ತಕ್ಷಣ ಬರ ಪರಿಹಾರ ನೀಡಲು ರೈತರ ಒತ್ತಾಯ

7

ತಕ್ಷಣ ಬರ ಪರಿಹಾರ ನೀಡಲು ರೈತರ ಒತ್ತಾಯ

Published:
Updated:

ಚಿಕ್ಕಬಳ್ಳಾಪುರ: ಬರ ಪರಿಹಾರ ಧನವನ್ನು ಕೂಡಲೇ ರೈತರಿಗೆ ನೀಡುವುದು, ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ಸದಸ್ಯರು ಶನಿವಾರ ಕಾಲ್ನಡಿಗೆ ಜಾಥಾ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಕೈಗೊಂಡ ಪ್ರತಿಭಟನಾಕಾರರು, `ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಪಾರು ಮಾಡಬೇಕು~ ಎಂದು ಒತ್ತಾಯಿಸಿದರು.ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, `ಮಳೆಯನ್ನು ನಂಬಿಕೊಂಡೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಮಳೆಯೂ ಇಲ್ಲದೆ, ಅತ್ತ ಬರ ಪರಿಹಾರವೂ ಇಲ್ಲದೆ ದಿಕ್ಕು ಕಾಣದ ಸ್ಥಿತಿಗೆ ತಲುಪಿದ್ದಾರೆ. ಪರಿಹಾರ ಧನ ನೀಡುವ ಬಗ್ಗೆ ಸರ್ಕಾರ ಭರವಸೆ ನೀಡುವುದರ ಬದಲು ಪರಿಹಾರ ಧನ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.`ನೀರಾವರಿ ಸೌಲಭ್ಯವಿಲ್ಲದೆ ಮಳೆಯನ್ನೇ ನೆಚ್ಚಿಕೊಂಡು ರೈತರು ರಾಗಿ, ಮುಸುಕಿನ ಜೋಳ, ನೆಲಗಡಲೆ, ತೊಗರಿ ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಸಮರ್ಪಕವಾಗಿ ಮಳೆಯಾಗಿದ್ದರೆ, ತೊಂದರೆ ಎದುರಾಗುತ್ತಿರಲಿಲ್ಲ. ಅತ್ತ ಮಳೆಯೂ ಇಲ್ಲದೆ, ಇತ್ತ ಬೆಳೆಯೂ ಇಲ್ಲದೇ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿರುವ ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು~ ಎಂದರು.ರೈತ ಮುಖಂಡರಾದ ಬಿ.ಎಚ್.ನರಸಿಂಹಪ್ಪ, ಎಸ್.ರಾಜಪ್ಪ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಯಲುವಹಳ್ಳಿ ಸೊಣ್ಣೇಗೌಡ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಅವರು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry