ಗುರುವಾರ , ನವೆಂಬರ್ 21, 2019
20 °C

ತಂಪು ತಂಪು ಸೌರ ಉಡುಪು!

Published:
Updated:
ತಂಪು ತಂಪು ಸೌರ ಉಡುಪು!

`ವಸಂತ ಬಂದ ಋತುಗಳ ರಾಜ ತಾ ಬಂದ

ಚಿಗುರನು ತಂದ, ಪೆಣ್ಗಳ ಕುಣಿಸುತ ನಿಂದ

ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ

ಕೂವೊ, ಜಗ್ ಜಗ್, ಪುವ್ವೀ, ಟೂವಿಟ್ಟವೊ'....ಬಿಎಂಶ್ರೀ ಅವರ ಈ ಪದ್ಯವನ್ನು ಯಾರು ತಾನೇ ಓದಿಲ್ಲ. ವಸಂತ ಬಂದನೆಂದರೆ ಮುಗಿದೇ ಹೋಯಿತು. ಚಳಿಯನ್ನು ಕೊಂದು ಸೆಖೆಯನ್ನು ಪ್ರತಿ ಕ್ಷಣವೂ ಹೆಚ್ಚು ಮಾಡುತ್ತಲೇ ಹೋಗುತ್ತಾನೆ.`ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ' ಕೇಳುವ ವ್ಯವಧಾನ ಇಂದು ಯಾರಿಗಿದೆ ಹೇಳಿ? ರಾಕೆಟ್ ಅನ್ನೂ ಮೀರಿಸುವಂತಹ ವೇಗದಲ್ಲಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ಸೆಕೆಯನ್ನು ಕಡಿಮೆ ಮಾಡಲು ಪರಿಸರವನ್ನು ಹಾಳು ಮಾಡುವ ಹವಾ ನಿಯಂತ್ರಣ ಸಾಧನದತ್ತಲೇ ಮೊದಲಿಗೆ ಎಲ್ಲಾ ಉಳ್ಳವರ ಲಕ್ಷ್ಯ ಹರಿಯುತ್ತದೆ. ಮಧ್ಯಮ ವರ್ಗದವರು ವಿದ್ಯುತ್ತನ್ನು ಭಾರಿ ಪ್ರಮಾಣದಲ್ಲಿ ಭಕ್ಷಿಸುವ ಪಂಕಗಳತ್ತ ತಿರುಗಿದರೆ, ಬಡವರು ಬಿದಿರಿನ ಬೀಸಣಿಗೆಯನ್ನು ವಿಧಿಯಿಲ್ಲದೆ ಕೈಗೆತ್ತಿಕೊಳ್ಳುತ್ತಾರೆ.ಆದರೆ ಈಗ ಈ ಏರುಗತಿಯ ತಾಪಕ್ಕೆ ಕಾರಣವಾಗುವ ಸೂರ್ಯನ ಶಕ್ತಿಯನ್ನೇ ಇಂಧನವಾಗಿ ಬಳಸಿಕೊಂಡು ಧಗೆಯನ್ನು ಕಡಿಮೆ ಮಾಡುವ ವಿಶಿಷ್ಟ ಬಗೆಯ ಅಂಗಿಯೊಂದನ್ನು ವಿಜ್ಞಾನಿಗಳು ರೂಪಿಸಿದ್ದಾರೆ!ಕೋಲ್ಕತ್ತದ ಬಂಗಾಳಿ ಎಂಜಿನಿಯರಿಂಗ್ ಹಾಗೂ ವಿಜ್ಞಾನ ವಿಶ್ವವಿದ್ಯಾನಿಲಯದ ಆ್ಯಶ್‌ಡನ್ ಪ್ರಶಸ್ತಿ ಪುರಸ್ಕೃತ ಸಂಶೋಧಕರಾದ ಸಂತಿಪಾದ ಗೌನ್‌ಚೌಧರಿ ಅವರು `ಸೋಲಾರ್ ಸಮ್ಮರ್ ಶರ್ಟ್' ಎಂಬ ವಿಶೇಷ ಅಂಗಿಯೊಂದನ್ನು ರೂಪಿಸಿದ್ದಾರೆ. ಅದು ಎಂತಹ ಸೆಖೆಯ ಕಾಲದಲ್ಲೂ ದೇಹವನ್ನು ತಂಪಾಗಿರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.ಅಂಗಿಯ ದಾರದ ನೂಲಿನಲ್ಲಿ ಇಲ್ಲವೇ ಕಿಸೆಯಲ್ಲಿ ಸಣ್ಣ ಸಣ್ಣ ಸೌರ ಸೆಲ್‌ಗಳನ್ನು ಹುದುಗಿಸಿಡುವುದರಲ್ಲಿ ತಾವು ಯಶಸ್ವಿಯಾಗಿರುವುದಾಗಿ `ದ್ಯುತಿ ವಿದ್ಯುತ್ ಜನಕ'(ಪೋಟೋ ವಯಲಿಟಿಕ್ ಸಿಸ್ಟಮ್ ಎಂಜಿನಿಯರಿಂಗ್ ಹಾಗೂ ಡಿಸೈನ್) ಕ್ಷೇತ್ರದ ವಿಶೇಷ ತಜ್ಞರಾದ ಸಂತಿಪಾದ ಗೌನ್‌ಚೌಧರಿ ಪ್ರತಿಪಾದಿಸಿದ್ದಾರೆ. ಅವರು ಹೇಳಿಕೆಯಂತೆ ಈ ಅಂಗಿಯಲ್ಲಿ  ಒಟ್ಟು ಎರಡು ಪದರಗಳು ಇವೆ. ದಾರದ ನೂಲಿನ ಸಂದುಗಳಲ್ಲಿ ಎರಡೂವರೆಯಿಂದ ಮೂರು ಇಂಚುಗಳಷ್ಟು ಗಾತ್ರದ ಸೌರ ಸೆಲ್‌ಗಳನ್ನು ಇಟ್ಟಿದ್ದು, ಇವುಗಳಿಂದ 400 ವ್ಯಾಟ್ ಸಾಮರ್ಥ್ಯದ ಶಕ್ತಿ ಉತ್ಪಾದನೆಯಾಗುತ್ತದೆ.ಈ ಶಕ್ತಿಯನ್ನು ಬಳಸಿಕೊಂಡು ಅಂಗಿಯ ಪದರದೊಳಗೆ ಇಡಲಾಗಿರುವ 2-4 ಸೂಕ್ಷ್ಮ ಫಂಕಗಳು ತಿರುಗುತ್ತವೆ. ಇವು ಕಂಪ್ಯೂಟರ್‌ನ `ಸಿಪಿಯು' ಒಳಗೆ ಅಳವಡಿಸಲಾಗಿರುವ ಫ್ಯಾನ್‌ಗಳಿಗಿಂತಲೂ ಅತಿ ಚಿಕ್ಕವು ಎಂದು ಅವರು ವಿವರಿಸುತ್ತಾರೆ.ಸುಮಾರು ಐದೂವರೆ ಅಡಿ ಎತ್ತರ ಇರುವ  ವ್ಯಕ್ತಿಯೊಬ್ಬನ ಮೈಮೇಲೆ ಬೀಳುವ ಸೂರ್ಯನ ಬೆಳಕು 400 ವ್ಯಾಟ್‌ನಷ್ಟು ಶಕ್ತಿಯನ್ನು ತಯಾರಿಸಲು ಶಕ್ತವಾಗಿರುತ್ತದೆ ಎಂಬುದನ್ನು ಈ ವಿಜ್ಞಾನಿಗಳ ತಂಡ ಅಧ್ಯಯನದ ಮೂಲಕ ಕಂಡುಕೊಂಡಿದೆ.`ಹಾಗೆಂದು ಈ ಅಂಗಿ ಧರಿಸಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕುಳಿತುಕೊಳ್ಳಬೇಕಾದ ಅವಶ್ಯಕತೆಯೇನೂ ಇಲ್ಲ' ಎನ್ನುವ ವಿಜ್ಞಾನಿಗಳು, ದಿನದಲ್ಲಿ ಇಂತಿಷ್ಟು ಸಮಯ ಈ ಅಂಗಿಯನ್ನು ಸುಮ್ಮನೆ ಬಿಸಿಲಿನಲ್ಲಿಟ್ಟರೆ ಸಾಕು ಇವುಗಳಲ್ಲಿನ ಸೆಲ್‌ಗಳು ಸೌರಶಕ್ತಿಯನ್ನು ಹೀರಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅಗತ್ಯಬಿದ್ದಾಗ ಬಳಸಿಕೊಳ್ಳುತ್ತವೆ ಎನ್ನುತ್ತಾರೆ.`ಅಯ್ಯೋ, ಸೌರಶಕ್ತಿಗೆ ಸಂಬಂಧಿಸಿದ್ದೆಲ್ಲಾ ದುಬಾರಿ. ಹಾಗೆಯೇ ಈ ಅಂಗಿಯೂ ಬೆಲೆಯಲ್ಲಿ ಸೂರ್ಯನಷ್ಟೇ ಎತ್ತರದಲ್ಲಿರುತ್ತದೇನೋ?' ಎಂದು ಮುಖ ಸೊಟ್ಟ ಮಾಡಬೇಕಿಲ್ಲ. ಏಕೆಂದರೆ ಒಂದು ಸಾಮಾನ್ಯ ಅಂಗಿಯ ಬೆಲೆ ರೂ. 1 ಸಾವಿರ ಇದ್ದರೆ, ಅದಕ್ಕೆ ಸೌರ ಸೆಲ್‌ಗಳನ್ನು ಅಳವಡಿಸಿದರೆ ಅದರ ಬೆಲೆ ಹೆಚ್ಚೆಂದರೆ ರೂ. 1,600 ಆಗುತ್ತದೆ ಅಷ್ಟೆ ಎನ್ನುತ್ತಾರೆ ಈ ವಿಶಿಷ್ಟ ಅಂಗಿಯನ್ನು ಅಭಿವೃದ್ಧಿಪಡಿಸಿದವರು!

ಇದನ್ನು ಧರಿಸಿದರೆ ಅಡ್ಡ ಪರಿಣಾಮಗಳುಂಟಾಗುತ್ತವೆ ಎಂಬ ಭಯ ಬೇಡ. ಇದರಿಂದ ಮಾನವ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎಂಬುದು ವಿಜ್ಞಾನಿಗಳ ಭರವಸೆಯ ನುಡಿ.ಈ ವಿಜ್ಞಾನಿಗಳ ತಂಡ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ತಮ್ಮ ವಿಶಿಷ್ಟ ಬಗೆಯ ಅಂಗಿ ಕುರಿತು ಈಗಾಗಲೇ ಮಾಹಿತಿ ನೀಡಿದೆ. ಜತೆಗೆ ಬಳಕೆ ಕುರಿತಂತೆ ಪ್ರಸ್ತಾಪವೊಂದನ್ನೂ ನೀಡಿದೆ.ಒಂದು ವೇಳೆ ಇದರ ತಯಾರಿಕೆ ಹಾಗೂ ಮಾರಾಟಕ್ಕೆ ಅನುಮತಿ ದೊರೆತರೆ ಇಂಧನ ಕೊರತೆ ಅನುಭವಿಸುತ್ತಿರುವ ಭಾರತದಂತಹ ರಾಷ್ಟ್ರಕ್ಕೆ ಇದು ಅತ್ಯಂತ ಸೂಕ್ತ ಎನಿಸುತ್ತದೆ. ಇಂಧನಕ್ಕಾಗಿ ಪರಮಾಣು ಸ್ಥಾವರಗಳನ್ನು ಸ್ಥಾಪಿಸುವುದಕ್ಕೆ ಹೆಚ್ಚು ಗಮನ ಹರಿಸುತ್ತಿರುವ  ಸರ್ಕಾರಗಳು ಇನ್ನಾದರೂ ಸೂರ್ಯನತ್ತ ಮುಖ ಮಾಡಲೇಬೇಕಿದೆ.ರಿಚಾರ್ಜ್

ಈ ಸೌರ ಅಂಗಿ ದೇಹವನ್ನು ತಂಪಾಗಿಡುವುದಕ್ಕೆ ಮಾತ್ರವೇ ಬಳಕೆಯಾಗುವುದಿಲ್ಲ. ಬದಲಿಗೆ ಇದರ ಮೂಲಕ ಮೊಬೈಲ್, ಟ್ಯಾಬ್ಲೆಟ್ ಲ್ಯಾಪ್‌ಟಾಪ್, ಎಂಪಿ 3 ಹಾಗೂ ಇನ್ನಿತರ ಡಿಜಿಟಲ್ ಉಪಕರಣಗಳನ್ನೂ ರೀಚಾರ್ಜ್ ಮಾಡಬಹುದು. ಬೇಸಿಗೆಯ ದಿನಗಳಲ್ಲಿ ಕೇವಲ ಮೂರ್ನಾಲ್ಕು ಗಂಟೆಗಳಷ್ಟೇ ವಿದ್ಯುತ್ತನ್ನು ಕಾಣುವ ನಮ್ಮ ಹಳ್ಳಿಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡುವುದಕ್ಕೂ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಈ ಸೌರ ಅಂಗಿ ಹೇಳಿ ಮಾಡಿಸಿದಂತಿದೆ.`ಆ್ಯಶ್‌ಡನ್' ಪ್ರಶಸ್ತಿ

ಪರಿಸರ ಸ್ನೇಹಿ ಇಂಧನ ಮೂಲಗಳ ಶೋಧ ಹಾಗೂ ಅಭಿವೃದ್ಧಿ ಪಡಿಸುವಿಕೆಗಾಗಿ ಪ್ರತಿ ವರ್ಷ ನೀಡಲಾಗುವ ಪ್ರಶಸ್ತಿಯೇ `ಆ್ಯಶ್‌ಡನ್'. ಲಂಡನ್ ಮೂಲದ `ಆ್ಯಶ್‌ಡನ್' ಎನ್ನುವ ದತ್ತಿ ಸಂಸ್ಥೆ ಈ ಪ್ರಶಸ್ತಿಯನ್ನು 2001ರಿಂದ ನೀಡುತ್ತಾ ಬಂದಿದೆ. ಪರಿಸರ ರಕ್ಷಣೆ, ಜೀವನ ಮಟ್ಟದ ಸುಧಾರಣೆ ಹಾಗೂ ಸುಸ್ಥಿರ ಇಂಧನ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದು ಇದರ ಮುಖ್ಯ ಉದ್ದೇಶ.ಸದ್ಯ ಸೌರ ಅಂಗಿಯನ್ನು ರೂಪಿಸಿರುವ ಸಂತಿಪಾದ ಗೌನ್‌ಚೌಧರಿ ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಪ್ರತಿಕ್ರಿಯಿಸಿ (+)