಬೆನಗಲ್ ಅವರನ್ನೂ ನಾನಿಲ್ಲಿ ಸ್ಮರಿಸಿಕೊಳ್ಳಲೇಬೇಕು. ನನ್ನ ಈ ಚಿತ್ರಕ್ಕೆ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ಬಂದಿದ್ದು ಫಿಲ್ಮ್ ಡಿವಿಷನ್‌ನಿಂದ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದೆ. ನನ್ನ ಈ ಚಿತ್ರದ ಕನಸು ಚಿಗುರೊಡೆದು ಹೂಬಿಡಲು ಮೂರು ವರ್ಷ ತೆಗೆದುಕೊಂಡಿತು. ಆದರೆ ಚಿತ್ರೀಕರಣ ಆರು ತಿಂಗಳಿನದ್ದು.ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗದ್ದು?

ಹೇಳಬೇಕಾದ್ದು ಸಾಗರದಷ್ಟಿದೆ ಎನಿಸುತ್ತಿದೆ. ಅಷ್ಟು ದೊಡ್ಡ ವ್ಯಕ್ತಿತ್ವವನ್ನು ಕೇವಲ 60 ನಿಮಿಷಗಳಲ್ಲಿ ಹಿಡಿದಿಡುವುದು ಕಷ್ಟ.ನಿರ್ದೇಶನದಲ್ಲಿ ಅವಶ್ಯಕವಾದದ್ದು?

ಒಂದು ಚಿತ್ರ ನಿರ್ದೇಶಿಸಬೇಕಾದರೆ, ಪ್ರೇಕ್ಷಕರನ್ನು ಅದರಲ್ಲಿ ತೊಡಗಿಕೊಳ್ಳುವಂತೆ ಮಾಡಲೇಬೇಕಾದ್ದು ಅವಶ್ಯಕ. ಇಲ್ಲಿ ಪ್ರತಿಯೊಂದು ಫ್ರೇಮ್ ಕೂಡ ಗಣನೆಗೆ ಬರುತ್ತದೆ. ಮಾತು, ಸಂಗೀತ, ದೃಶ್ಯ ಎಲ್ಲವೂ ಪ್ರೇಕ್ಷಕರನ್ನು ಮುಟ್ಟಬೇಕು. ಅಂತಿಮವಾಗಿ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವಂತೆ ಮಾಡಬೇಕು. ನಾನು ನನ್ನ ಕೈಲಾದ ಮಟ್ಟಿಗೆ ಈ ಪ್ರಯತ್ನ ಮಾಡಿದ್ದೇನೆ.ನಟ ಅಮಿತಾಭ್ ಬಚ್ಚನ್ ಅವರ ನಿರೂಪಣೆ ಕುರಿತು?

ಅಮಿತಾಭ್ ಬಚ್ಚನ್ ಅವರು ನಮ್ಮ ಕುಟುಂಬಕ್ಕೆ ಸ್ನೇಹಿತರು. ಅವರೇ ಸ್ಫೂರ್ತಿ ಎನ್ನಲೂಬಹುದು. ಚಿತ್ರದ ನಿರೂಪಣೆಗೆ ಅವರು ಧ್ವನಿಯಾಗಿದ್ದು ಹೆಮ್ಮೆಯ ಸಂಗತಿ.ಸಿನಿಮಾದ ಅವಧಿ ಮತ್ತು ಭಾಷೆ? ಬೆಂಗಳೂರಿನಲ್ಲಿ ಎಲ್ಲಿ ಬಿಡುಗಡೆಯಾಗಲಿದೆ?

`ಬಾನ್ಸುರಿ ಗುರು' 60 ನಿಮಿಷಗಳ ಚಿತ್ರ. ಹಿಂದಿ ಭಾಷೆಯಲ್ಲಿದ್ದು, ಇಂಗ್ಲಿಷ್‌ನಲ್ಲಿ ಅಡಿಬರಹಗಳಿರುತ್ತವೆ. ಬೆಂಗಳೂರಿನಲ್ಲಿ ಆಯ್ದ ಪಿ.ವಿ.ಆರ್ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಪ್ರತಿಕ್ರಿಯಿಸಿ (+)