ತಂಬಾಕು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ

7

ತಂಬಾಕು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ

Published:
Updated:

ಮಂಗಳೂರು: ನಗರದ ಎ.ಜೆ. ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ತಂಬಾಕು ಮಧ್ಯಸ್ಥಿಕೆ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಲಾಯಿತು.ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣಾ ಸೌಲಭ್ಯಗಳು ಇತ್ತೀಚಿನ ದಿನಗಳಲ್ಲಿ ಸುಧಾರಣೆ ಕಂಡಿವೆ.
ವಿಷಯ ಪರಿಣತರು ಹೆಚ್ಚುತ್ತಿದ್ದಾರೆ. ಅಂತೆಯೇ ಅನೇಕ ರೋಗ ಹಾಗೂ ರೋಗಮೂಲ ಪತ್ತೆಗೂ ಗಮನ ಹರಿಸಿರುವುದು ರೋಗಿಗಳಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ತಂಬಾಕು ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆ ಆಗಿರುವುದು ಸ್ವಾಗತಾರ್ಹ ಎಂದರು. ಸಾಮಾಜಿಕ ಜವಾಬ್ದಾರಿ ಹಾಗೂ ನೈತಿಕ ಹೊಣೆಗಾರಿಕೆ ಇದ್ದರೆ ಮಾತ್ರ ವೈದ್ಯಕೀಯ ಕ್ಷೇತ್ರ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು ಹೇಳಿದರು.ತಂಬಾಕು ಅಥವಾ ಮದ್ಯ ಸೇವನೆ ಕೇವಲ ಚಟ ಮಾತ್ರ. ಚಟದಿಂದ ಬಿಡಿಸಿಕೊಳ್ಳುವುದೇ ಕಷ್ಟ. ಚಟ ಗೀಳಾಗಿ ಪರಿಣಮಿಸಿದಾಗ ಅದರಿಂದ ಆಚೆ ಬರುವುದು ಅಸಾಧ್ಯ. ಹಾಗಾಗಿ ತಂಬಾಕು ಅಥವಾ ಮದ್ಯ ಸೇವನೆಯನ್ನು ತ್ಯಜಿಸುವುದು ಅಸಾಧ್ಯ ಎಂದುಕೊಳ್ಳದೆ, ಏನು ಬೇಕಾದರೂ ಸಾಧ್ಯ ಎಂದು ತಿಳಿದುಕೊಳ್ಳಬೇಕು ಎಂದರು.ಚಲನಚಿತ್ರಗಳಲ್ಲಿ ನಟ-ನಟಿಯರು ತಂಬಾಕು ಸೇವನೆ ಮಾಡಬಾರದು. ಅವರು ಯುವಕರಿಗೆ ಮಾದರಿಯಾಗಿರುತ್ತಾರೆ. ಅದರ ಬದಲು ತಂಬಾಕು-ಮದ್ಯ ಸೇವನೆ ಬಿಡುವಂತೆ ಪ್ರಚಾರ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ದಂತವೈದ್ಯಕೀಯ ಕ್ಷೇತ್ರದ ಇತ್ತೀಚಿನ ಸುಧಾರಣೆ ಕುರಿತು ಡಾ.ವಿಶಾಲ್ ರಾವ್ ಹಾಗೂ ಡಾ.ರಜನಿ ಜಾರ್ಜ್ ಉಪನ್ಯಾಸ ನೀಡಿದರು.ಲಕ್ಷ್ಮಿ ಮೆಮೋರಿಯಲ್ ಟ್ರಸ್ಟ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಗೌರವ ಅತಿಥಿಯಾಗಿದ್ದರು. ಎ.ಜೆ. ದಂತವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಸುರೇಶ್‌ಚಂದ್ರ, ಭಾರತೀಯ ದಂತವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮುರಳಿ ಮೋಹನ್, ಗೌರವ ಕಾರ್ಯದರ್ಶಿ ಡಾ.ಕಾರ್ತಿಕ್ ಶೆಟ್ಟಿ, ಕಾಲೇಜಿನ ಸಮುದಾಯ ದಂತವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ.ವಿಜಯಾ ಹೆಗ್ಡೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry